ಬೀದರ್: ಸೂಕ್ತ ನಿರ್ವಹಣೆ ಮಾಡದ ಕಾರಣ ಇಲ್ಲಿನ ಶಿವನಗರ ಸಮೀಪದ ಅತಿದೊಡ್ಡ ಫುಟ್‌ಪಾತ್ ಕಣ್ಣೆದುರೇ ಹಾಳಾಗುತ್ತಿದೆ.
ಇಡೀ ನಗರದಲ್ಲಿ ಅತಿದೊಡ್ಡ ಪಾದಚಾರಿ ಮಾರ್ಗ ಎಂಬ ಹೆಗ್ಗಳಿಕೆ ಅದಕ್ಕಿದೆ. ಆದರೆ, ಇದನ್ನು ನಿರ್ಮಿಸಿದ ನಂತರ ನಗರಸಭೆ ಇದರತ್ತ ತಿರುಗಿಯೂ ನೋಡಿಲ್ಲ. ಇದರ ಪರಿಣಾಮ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
ವಿಶಾಲವಾದ ಫುಟ್‌ಪಾತ್ ಮೇಲೆ ಮಜಬೂತಾದ ಕಲ್ಲುಗಳನ್ನು ಹಾಕಲಾಗಿದೆ. ಆದರೆ, ಈಗ ಅವುಗಳೆಲ್ಲ ಹಾಳಾಗಿದ್ದು, ಹಲವೆಡೆ ಮೇಲಕ್ಕೆದ್ದಿವೆ. ಒಂದು ಬದಿಯಲ್ಲಿ ಪಾದಚಾರಿ ಮಾರ್ಗ ಸಂಪೂರ್ಣ ಕುಸಿದು ಹೋಗಿದೆ. ಕಲ್ಲುಗಳೆಲ್ಲ ಬಿದ್ದು ಹೋಗಿವೆ. ಗುಂಡಿ ಸ್ವರೂಪ ಪಡೆದಿದ್ದು, ಅದರಲ್ಲಿ ಸ್ಥಳೀಯ ವ್ಯಾಪಾರಿಗಳು, ವಾಯು ವಿಹಾರಿಗಳು ತ್ಯಾಜ್ಯ ತಂದು ಹಾಕುತ್ತಿದ್ದಾರೆ. ಇದರಿಂದಾಗಿ ದುರ್ವಾಸನೆಗೆ ಕಾರಣವಾಗಿದೆ.
ನಗರದ ತಾಯಿ–ಮಗುವಿನ ವೃತ್ತದಿಂದ ಬರೀದ್ ಷಾಹಿ ಎದುರಿನ ಬೀದರ್–ಹುಮನಾಬಾದ್ ಮುಖ್ಯರಸ್ತೆಯ ವರೆಗೆ ಇದೇ ಪರಿಸ್ಥಿತಿ ಇದೆ. ಆದರೆ, ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅವ್ಯವಸ್ಥೆಯಲ್ಲೇ ಜನ ವಾಯು ವಿಹಾರ ಮಾಡುತ್ತಿದ್ದಾರೆ. ಇದಕ್ಕೆ ಹೊಂದಿಕೊಂಡಂತೆ ಪ್ರತಿಷ್ಠಿತರು ವಾಸವಿರುವ ಮನೆಗಳಿವೆ. ಅವರು ಅದರ ಬಗ್ಗೆ ಧ್ವನಿ ಎತ್ತಿ ನಾಗರಿಕ ಕರ್ತವ್ಯ ಪ್ರಜ್ಞೆ ತೋರಿಲ್ಲ.
2008ರಿಂದ 2010ರ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ನಗರದಲ್ಲಿ ದೊಡ್ಡ ಮಟ್ಟದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ಸಂದರ್ಭದಲ್ಲಿ ವಿಶಾಲವಾದ ರಸ್ತೆಗಳು, ರಿಂಗ್‌ರೋಡ್ ನಿರ್ಮಿಸಲಾಗಿತ್ತು. ಅದೇ ಸಂದರ್ಭದಲ್ಲಿ ತಾಯಿ ಮಗುವಿನ ವೃತ್ತದಿಂದ ಬರೀದ್ ಷಾಹಿ ಉದ್ಯಾನದ ವರೆಗೆ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸಲಾಗಿತ್ತು. ಬಹಮನಿ ಕಾಲದ ಸ್ಮಾರಕಗಳ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ, ಅದಕ್ಕೆ ಹೊಂದಿಕೊಂಡಂತೆ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಅಲ್ಲಲ್ಲಿ ಜನ ಕೂರುವುದಕ್ಕೆ ಸಿಮೆಂಟ್ ಆಸನಗಳಿಗೂ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20 ಅಡಿಗೂ ಹೆಚ್ಚು ವಿಶಾಲವಾದ ಫುಟ್‌ಪಾತ್ ಅಭಿವೃದ್ಧಿ ಪಡಿಸಿರುವುದನ್ನು ನೋಡಿ ಜನ ಅಚ್ಚರಿ ಪಟ್ಟಿದ್ದರು.
ಬಳಿಕ ಆದರ್ಶ ಕಾಲೊನಿ, ಶಿವನಗರ, ಗುರುನಗರ, ದೇವಿ ಕಾಲೊನಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯು ವಿಹಾರದ ನೆಚ್ಚಿನ ತಾಣವಾಗಿ ಮಾರ್ಪಟ್ಟಿತು. ಈಗಲೂ ಅನೇಕ ಜನ ವಾಯುವಿಹಾರ ಮಾಡುತ್ತಾರೆ. ಹಿರಿಯ ನಾಗರಿಕರು ಕುಳಿತು ಚರ್ಚಿಸುತ್ತಾರೆ.
ಅತಿ ಹೆಚ್ಚು ಜನ ಓಡಾಡುತ್ತಿರುವ ಫುಟ್‌ಪಾತ್ ಕಾಲಕಾಲಕ್ಕೆ ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಕೆಲಸವಾಗಿಲ್ಲ. ಇರುವುದನ್ನೇ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಸಂಬಂಧಿಸಿದವರು ಈ ಕಡೆ ಗಮನ ಹರಿಸಿ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸಂಬಂಧ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಈ ಹಿಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ಬಹಳ ಮುತುವರ್ಜಿ ವಹಿಸಿ ನಿರ್ಮಿಸಿದ ಫುಟ್‌ಪಾತ್ ಸೂಕ್ತ ನಿರ್ವಹಣೆ ಮಾಡಿ ರಕ್ಷಿಸಬೇಕು.–ವೈಜನಾಥ ಪಾಟೀಲ ಸ್ಥಳೀಯ ನಿವಾಸಿ
ನಗರದಲ್ಲಿ ಹಲವೆಡೆ ಫುಟ್‌ಪಾತ್‌ಗಳು ಅತಿಕ್ರಮಣವಾಗಿವೆ. ಶಿವನಗರ ಸೇರಿದಂತೆ ಕೆಲವೆಡೆ ಅತಿಕ್ರಮವಾಗದಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ.–ಮನೋಹರ ನಾಗರಾಜ ಸ್ಥಳೀಯ ನಿವಾಸಿ
ವೇಶ್ಯಾವಾಟಿಕೆ ಅಡ್ಡೆ ಗ್ರಿಲ್ ಕಳವು ಬೀದರ್‌ನ ಶಿವನಗರ ಸಮೀಪದ ಕ್ಲಾಸಿಕ್ ಧಾಬಾ ಎದುರಿನ ಬರೀದ್ ಷಾಹಿ ಗುಮ್ಮಟ ಇರುವ ಪರಿಸರ ಗಿಡ ಮರಗಳಿಂದ ಕೂಡಿದ್ದು ಅದೀಗ ವೇಶ್ಯಾವಾಟಿಕೆ ಅಡ್ಡೆಯಾಗಿ ಬದಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಸ್ಮಾರಕಗಳ ಸುತ್ತ ನಿರ್ಮಿಸಿದ ಕಾಂಪೌಂಡ್ ಗ್ರಿಲ್‌ಗಳನ್ನು ಕಳವು ಮಾಡಲಾಗಿದೆ. ಹಲವೆಡೆ ಗೋಡೆ ಕೆಡವಿ ಒಳಗೆ ಹೋಗಿ ಬರಲು ಮಾರ್ಗ ಮಾಡಿಕೊಂಡಿದ್ದಾರೆ. ಯಾರು ಕೂಡ ಅಲ್ಲಿ ಪಹರೆಗೆ ಇಲ್ಲದಿರುವ ಕಾರಣ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ‘ಹಿಂದೆ ರಾತ್ರಿ ವೇಳೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ರಾಜಾರೋಷವಾಗಿ ಹಗಲಿನಲ್ಲೇ ನಡೆಯುತ್ತಿದೆ. ವಾಯುವಿಹಾರ ಮಾಡುವ ಸ್ಥಳಗಳಲ್ಲೂ ಈ ರೀತಿಯಾದರೆ ಇನ್ನೆಲ್ಲಿ ಹೋಗಬೇಕು’ ಎಂದು ಸ್ಥಳೀಯ ನಿವಾಸಿ ರಾಜಶೇಖರ ಪ್ರಶ್ನಿಸಿದರು. ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್ ದೇಸಾಯಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ಕಾಂಪೌಂಡ್ ಗ್ರಿಲ್ ಕಳುವಾದ ಕುರಿತು ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಈ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯ ಹೈಕೋರ್ಟ್‌ನಲ್ಲಿ ಇರುವುದರಿಂದ ಸದ್ಯ ಗೋಡೆ ನಿರ್ಮಿಸಲು ಆಗುತ್ತಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.