ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮೆಹಕರ್ ಪೊಲೀಸ್ ಠಾಣೆ ಸೀಲ್‌ಡೌನ್‌

ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 36 ಜನರಿಗೆ ಕೋವಿಡ್ ಸೋಂಕು
Last Updated 29 ಜೂನ್ 2020, 14:00 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಸೋಮವಾರ ಒಟ್ಟು 36 ಜನರಿಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಪೊಲೀಸರಿಗೂ ಸೋಂಕು ತಗುಲಿರುವುದು ದೃಢಪಟ್ಟ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಮೆಹಕರ್ ಪೊಲೀಸ್ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮೆಹಕರ್ ಠಾಣೆಯ ಎಎಸ್ಐ ಹಾಗೂ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸೋಂಕು ಇರುವುದು ದೃಢಪಟ್ಟ ನಂತರ ಪೊಲೀಸ್ ಠಾಣೆಯ 25 ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸಾರ್ವಜನಿಕರು ಅಹವಾಲು ಹಾಗೂ ದೂರುಗಳು ಇದ್ದಲ್ಲಿ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

ಮೆಹಕರ್‌ ಸೀಲ್‌ಡೌನ್‌ ಆಗುತ್ತಿರುವ ಮೂರನೇ ಪೊಲೀಸ್‌ ಠಾಣೆ. ತಿಂಗಳ ಹಿಂದೆ ಚಿಟಗುಪ್ಪ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿತ್ತು. ಭಾನುವಾರ ಬೀದರ್‌ನ ಗಾಂಧಿ ಗಂಜ್ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ 24 ಪುರುಷರು, ಎಂಟು ಮಹಿಳೆಯರು, ಮೂವರು ಬಾಲಕರು ಹಾಗೂ ಒಬ್ಬ ಬಾಲಕಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಚಿಟಗುಪ್ಪದ 55, 62 ಹಾಗೂ 25 ವರ್ಷದ ಮೂವರು ಮಹಿಳೆಯರು, 74 ವರ್ಷದ ಪುರುಷ, ಐದು ಹಾಗೂ ಮೂರು ವರ್ಷದ ಇಬ್ಬರು ಬಾಲಕರಿಗೆ ಸೋಂಕು ತಗುಲಿದೆ.

ಬೀದರ್‌ನ ಕೆಇಬಿ ರಸ್ತೆಯ ಖಾಸಗಿ ಆಸ್ಪತ್ರೆ, ಶಿವನಗರ, ನೌಬಾದ್ ಕೆಎಸ್ಆರ್‌ಪಿಯ ಒಬ್ಬ ಸಿಬ್ಬಂದಿ, ಬ್ಯಾಂಕ್ ಕಾಲೊನಿಯ ಇಬ್ಬರು, ಬೀದರ್ ತಾಲ್ಲೂಕಿನ ಗುಮ್ಮಾ , ಶಮಶೇರ್‌ನಗರ, ಭಾಲ್ಕಿ, ಭಾಲ್ಕಿ ತಾಲ್ಲೂಕಿನ ಜ್ಯಾಂತಿಯ ಒಬ್ಬರಿರು, ಕಳಸದಾಳದ ಇಬ್ಬರು, ಬಸವಕಲ್ಯಾಣದ ಮೂವರು, ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯ ಒಬ್ಬರು, ಕಮಲನಗರ ತಾಲ್ಲೂಕಿನ ಚಾಂದೂರಿಯ ಇಬ್ಬರು, ಬೇಡಕುಂದಾ, ಬಳತ ಗ್ರಾಮದ ಇಬ್ಬರು ಹಾಗೂ ಭಾಸ್ಕರ್‌ನಗರದ ಇಬ್ಬರಿಗೆ ಸೋಂಕು ತಗುಲಿದೆ.

ಸೋಮವಾರ ಬ್ರಿಮ್ಸ್ ವಿಶೇಷ ಚಿಕಿತ್ಸಾ ಘಟಕದಿಂದ ಗುಣಮುಖರಾಗಿ 10 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 466 ಮಂದಿ ಬಿಡುಗಡೆ ಹೊಂದಿದ್ದಾರೆ. ಗಂಟಲು ದ್ರವ ಮಾದರಿ ಪಡೆದ 884 ಜನರ ವೈದ್ಯಕೀಯ ವರದಿ ಬರಬೇಕಿದೆ. ಜಿಲ್ಲೆಯ 192 ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ 175 ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT