ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಸರ್ಕಾರದ ಹೊರೆ ತಗ್ಗಿಸಲು ‘ಗ್ಯಾರಂಟಿ’ ಜಾರಿ

ಲೋಕಸಭೆ ಚುನಾವಣೆ ನಂತರ ‘ಗ್ಯಾರಂಟಿ’ ಯೋಜನೆಗಳು ನಿಲ್ಲಲಿವೆ ಎನ್ನುವುದು ಸುಳ್ಳು–ಸಚಿವ ಖಂಡ್ರೆ
Published : 14 ಮಾರ್ಚ್ 2024, 6:21 IST
Last Updated : 14 ಮಾರ್ಚ್ 2024, 6:21 IST
ಫಾಲೋ ಮಾಡಿ
Comments

ಬೀದರ್‌: ‘ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿಸಿದ್ದು, ಅದರ ಹೊರೆ ತಗ್ಗಿಸಲು ರಾಜ್ಯ ಸರ್ಕಾರ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಬೀದರ್‌ ಜಿಲ್ಲಾ ‘ಗ್ಯಾರಂಟಿ’ ಸಮಾವೇಶ ಮತ್ತು ಬೀದರ್‌ ತಾಲ್ಲೂಕಿನ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಸಿಲಿಂಡರ್‌ ಬೆಲೆ ₹450 ಇತ್ತು. ಈಗ ₹1 ಸಾವಿರ ಆಗಿದೆ. ಈಗ ಚುನಾವಣೆ ಬರುತ್ತಿರುವುದರಿಂದ ಸಿಲಿಂಡರ್‌ ದರ ₹100 ಕಮ್ಮಿ ಮಾಡಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಹೆಚ್ಚಾಗಿವೆ. ರಾಜ್ಯ ಸರ್ಕಾರದ ಐದು ‘ಗ್ಯಾರಂಟಿ’ ಯೋಜನೆಗಳಿಂದ ಬಡವರ ಮೇಲಿನ ಹೊರೆ ಕಡಿಮೆಯಾಗಿದೆ ಎಂದು ಹೇಳಿದರು.

ನಮ್ಮ ಮೇಲೆ ಭರವಸೆ ಇಟ್ಟು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ, ನುಡಿದಂತೆ ನಡೆದುಕೊಂಡಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಲೋಕಸಭೆ ಚುನಾವಣೆ ನಂತರ ‘ಗ್ಯಾರಂಟಿ’ ಬಂದ್‌ ಮಾಡುತ್ತಾರೆ ಎಂದು ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಐದೂ ವರ್ಷ ಗ್ಯಾರಂಟಿಗಳು ಮುಂದುವರೆಯುತ್ತವೆ. ಮುಂದೆ ಪುನಃ ನಾವೇ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ನೀವು ನಮಗೆ ಶಕ್ತಿ ಕೊಡುವ ಕೆಲಸ ಮಾಡಬೇಕು. ಯಾರು ನಿಮಗಾಗಿ ದುಡಿಯುತ್ತಿದ್ದಾರೆ ಅಂತಹವರನ್ನು ಬೆಂಬಲಿಸುತ್ತೀರಾ ಅಥವಾ ಸುಳ್ಳು ಹೇಳುವವರನ್ನು ಬೆಂಬಲಿಸುತ್ತೀರಾ? ನೀವೇ ನಿರ್ಧರಿಸಿ ಎಂದರು.

ಗ್ಯಾರಂಟಿಯಲ್ಲಿ ಯಾವುದೇ ರೀತಿಯ ಸೋರಿಕೆ, ಭ್ರಷ್ಟಾಚಾರ ಆಗುತ್ತಿಲ್ಲ. ನೇರ ಜನರ ಖಾತೆಗಳಿಗೆ ಹಣ ಜಮೆ ಆಗುತ್ತಿದೆ. ವಿರೋಧಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರ ಮಾತುಗಳನ್ನು ನಂಬಬೇಡಿ. ಬರುವ ದಿನಗಳಲ್ಲಿ ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಜಲಜೀವನ್‌ ಮಿಷನ್‌ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಶೇ 55ರಷ್ಟು ಅನುದಾನ ನೀಡಿದೆ. ಆದರೆ, ಕೇಂದ್ರ ಸರ್ಕಾರವು ನಾವು ಮಾಡುತ್ತಿದ್ದೇವೆ ಎಂದು ಪ್ರಚಾರ ಪಡೆಯುತ್ತಿದೆ. ₹1 ಸಾವಿರ ಕೋಟಿ ಅನುದಾನದಲ್ಲಿ ಜಿಲ್ಲೆಯ 800 ಜನವಸತಿ ಪ್ರದೇಶಗಳಿಗೆ ಈ ವರ್ಷದ ಡಿಸೆಂಬರ್‌ನೊಳಗೆ ಶಾಶ್ವತವಾಗಿ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರ ಬಡವರ ಪರವಾಗಿದೆ. ಬಡವರಿಗೆ ಅನುಕೂಲವಾಗಲು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಜಾತಿ, ಭೇದವಿಲ್ಲದೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳ ಲಾಭ ದೊರಕಿಸಿಕೊಡಲಾಗುತ್ತಿದೆ ಎಂದರು.

ಜನರ ಸಣ್ಣಪುಟ್ಟ ಸಮಸ್ಯೆಗಳಾದ ಮಾಸಾಶನ, ಮನಸ್ವಿನಿ, ಮೈತ್ರಿ, ಪಹಣಿ ತಿದ್ದುಪಡಿ ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರು ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಮನೆಬಾಗಿಲಿಗೆ ಬರುತ್ತಿದೆ ಎಂದು ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೀದರ್‌ ಜಿಲ್ಲಾ ಸಂಕೀರ್ಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಇದನ್ನು ಮಾದರಿಯಾಗಿ ಜಿಲ್ಲೆಯಲ್ಲಿ ಮಾಡಲಾಗುವುದು ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್‌ ಮಾತನಾಡಿ, ಮುಖ್ಯಮಂತ್ರಿಗಳು ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ಜನಸ್ಪಂದನ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ. ಮೊದಲು ಜನ ತಹಶೀಲ್ದಾರ್‌ ಕಚೇರಿ ಹಾಗೂ ಇತರೆ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಅಲೆದರೂ ಕೆಲಸಗಳಾಗುತ್ತಿರಲಿಲ್ಲ. ಈಗ ಜನರಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ. ಎಂ. ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಇದೇ ವೇಳೆ 146 ಜನರಿಗೆ ಹೊಲಿಗೆ ಯಂತ್ರ, 23 ಜನರಿಗೆ ಇಸ್ತ್ರಿ ಪೆಟ್ಟಿಗೆ, ಟೇಬಲ್‌, 23 ಮಂದಿಗೆ ಡ್ರಿಲ್ಲಿಂಗ್‌ ಮಶೀನ್‌, ಸಾವಿರ ಜನರಿಗೆ ಸೂಕ್ಷ್ಮ ನೀರಾವರಿ ಯೋಜನೆಯಡಿ ಸ್ಪ್ರಿಂಕ್ಲರ್‌ ವಿತರಿಸಲಾಯಿತು.

ಜನಸ್ಪಂದನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
ಜನಸ್ಪಂದನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
ಬೀದರ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಮಹಿಳೆಯರಿಗೆ ಟೈಲರಿಂಗ್‌ ಯಂತ್ರ ವಿತರಿಸಿದರು
-ಪ್ರಜಾವಾಣಿ ಚಿತ್ರಗಳು
ಬೀದರ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂದನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಮಹಿಳೆಯರಿಗೆ ಟೈಲರಿಂಗ್‌ ಯಂತ್ರ ವಿತರಿಸಿದರು -ಪ್ರಜಾವಾಣಿ ಚಿತ್ರಗಳು
ರೇಷನ್‌ ಕಾರ್ಡ್‌ ಇದ್ದರೂ ಹಣ ಬರುತ್ತಿಲ್ಲ ಎಂದು ಸಚಿವರಿಗೆ ತಿಳಿಸಿದ್ದೇನೆ. ಸರಿಪಡಿಸುವ ಭರವಸೆ ಕೊಟ್ಟಿದ್ದಕ್ಕೆ ಖುಷಿಯಾಗಿದೆ.
–ತುಳಸಮ್ಮ, ನಾಗೋರಾ ನಿವಾಸಿ
ನನ್ನ ಹೆಂಡತಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ದಾಖಲೆಗಳನ್ನು ಪಡೆದುಕೊಂಡಿದ್ದು ಸರಿಪಡಿಸುವುದಾಗಿ ಹೇಳಿದ್ದಾರೆ.
– ಚಂದ್ರಪ್ಪ, ಯರನಳ್ಳಿ ನಿವಾಸಿ

ಗೃಹಲಕ್ಷ್ಮಿಗೆ ಹೆಚ್ಚಿನ ಅರ್ಜಿಗಳು

ಜನಸ್ಪಂದನದಲ್ಲಿ 90 ಅರ್ಜಿಗಳು ಸಲ್ಲಿಕೆಯಾದವು. ಇದರಲ್ಲಿ ಹೆಚ್ಚಿನವರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನಲ್ಲಿ ಹೆಸರು ಮ್ಯಾಚ್‌ ಆಗದೇ ಇರುವುದು ಕೆವೈಸಿ ಪೂರ್ಣಗೊಳಿಸದಿರುವುದು ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಅವರ ಅರ್ಜಿಗಳನ್ನು ಸ್ವೀಕರಿಸಿದ್ದು ಕಾಲಮಿತಿಯಲ್ಲಿ ಬಗೆಹರಿಸಿ ಯೋಜನೆಯ ಲಾಭ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಭಾಷಣ ಮುಗಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಮುಂದಾದರು. ಈ ವೇಳೆ ಒಮ್ಮೆಗೆ ಜನ ವೇದಿಕೆಯತ್ತ ಧಾವಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಒಬ್ಬೊಬ್ಬರನ್ನೇ ಸಚಿವರ ಬಳಿ ಕಳಿಸಿಕೊಡಲಾಯಿತು. ಸಚಿವರು ಜನರ ಅಹವಾಲು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಅದರಲ್ಲಿ ಹೆಚ್ಚಿನ ಅರ್ಜಿಗಳು ರೇಷನ್‌ ಕಾರ್ಡ್‌ ಗೃಹಲಕ್ಷ್ಮಿಗೆ ಸಂಬಂಧಿಸಿದ್ದವು. ಈ ಹಿಂದೆ ನಡೆದ ಜನಸ್ಪಂದನದಲ್ಲಿ ಒಬ್ಬೊಬ್ಬರನ್ನೇ ವೇದಿಕೆಗೆ ಕರೆಸಿ ಕುರ್ಚಿಯಲ್ಲಿ ಕೂರಿಸಿ ಶಿಸ್ತಿನಿಂದ ಅವರ ಸಮಸ್ಯೆ ಆಲಿಸಲಾಗುತ್ತಿತ್ತು. ಆದರೆ ಈ ಸಲ ಅದು ಕಂಡು ಬರಲಿಲ್ಲ. ಯಾರು ಏನು ಸಮಸ್ಯೆ ಹೇಳುತ್ತಿದ್ದಾರೆ ಎನ್ನುವುದು ಮಾಧ್ಯಮದವರಿಗೆ ಅರ್ಥವಾಗಲೇ ಇಲ್ಲ. ಇನ್ನು ಊಟಕ್ಕೆ ಜನ ಒಟ್ಟಿಗೆ ಮುಗಿಬಿದ್ದದ್ದರಿಂದ ಕೆಲಕಾಲ ನೂಕು ನುಗ್ಗಲು ಉಂಟಾಗಿತ್ತು. ಅರ್ಜಿ ಸಲ್ಲಿಕೆ ವೇಳೆಯೂ ಇದೇ ಪರಿಸ್ಥಿತಿ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT