ಸೋಮವಾರ, ಏಪ್ರಿಲ್ 6, 2020
19 °C
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಸಲಹೆ

ರಕ್ಷಣಾ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಮಕ್ಕಳ ರಕ್ಷಣಾ ಕೇಂದ್ರದಲ್ಲಿರುವ ಮಕ್ಕಳನ್ನು ಸ್ವಂತ ಮಕ್ಕಳಂತೆ ಕಾಣಬೇಕು. ಕೇಂದ್ರಕ್ಕೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಹೇಳಿದರು.

ಇಲ್ಲಿಯ ಶಾರದಾ ಆರ್.ಸೆಟಿ ತರಬೇತಿ ಕೇಂದ್ರದಲ್ಲಿ ಮಕ್ಕಳ ಪೋಷಣಾ ಮತ್ತು ರಕ್ಷಣಾ ಸಂಸ್ಥೆಗಳಲ್ಲಿ ಗುಣಮಟ್ಟದ ಪೋಷಣೆ ಮತ್ತು ರಕ್ಷಣೆ ನೀಡುವ ಹಾಗೂ ಅವುಗಳ ಅನುಷ್ಠಾನ ಮಾನದಂಡಗಳ ಕುರಿತು ಸರ್ಕಾರಿ, ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ದೇಶದ ಸಂಪತ್ತು. ಅನಾಥ, ನಿರ್ಗತಿಕ, ಏಕ ಪೋಷಕ, ಪರಿತ್ಯಕ್ತ ಎಂಬಿತ್ಯಾದಿ ರಕ್ಷಣೆ ಮತ್ತು ಪೋಷಣೆಗೆ ಒಳಪಡುವ ಮಕ್ಕಳನ್ನು ನಾವು ಅವರ ಘನತೆಗೆ ಧಕ್ಕೆ ಬರದಂತೆ ಪುನರ್ವಸತಿ ನೀಡುವುದು ಬಾಲನ್ಯಾಯ ಕಾಯ್ದೆಯ ಆಶಯವಾಗಿದೆ. ಅನಾಥ’ ಎಂದು ತಿಳಿಸಿದರು.

‘ನಿರ್ಗತಿಕ, ಪರಿತ್ಯಕ್ತ ಮಕ್ಕಳು ಪಾಲನಾ ಸಂಸ್ಥೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಈ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಬೀದರ್ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಕವಿತಾ ಹುಷಾರೆ ಮಾತನಾಡಿ, ‘ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಡಿ ಒಟ್ಟು 29 ಮಕ್ಕಳ ಪಾಲನಾ ಸಂಸ್ಥೆಗಳು ನಡೆಯುತ್ತಿವೆ. ಮಕ್ಕಳ ಪಾಲನಾ ಸಂಸ್ಥೆಗಳು ಬಾಲ ನ್ಯಾಯ ಕಾಯ್ದೆ 2015 ಹಾಗೂ ನಿಯಮಗಳು 2016 ರನ್ವಯ ರಕ್ಷಣೆ ಮತ್ತು ಪೋಷಣೆಗೆ ಅಗತ್ಯವಿರುವ ಮಕ್ಕಳನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಕ್ಕಳನ್ನು ದಾಖಲಿಸಿಕೊಳ್ಳಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ ಮಾತನಾಡಿ, ‘ಮಕ್ಕಳ ಸುರಕ್ಷತೆ, ಪೌಷ್ಟಿಕ ಆಹಾರ, ಸ್ವಚ್ಛತೆ, ವೈದ್ಯಕೀಯ ತಪಾಸಣೆ, ಮಕ್ಕಳ ಶಿಕ್ಷಣ, ವೃತ್ತಿಪರ ತರಬೇತಿ, ಮನರಂಜನೆಗೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಯುನಿಸೆಪ್‌ನ ರಾಘವೇಂದ್ರ ಭಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪೂರೆ, ಯಾದಗಿರಿಯ ಸಮಾಜ ಕಾರ್ಯಕರ್ತರಾದ ದಶರಥ ನಾಯಕ, ಕಲಬುರ್ಗಿಯ ಭರತೇಶ್ ಶೀಲವಂತರ ಮಾತನಾಡಿದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಂಜುಳಾ ಎಂ, ಬಾಲನ್ಯಾಯ ಮಂಡಳಿ ಸದಸ್ಯರಾದ ಧನವಂತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಇದ್ದರು. ಪ್ರಶಾಂತ ಬಿರಾದಾರ ಸ್ವಾಗತಿಸಿದರು. ವಿನೋದಕುಮಾರ ಕುರೆ ವಂದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು