ಬೀದರ್: ‘ಸಹಕಾರ ರಂಗದಲ್ಲಿ ಬೀದರ್ ಡಿ.ಸಿ.ಸಿ ಬ್ಯಾಂಕ್ ರಾಜ್ಯದಲ್ಲೇ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ಗ್ರಾಹಕರಿಗೆ ಸೇವೆಗಳನ್ನು ನೀಡುವಲ್ಲಿ ದೇಶಕ್ಕೆ ಮಾದರಿಯಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ಇಲ್ಲಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ನಬಾರ್ಡ್ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ತರಬೇತಿಗಳ ಮೂಲಕ ಮೊಟ್ಟ ಮೊದಲಿಗೆ ರೈತರಿಗೆ ಫಸಲ್ ಬಿಮಾ ಯೋಜನೆಯ ಅರಿವು ಮೂಡಿಸಿ ಬೆಳೆ ವಿಮೆ ಮಾಡಿಸಿ ಬೆಳೆ ನಷ್ಟ ಪರಿಹಾರ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದ ಜನರನ್ನು ಸುಲಭವಾಗಿ ತಲುಪುವಂತಾಗಲು ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗಿದೆ. ಬ್ಯಾಂಕ್ ಈ ವ್ಯವಸ್ಥೆ ಹೊಂದಿದ ರಾಜ್ಯದ 2ನೇ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಸಜ್ಜಿತ ಬಸ್‌ನಲ್ಲಿ ಒಂದು ಎಟಿಎಂ, ಕಂಪ್ಯೂಟರ್, ಲಾಕರ್, ಅಂತರ್ಜಾಲ ವ್ಯವಸ್ಥೆಯೊಂದಿಗೆ ಹಣ ತುಂಬುವ, ಪಡೆಯುವ, ಖಾತೆ ತೆರೆಯುವ ವ್ಯವಸ್ಥೆಗಳು ಲಭ್ಯ ಇವೆ ಎಂದು ತಿಳಿಸಿದರು.
ಬ್ಯಾಂಕ್ ಜಿಲ್ಲೆಯ ರೈತರಿಗೆ ಅತಿ ಹೆಚ್ಚು ಕೃಷಿ ಸಾಲ ನೀಡಿದೆ. ಬ್ಯಾಂಕಿನಲ್ಲಿ 6.58 ಲಕ್ಷ ಜನರು ಉಳಿತಾಯ ಖಾತೆ ಹೊಂದಿದ್ದಾರೆ. ಬೀದರ್ ರಾಜ್ಯದಲ್ಲೇ 2ನೇ ಅತಿ ಹೆಚ್ಚು ಉಳಿತಾಯ ಖಾತೆ ಇರುವ ಜಿಲ್ಲೆಯಾಗಿದೆ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಹಾಜನ ಹಾಗೂ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಬ್ಯಾಂಕಿನ ಪ್ರಗತಿ ವರದಿ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪರಮೇಶ್ವರ ಮುಗಟೆ, ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಅಣದೂರೆ, ಪ್ರಬಂಧಕ ವೀರೇಂದ್ರ ಪತ್ರಿ, ಗಿರೀಶ ಪಾಟೀಲ, ಸಂಗೀತಾ ಜಾಬಾ, ಉಪಾಲಿ ಸಂಗಮ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಮಂಜುನಾಥ ಭಾಗವತ್ ಇದ್ದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ನಾಗಶೆಟ್ಟಿ ಘೋಡಂಪಳ್ಳಿ, ಅನಿಲ ಪಿ. ಹಾಗೂ ಮಹಾಲಿಂಗ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಜಿ.ಪಾಟೀಲ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.