ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ವಾಹನಗಳಿಂದ ಭವಾನಿ ಮಂದಿರ ಪ್ರದಕ್ಷಿಣೆ

Last Updated 17 ಏಪ್ರಿಲ್ 2022, 3:24 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಬೆಟಬಾಲ್ಕುಂದಾ ರಸ್ತೆಯಲ್ಲಿನ ಮಾಲ್ಗುಡಿ ಭವಾನಿ ದೇವಸ್ಥಾನವು ವಾಹನಗಳು ಪ್ರದಕ್ಷಿಣೆ ಹಾಕುವ ಅಪರೂಪದ ಶ್ರದ್ಧಾ ಕೇಂದ್ರವಾಗಿದೆ. ಅಲ್ಲಿ ದೊಡ್ಡ ಆಲದ ಮರ ಆವರಿಸಿರುವ ಕಾರಣ ತಂಪು ವಾತಾವರಣವಿದೆ.

ಬಸವಕಲ್ಯಾಣ ಹಾಗೂ ಬೆಟಬಾಲ್ಕುಂದಾ ಗ್ರಾಮದ ಮಧ್ಯದಲ್ಲಿ ರಾಜ್ಯ ಹೆದ್ದಾರಿಯಲ್ಲಿ ದತ್ತಾತ್ರೇಯ ದೇವಸ್ಥಾನದ ಎದುರು ಈ ಸ್ಥಳವಿದೆ. ಈ ರಸ್ತೆಯಿಂದ ಬಸವಕಲ್ಯಾಣ ಮತ್ತು ಹುಲಸೂರ ಕಡೆ ಹೋಗುವ ಪ್ರತಿ ವಾಹನವು ರಸ್ತೆಯ ಪಕ್ಕದಲ್ಲಿನ ಈ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಮುಂದೆ ಸಾಗುತ್ತವೆ. ಹಿಂದಿನ ಕಾಲದಿಂದಲೂ ಈ ಸಂಪ್ರದಾಯ ಬೆಳೆದು ಬಂದಿದ್ದು ದೇವಸ್ಥಾನಕ್ಕೆ ಸುತ್ತು ಹಾಕಿದರೆ ಕೈಗೊಂಡ ಕೆಲಸ ಸುಲಭವಾಗಿ ಸಾಗುತ್ತದೆ ಎಂಬ ಭಾವನೆ ಜನರಲ್ಲಿ ಇದೆ.

5 ಗುಂಟೆಯಲ್ಲಿರುವ ನೂರಾರು ವರ್ಷಗಳ ದೊಡ್ಡ ಆಲದ ಮರ ದೂರ ದಿಂದಲೇ ಗಮನ ಸೆಳೆಯುತ್ತದೆ. ಇದರ ಕೆಳಗಡೆ ಇರುವ ಚಿಕ್ಕ ಆಕಾರದ ಭವಾನಿ ದೇವಸ್ಥಾನವು ಪುರಾತನವಾದದ್ದು. ಗರ್ಭಗೃಹ ಹಾಗೂ ಅದರ ದ್ವಾರವು ಕೆತ್ತನೆಯ ಕಲ್ಲುಗಳದ್ದಾಗಿದೆ. ಬಾಗಿಲಿನಲ್ಲಿ ಕೆತ್ತಿರುವ ಕಲಾಕೃತಿಗಳು ಚಾಲುಕ್ಯರ ಕಾಲದ್ದು ಎಂಬ ಐತಿಹ್ಯ ಇದೆ.

ಹಳೆಯ ಕಾಲದ ದೊಡ್ಡ ಬಾವಿ: ದೇವಸ್ಥಾನದ ಎದುರಲ್ಲಿಯೇ ಹತ್ತು ಹೆಜ್ಜೆ ಮುಂದಕ್ಕೆ ಹೋದರೆ ಹಳೆಯ ಕಾಲದ ದೊಡ್ಡ ಬಾವಿಯಿದೆ. ಕಪ್ಪನೆಯ ಕಲ್ಲುಗಳಿಂದ ಕಟ್ಟಿರುವ ಬಾವಿಯು 40 ಅಡಿ ಆಳವಿದೆ. ಒಳಗೆ ಇಳಿಯಲು 35 ಮೆಟ್ಟಿಲುಗಳಿವೆ.

‘ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಅಥವಾ ಕಾಲ್ನಡಿಗೆಯಲ್ಲಿ ಈ ಮಾರ್ಗದಲ್ಲಿ ಹೋಗುವವರು ಇಲ್ಲಿನ ದೇವಿಯ ದರ್ಶನ ಪಡೆದು, ಬಾವಿಯ ನೀರು ಕುಡಿದು, ಆಲದ ಮರದ ಕೆಳಗೆ ಸ್ವಲ್ಪ ಹೊತ್ತು ವಿಶ್ರಮಿಸುತ್ತಿದ್ದರು. ಈಗಲೂ ಅನೇಕರು ಈ ಮರದ ಕೆಳಗೆ ಕೂರುತ್ತಾರೆ. ಈಗ ಎಲ್ಲರೂ ವಾಹನಗಳನ್ನು ಹೊಂದಿರುವುದರಿಂದ ವಾಹನಗಳಿಂದ ಕೆಳಗಿಳಿಯದೆ ಪೂರ್ವಾಭಿಮುಖ ಆಗಿರುವ ದೇಗುಲದ ಎದುರಿನಿಂದ ವಾಹನಗಳನ್ನು ಒಯ್ದು ದರ್ಶನ ಪಡೆಯುತ್ತಾರೆ' ಎಂದು ಶರಣಪ್ಪ ಕರಮುಗಲೆ ತಿಳಿಸುತ್ತಾರೆ.

‘ದೇವಸ್ಥಾನವು ನಮ್ಮ ಜಮೀನಿನಲ್ಲೇ ಇದೆ. ವರ್ಷಕ್ಕೊಮ್ಮೆ ಗೌರಿ ಹುಣ್ಣಿಮೆ ಜಾತ್ರೆ ಸಂಭ್ರಮದಿಂದ ನಡೆಯುತ್ತದೆ. ಮೊದಲು ಈ ಜಾತ್ರೆಗೆ ಭಕ್ತರು ಬುಟ್ಟಿಯಲ್ಲಿ ಊಟ ತೆಗೆದುಕೊಂಡು ಬರುತ್ತಿದ್ದರು. ಈಗ ಆ ಸಂಪ್ರದಾಯ ಇಲ್ಲ. ಮೊದಲು ಇಲ್ಲಿ ಬರೀ ದೇವಸ್ಥಾನ ಇತ್ತು. ಈಗ ಸುತ್ತಮುತ್ತಲೂ ಚಹಾ ಹೋಟೆಲ್ ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಯೂ ತಲೆ ಎತ್ತಿವೆ. ಈ ದೇವಸ್ಥಾನವು ಮೊದಲಿನಿಂದಲೂ ಪ್ರಸಿದ್ಧವಾಗಿದೆ. ಅದಕ್ಕಾಗಿಯೇ ರಾಜರ ಕಾಲದಲ್ಲಿ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎದುರಿಗೆ ಬಾವಿ ಕಟ್ಟಿಸಲಾಗಿದೆ' ಎಂದು ದೇವಸ್ಥಾನದ ಅರ್ಚಕ ಓಂಕಾರ ಬಿರಾದಾರ ತಿಳಿಸಿದ್ದಾರೆ.

***

ರಸ್ತೆಯಲ್ಲಿ ಸಾಗುವ ಪ್ರತಿಯೊಬ್ಬರೂ ದೇವಿಗೆ ನಮಿಸುವುದಲ್ಲದೆ ಕೆಲವು ಭಕ್ತರು ನೈವೇದ್ಯ ಅರ್ಪಣೆಗೆ ಬರುತ್ತಾರೆ. ಗೌರಿ ಹುಣ್ಣಿಮೆಗೆ ಜಾತ್ರೆ ನಡೆಯುತ್ತದೆ

ಓಂಕಾರ ಬಿರಾದಾರ, ದೇವಸ್ಥಾನದ ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT