ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಸಂಪತ್ತು ಉಳಿಸಿ–ಬೆಳೆಸಿ: ಸಚಿವ ಈಶ್ವರ ಖಂಡ್ರೆ

ಲಕ್ಷ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
Published 10 ಜುಲೈ 2024, 12:23 IST
Last Updated 10 ಜುಲೈ 2024, 12:23 IST
ಅಕ್ಷರ ಗಾತ್ರ

ಬೀದರ್‌: ‘ಅರಣ್ಯ ಸಂಪತ್ತು ಉಳಿಸಿ–ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು, ಪೋಷಿಸಿ ಬೆಳೆಸಿದರೆ 15ರಿಂದ 20 ವರ್ಷಗಳಲ್ಲಿ ಜಿಲ್ಲೆಯ ಹಸಿರಿನ ಪ್ರಮಾಣ ಹೆಚ್ಚಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ನಗರದ ನೌಬಾದ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಅಭಿಯಾನ ಹಾಗೂ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಮಾನದಂಡದ ಪ್ರಕಾರ ಶೇ 33ರಷ್ಟು ಅರಣ್ಯ ಭೂಮಿ ಮೇಲೆ ಇರಬೇಕು. ಆದರೆ, ಅಷ್ಟಿಲ್ಲ. ರಾಜ್ಯದಲ್ಲಿ ಶೇ 21ರಿಂದ 22ರಷ್ಟು ಅರಣ್ಯ ಪ್ರದೇಶ ಇದೆ. ಬೀದರ್‌ ಜಿಲ್ಲೆಯಲ್ಲಿ ಶೇ 7ರಷ್ಟಿದೆ. ರಾಜ್ಯದಲ್ಲಿ ಶೇ 33ಕ್ಕೆ ಹೆಚ್ಚಿಸುವ ಗುರಿ ಇದೆ. ಬೀದರ್‌ ಜಿಲ್ಲೆಯ ಜನಸಂಖ್ಯೆ 20 ಲಕ್ಷ ಇದೆ. ಪ್ರತಿ ವರ್ಷ ಒಬ್ಬರು ಒಂದು ಗಿಡ ನೆಟ್ಟು, ಬೆಳೆಸಿದರೆ 15ರಿಂದ 20 ವರ್ಷಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ 25ರಿಂದ 30 ಆಗುತ್ತದೆ. ಹಸಿರಿನ ಹೊದಿಕೆ ಆಗುತ್ತದೆ ಎಂದರು.

ಹೋದ ವರ್ಷ ಜಿಲ್ಲೆಯಲ್ಲಿ 15 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಈ ಸಲ ಜಿಲ್ಲೆಯಲ್ಲಿ 25 ಲಕ್ಷ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ. ಐದು ಲಕ್ಷ ಸಸಿಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆಸುತ್ತಿದ್ದೇವೆ ಎಂದು ಹೇಳಿದರು.

ಮನುಷ್ಯ ಸ್ವಾರ್ಥಿ ಆಗಿದ್ದಾನೆ. ಎಲ್ಲರಿಗೂ ಐಷಾರಾಮಿ ವಸ್ತುಗಳು ಬೇಕು. ಕೈಗಾರಿಕೆಗಳ ವಿಷಕಾರಕ ತ್ಯಾಜ್ಯ, ಏಕಬಳಕೆ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಭೂಮಿಯನ್ನು ಸಂರಕ್ಷಿಸುವ ‘ಓಜೋನ್‌’ ದುರ್ಬಲವಾಗುತ್ತಿದೆ. ಜಗತ್ತಿನಲ್ಲಿ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಅದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಜಗತ್ತಿನ ಅರ್ಧ ಜನಸಂಖ್ಯೆ ಪರಿಸರ ಮಾಲಿನ್ಯದಿಂದ ತತ್ತರಿಸಿ ಹೋಗುತ್ತಿದೆ. ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಈ ವರ್ಷ ನವದೆಹಲಿಯ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ಆಗಿದ್ದರಿಂದ ಅನೇಕರು ಸಾವನ್ನಪ್ಪಿದರು. ಇದೇ ರೀತಿ ಮುಂದುವರೆದರೆ ಮನುಷ್ಯ ಜೀವಂತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಭೂಮಿ ಇರುವುದು ಒಂದೇ. ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ. ಪರಿಸರ, ಅರಣ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳಿವಳಿಕೆ ಬರಬೇಕು. ಪರಿಸರ ರಕ್ಷಣೆ, ಸುಸ್ಥಿರ ಅಭಿವೃದ್ಧಿ ಜಗತ್ತಿನ ಎದುರಿಗಿರುವ ದೊಡ್ಡ ಸವಾಲು ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್‌.ಎಮ್‌. ಮಾತನಾಡಿ, ‘ಲಕ್ಷ ವೃಕ್ಷ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಒಂದೇ ದಿನ ಒಂದು ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ’ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಶರಣು ಸಲಗರ್‌, ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ಭೀಮರಾವ ಬಿ.ಪಾಟೀಲ, ಬೀದರ್‌ ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್‌ ದೀಕ್ಷಿತ್‌, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪನವಾರ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಹಾಜರಿದ್ದರು. ವನಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT