ಶುಕ್ರವಾರ, ಸೆಪ್ಟೆಂಬರ್ 17, 2021
22 °C
ನಗರಸಭೆಗಳ 4 ವಾರ್ಡ್‌ಗಳ ಚುನಾವಣೆ: ಬೆಳಿಗ್ಗೆ ಮಂದ, ಮಧ್ಯಾಹ್ನದ ನಂತರ ಬಿರುಸು

ಬೀದರ್‌, ಬಸವಕಲ್ಯಾಣದಲ್ಲಿ ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಬಸವಕಲ್ಯಾಣ ಹಾಗೂ ಬೀದರ್‌ ನಗರಸಭೆಗಳ ತಲಾ ಎರಡು ವಾರ್ಡ್‌ಗಳಿಗೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಮತದಾರರು ಬೆಳಿಗ್ಗೆ 7 ಗಂಟೆಯಿಂದ ಮತಗಟ್ಟೆಗಳ ಎದುರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.

ಬೀದರ್‌ನಲ್ಲಿ ಶೇ 68.13 ಹಾಗೂ ಬಸವಕಲ್ಯಾಣದಲ್ಲಿ ಶೇ 67ರಷ್ಟು ಮತದಾನವಾಗಿದೆ. ಎರಡೂ ವಾರ್ಡ್‌ಗಳ ಮತಗಟ್ಟೆಗಳಲ್ಲಿ 5,066 ಪುರುಷರು, 4,226 ಮಹಿಳೆಯರು ಹಾಗೂ ಮೂವರು ತೃತೀಯ ಲಿಂಗಿಗಳು ಸೇರಿ ಒಟ್ಟು 9,995 ಮತದಾರರು ಇದ್ದಾರೆ. ಬೆಳಿಗ್ಗೆ 7ರಿಂದ 9 ಗಂಟೆ ಅವಧಿಯಲ್ಲಿ 1,215 ಮಂದಿ, 9 ರಿಂದ 11 ಗಂಟೆ ಅವಧಿಯಲ್ಲಿ 2,841 ಜನ ಹಾಗೂ ಮಧ್ಯಾಹ್ನ 1 ಗಂಟೆ ವರೆಗೆ 4,199 ಮಂದಿ ಮತದಾನ ಮಾಡಿದರು.

ಬೀದರ್‌ ನಗರಸಭೆಯ ವಾರ್ಡ್‌ ಸಂಖ್ಯೆ 26ರಲ್ಲಿ 7 ಮಂದಿ ಹಾಗೂ 32ರಲ್ಲಿ ಐವರು ಕಣದಲ್ಲಿದ್ದಾರೆ. ಮತಗಟ್ಟೆಗಳ ನೂರು ಮೀಟರ್ ಅಂತರದಲ್ಲಿ ಕುರ್ಚಿ ಹಾಗೂ ಟೇಬಲ್‌ ಇಟ್ಟುಕೊಂಡು ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆ ಸಂಖ್ಯೆಯ ಚೀಟಿ ಬರೆದು ಕೊಟ್ಟು ಸಹಕರಿಸಿದರು.

ಆಶಾ ಕಾರ್ಯಕರ್ತೆಯರು ಕೈಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಮತದಾರರಿಗೆ ಮತಗಟ್ಟೆಯೊಳಗೆ ಹೋಗಲು ಅವಕಾಶ ಕಲ್ಪಿಸಿದರು. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನ ಬಿರುಸಿನಿಂದ ನಡೆಯಿತು.
ಎಲ್ಲ ಮತಗಟ್ಟೆಗಳಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು. ಮತಗಟ್ಟೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.
‘ಕೋವಿಡ್‌ ನಿಯಮಾವಳಿ ಪಾಲನೆ ಮಾಡುವ ಮೂಲಕ ಬೀದರ್‌ ಹಾಗೂ ಬಸವಕಲ್ಯಾಣದ ನಾಲ್ಕು ವಾರ್ಡ್‌ಗಳಿಗೆ ಚುನಾವಣೆ ನಡೆಸಲಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆದಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ‘ಪ್ರಜಾವಾಣಿ’ಗೆ ಹೇಳಿದರು.

ಉತ್ಸಾಹದಿಂದ ಮತ ಹಕ್ಕು ಚಲಾವಣೆ

ಬಸವಕಲ್ಯಾಣ: ನಗರದ ಧರ್ಮಪ್ರಕಾಶ ಓಣಿಯ 11ನೇ ವಾರ್ಡ್ ಹಾಗೂ ತ್ರಿಪುರಾಂತದ 23ನೇ ವಾರ್ಡ್‌ನ ನಗರಸಭೆ ಸ್ಥಾನಗಳಿಗಾಗಿ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಧರ್ಮಪ್ರಕಾಶ ಓಣಿಯಲ್ಲಿ ಒಟ್ಟು 2400 ಮತದಾರರಿದ್ದು ಒಂದನೇ ಮತಗಟ್ಟೆಯಲ್ಲಿ ಶೇ 66 ರಷ್ಟು ಹಾಗೂ ಎರಡನೇ ಮತಗಟ್ಟೆಯಲ್ಲಿ ಶೇ 51 ರಷ್ಟು ಮತದಾನವಾಗಿದೆ. ತ್ರಿಪುರಾಂತದ 23 ನೇ ವಾರ್ಡ್‌ನಲ್ಲಿ ಶೇ 90ರಷ್ಟು ಮತದಾನವಾಗಿದೆ. ಒಟ್ಟು ಶೇ 67ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

23ನೇ ವಾರ್ಡ್‌ನಲ್ಲಿ ಸುವರ್ಣಾ ಮಲ್ಲೇಶ ಕಾಳೇಕರ್ ಬಿಜೆಪಿಯಿಂದ ಸ್ಪರ್ಧಿಸಿದರೆ, ಕಾಂಗ್ರೆಸ್‌ನಿಂದ ಲಕ್ಷ್ಮಿಬಾಯಿ ಭೀಮಶಾ ಹಾಗೂ 11ನೇ ವಾರ್ಡ್‌ನಲ್ಲಿ ಶಾಂತಾಬಾಯಿ ಮಾರುತಿ ಲಾಡೆ ಬಿಜೆಪಿಯಿಂದ ಹಾಗೂ ಯುವರಾಜ ಭೆಂಡೆ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದಾರೆ. ಸಂಜೀವಕುಮಾರ ಸಂಗನೂರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.