ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಈಶಾನ್ಯ ಪದವೀಧರ ಕ್ಷೇತ್ರ: ಶೇ69.75 ಮತದಾನ; ಮತಗಟ್ಟೆ ಎದುರು ಹಣ ಹಂಚಿಕೆ

Published 3 ಜೂನ್ 2024, 13:07 IST
Last Updated 3 ಜೂನ್ 2024, 13:07 IST
ಅಕ್ಷರ ಗಾತ್ರ

ಬೀದರ್‌: ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ಸೋಮವಾರ ಜಿಲ್ಲೆಯಲ್ಲಿ ನಡೆದ ಚುನಾವಣೆ ಅವ್ಯವಸ್ಥೆಯಿಂದ ಕೂಡಿತ್ತು.

ನಗರದ ಅಂಚೆ ಕಚೇರಿ, ಡಿಡಿಪಿಐ ಸೇರಿದಂತೆ ಹಲವು ಮತಗಟ್ಟೆಗಳ ಎದುರು ಮತದಾರರಿಗೆ ರಾಜಾರೋಷವಾಗಿ ಹಣ ಹಂಚಲಾಯಿತು.

ಮತಗಟ್ಟೆಗಳ ಸಮೀಪ ಆಯಾ ರಾಜಕೀಯ ಪಕ್ಷಗಳವರು ಶಾಮಿಯಾನ ಹಾಕಿಕೊಂಡು ಮತದಾರರಿಗೆ ಅಗತ್ಯ ಮಾಹಿತಿ ಕೊಡುತ್ತಿದ್ದರು. ಇದರ ನೆಪದಲ್ಲಿ ಮತದಾರರ ಕ್ರಮ ಸಂಖ್ಯೆ ಹಾಗೂ ಅವರ ಹೆಸರು ಖಾತ್ರಿಪಡಿಸಿಕೊಂಡು ಸ್ಥಳದಲ್ಲೇ ಹಣ ಹಂಚಿ, ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಹೇಳಿದರು.

ಇನ್ನೊಂದು ಪಕ್ಷದವರು ಮತಗಟ್ಟೆಯಿಂದ ಸ್ವಲ್ಪ ದೂರದಲ್ಲಿ ಮತದಾರರನ್ನು ಕರೆದು, ಅವರು ಮತದಾರರಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಕವರ್‌ನಲ್ಲಿ ಹಣ ಹಾಕಿ ಕೊಟ್ಟರು. ಹಣ ಪಡೆಯಲು ಪದವೀಧರ ಮತದಾರರು ಮುಗಿಬಿದ್ದಿದ್ದರು. ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಲೆಕ್ಕಿಸದೆ ಹಣ ಪಡೆಯಲು ದುಂಬಾಲು ಬಿದ್ದಿದ್ದರು. ಮತ್ತೆ ಕೆಲವರು, ನಮ್ಮ ಮನೆಯಲ್ಲಿ ಇಂತಿಷ್ಟು ಮತದಾರರಿದ್ದಾರೆ. ಅದಕ್ಕೆ ಎಷ್ಟು ಹಣ ಕೊಡುವಿರಿ ಎಂದು ಚೌಕಾಸಿ ಮಾಡಿ ವ್ಯಾಪಾರ ಕುದುರಿಸಿಕೊಳ್ಳುವುದು ಕಂಡು ಬಂತು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಇಂತಹ ದೃಶ್ಯ ಕಂಡು ಬರಲಿಲ್ಲ. ಆದರೆ, ಬುದ್ಧಿವಂತರು ಎಂದೆನಿಸಿಕೊಂಡ ಪದವೀಧರ ಮತದಾರರು ಯಾರಿಗೂ ಅಂಜದೆ ಹಣ ಪಡೆದು ಮತ ಹಾಕಿದರು. ಇದೆಲ್ಲ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾರೊಬ್ಬರೂ ತಡೆಯುವ ಕೆಲಸ ಮಾಡಲಿಲ್ಲ. ಹಣ ಹಂಚುತ್ತಿದ್ದ ಮತಗಟ್ಟೆಗಳಲ್ಲಿ ಜನಜಾತ್ರೆ ಇದ್ದರೆ, ಹಣ ನೀಡದಿದ್ದ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು.

ಇನ್ನು, ಹಿರಿಯ ನಾಗರಿಕರು, ಅಂಗವಿಕಲರಿಗೆ ಮತದಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರಲಿಲ್ಲ. ಡಿಡಿಪಿಐ ಕಚೇರಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇಕ್ಕಟ್ಟಿನ ಕಚೇರಿಯಲ್ಲಿ ಜನ ಸರತಿಯಲ್ಲಿ ತಡಹೊತ್ತು ನಿಂತು ಮತ ಹಾಕಿದರು. ಎರಡ್ಮೂರು ಗಂಟೆ ನಿಲ್ಲಬೇಕಾಗುತ್ತದೆ ಎಂದು ಅಂಗವಿಕಲರು, ಹಿರಿಯ ನಾಗರಿಕರು ಮತ ಚಲಾಯಿಸದೇ ನಿರ್ಗಮಿಸಿದರು. ಮತಗಟ್ಟೆ ಎದುರು ಹಾಗೂ ಒಳಗೆ ಬೇಕಾಬಿಟ್ಟಿ ಓಡಾಡುತ್ತಿದ್ದವರನ್ನು ಯಾರೂ ಕೂಡ ನಿಯಂತ್ರಿಸಲಿಲ್ಲ.

ಇನ್ನು, ಮತದಾನಕ್ಕೆ ಮತದಾರರು ತೀವ್ರ ಹೆಣಗಾಡಿದರು. ಮತದಾರರಿಗೆ ಮೊಬೈಲ್‌ನಲ್ಲಿ ಅವರ ಕ್ರಮ ಸಂಖ್ಯೆ ವಿವರದ ಮೆಸೇಜ್‌ ಬರುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಹೆಚ್ಚಿನವರಿಗೆ ಯಾವುದೇ ರೀತಿಯ ಸಂದೇಶ ಬರಲಿಲ್ಲ. ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎನ್ನುವ ವಿವರ ತಿಳಿದುಕೊಳ್ಳಲು ಅತ್ತಿಂದಿತ್ತ ತೀವ್ರ ಪರದಾಟ ನಡೆಸಿದರು. ಅನೇಕರಿಗೆ ಮಾಹಿತಿ ಲಭಿಸಿದ ಕಾರಣ ಮತ ಚಲಾಯಿಸದೇ ಬೇಸರಿಸಿಕೊಂಡು ನಿರ್ಗಮಿಸಿದರು.

‘ಜಿಲ್ಲಾಡಳಿತವು ಚುನಾವಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಲ್ಲ. ಅವ್ಯವಸ್ಥೆ ನಡುವೆ ಪದವೀಧರ ಮತದಾರರು ಹಕ್ಕು ಚಲಾಯಿಸಿದರು. ಅನೇಕರು ಹಿಡಿಶಾಪ ಹಾಕಿದರು’ ಎಂದು ಬಿಜೆಪಿ ಮುಖಂಡ ರೇವಣಸಿದ್ದಪ್ಪ ಜಲಾದೆ ಆರೋಪಿಸಿದರು.

ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಂದೇ ಆವರಣದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಮತದಾರರು ಸಾಲಿನಲ್ಲಿ ನಿಲ್ಲಬೇಕೆಂದರೂ ಜಾಗ ಇರಲಿಲ್ಲ. ಮತಗಟ್ಟೆಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಮಾಡಿರಲಿಲ್ಲ. ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯವನ್ನೂ ಕೈಗೊಂಡಿರಲಿಲ್ಲ, ಶಾಲಾ ಶಿಕ್ಷಣ ಇಲಾಖೆಯ ಮೂರು ಹಾಗೂ ಗುರು ಭವನದ ಒಂದು ಸೇರಿ ಒಂದೇ ರಸ್ತೆಯಲ್ಲಿ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮಾರ್ಗದಲ್ಲಿ ಸರ್ಕಾರಿ ಕಚೇರಿಗಳೂ ಇದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಓಡಾಟ ಹಾಗೂ ವಾಹನ ನಿಲುಗಡೆಗೆ ಮತದಾರರು ತೀವ್ರ ತೊಂದರೆ ಅನುಭವಿಸಿದರು. ಇನ್ನು ಮತದಾರರ ಪಟ್ಟಿಯೂ ಅನೇಕ ದೋಷಗಳಿಂದ ಕೂಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT