ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ | ತಾಲ್ಲೂಕು ಆಸ್ಪತ್ರೆಗೆ ಭೇಟಿ: ಪರಿಶೀಲನೆ

ಬಸವಕಲ್ಯಾಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಆ್ಯಂಟನಿ ಜಾನ್ ಪರಿಶೀಲನೆ
Published 16 ಮೇ 2024, 15:18 IST
Last Updated 16 ಮೇ 2024, 15:18 IST
ಅಕ್ಷರ ಗಾತ್ರ

ಬಸವಕಲ್ಯಾಣ: ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆ್ಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದಕ್ಕೆ ಗುರುವಾರ ಇಲ್ಲಿಗೆ ಬಂದಿದ್ದ ಲೋಕಾಯುಕ್ತ ಪೊಲೀಸರು ನಂತರ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ಊಟದ ವ್ಯವಸ್ಥೆ, ಹಾಸಿಗೆಗಳ ಕೊಠಡಿ, ಸ್ಕ್ಯಾನಿಂಗ್ ಮಷೀನು, ಹೊರ ಮತ್ತು ಒಳ ರೋಗಿಗಳಿಗೆ ದೊರಕುವ ಸೌಲಭ್ಯಗಳು ಇತ್ಯಾದಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲ ಸಿಬ್ಬಂದಿಯವರು ಗೈರಿಗೆ ಕಾರಣವೇನು ಎಂದು ಪ್ರಶ್ನಿಸಿದರು. ಒಟ್ಟು ಸಿಬ್ಬಂದಿಗಳ ವಿವರ ಸಹ ಪಡೆದುಕೊಂಡರು.

’ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು. ಸಿಬ್ಬಂದಿಯವರು ನಿಯಮಿತವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಸ್ಪತ್ರೆ ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರೆ ಅವರಿಗೆ ಸೂಚಿಸಿದರು.

ಲೋಕಾಯುಕ್ತ ಬೀದರ್ ಡಿವೈಎಸ್ಪಿ ಎನ್.ಎಂ.ಓಲೇಕಾರ್, ಇತರೆ ಅಧಿಕಾರಿಗಳಾದ ಅನಿಲಕುಮಾರ, ಪ್ರದೀಪ ಕೊಳ್ಳಾ, ಬಾಬಾಸಾಹೇಬ್ ಪಾಟೀಲ, ಸಂತೋಷ ರಾಠೋಡ, ರಾಜೀವ ಮತ್ತಿತರರು ಇದ್ದರು.

’ಕಚೇರಿಗಳಲ್ಲಿ ಭ್ರಷ್ಟಾಚಾರ ಜಾಗೃತಿಯ ಫಲಕವಿರಲಿ’

’ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಜಾಗೃತಿಯ ಫಲಕ ಅಳವಡಿಸಲು ಸೂಚಿಸಲಾಗುತ್ತದೆ' ಎಂದು ಲೋಕಾಯುಕ್ತ ಡಿವೈಎಸ್ಪಿ ಆ್ಯಂಟನಿ ಜಾನ್ ಹೇಳಿದ್ದಾರೆ.

ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರಿ ಇಲಾಖೆಗಳ ಕಚೇರಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ದೊಡ್ಡದಾಗಿ ಫಲಕ ಅಳವಡಿಸಿ ಅದರಲ್ಲಿ ಲೋಕಾಯುಕ್ತರ ಸಂಪರ್ಕ ಸಂಖ್ಯೆ ಬರೆಸಬೇಕು. ಕಚೇರಿಗಳಲ್ಲಿ ಸರ್ಕಾರದ ಸೌಲಭ್ಯಗಳಿಗಾಗಿ ಲಂಚ ಕೇಳಿದಾಗ ಜನರು ತಕ್ಷಣ ಈ ಸಂಖ್ಯೆಗಳಿಗೆ ಸಂಪರ್ಕಿಸುವಂತಾಗಬೇಕು' ಎಂದರು.

`ಬರೀ ಹಣ ಕೇಳುವುದಷ್ಟೇ ಅಲ್ಲ; ಸರ್ಕಾರದ ಯೋಜನೆಗಳ ಅನುದಾನದ ದುರ್ಬಳಕೆ, ಸರ್ಕಾರಿ ಜಮೀನು ಕಬಳಿಕೆ ಹಾಗೂ ಇತರೆ ಅವ್ಯವಹಾರದ ಬಗ್ಗೆಯೂ ಲೋಕಾಯುಕ್ತರ ಗಮನಕ್ಕೆ ತಂದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುತ್ತದೆ. ಲೋಕಾಯುಕ್ತರಿಂದ ಆಗಾಗ ಸರ್ಕಾರಿ ಕಚೇರಿಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ತಾಲ್ಲೂಕಿನಲ್ಲಿನ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 7 ಅಹವಾಲುಗಳು ಸಲ್ಲಿಕೆಯಾಗಿವೆ' ಎಂದೂ ಅವರು ತಿಳಿಸಿದರು. ಲೋಕಾಯುಕ್ತ ಬೀದರ್ ಡಿವೈಎಸ್ಪಿ ಎನ್.ಎಂ.ಓಲೇಕಾರ್ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಗೆ ಗುರುವಾರ ಲೋಕಾಯುಕ್ತ ಡಿವೈಎಸ್ಪಿ ಆ್ಯಂಟನಿ ಜಾನ್ ಬೀದರ್ ಡಿವೈಎಸ್ಪಿ ಎನ್.ಎಂ.ಓಲೇಕಾರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಆಸ್ಪತ್ರೆ ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ ಇದ್ದರು
ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಗೆ ಗುರುವಾರ ಲೋಕಾಯುಕ್ತ ಡಿವೈಎಸ್ಪಿ ಆ್ಯಂಟನಿ ಜಾನ್ ಬೀದರ್ ಡಿವೈಎಸ್ಪಿ ಎನ್.ಎಂ.ಓಲೇಕಾರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಆಸ್ಪತ್ರೆ ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT