ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಷೇರು ಬಂಡವಾಳದಿಂದ ಸಂಘಗಳ ಅಭಿವೃದ್ಧಿ

ಕಲಬುರಗಿ ಜಿಲ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ತರಬೇತಿ
Last Updated 22 ಜನವರಿ 2022, 13:09 IST
ಅಕ್ಷರ ಗಾತ್ರ

ಬೀದರ್‌: ’ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಪ್ಯಾಕ್ಸ್‌ಗಳಿಗೆ ಆಧುನಿಕತೆಗೆ ಅನುಗುಣವಾಗಿ ಮಾರ್ಗದರ್ಶನ ನೀಡುವಲ್ಲಿಬೀದರ್‌ ಡಿಸಿಸಿ ಬ್ಯಾಂಕ್‌ ದೇಶದಲ್ಲೇ ಮಾದರಿಯಾಗಿದೆ‘ ಎಂದು ಡಿಸಿಸಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ (ಆಡಳಿತ ವಿಭಾಗ) ಚನ್ನಬಸಯ್ಯ ಸ್ವಾಮಿ ಹೇಳಿದರು.

ಇಲ್ಲಿಯ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ನಬಾರ್ಡ್ ವತಿಯಿಂದ ಕಲಬುರಗಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ಆಯೋಜಿಸಿದ್ದ ರೈತರ ಆದಾಯ ವೃದ್ಧಿ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

’’ಷೇರು ಬಂಡವಾಳ ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರಿ ಸಂಘಗಳಲ್ಲಿ ಅದರ ಸದಸ್ಯರೇ ಆಸ್ತಿಗಳಾಗಿದ್ದಾರೆ. ಸದಸ್ಯರಿಂದ ಸದಸ್ಯರಿಗಾಗಿ ನಡೆಸಲ್ಪಡುವ ಸಹಕಾರ ಸಂಸ್ಥೆಗಳು ಅಭಿವೃದ್ಧಿ ತತ್ವವನ್ನು ಪಾಲಿಸುತ್ತಿವೆ‘ ಎಂದರು.

’ಸಂಘಗಳು ಹೆಚ್ಚು ಸದಸ್ಯರನ್ನು ಹೊಂದಬೇಕು. ಸದಸ್ಯರಿಗೆ ಹೆಚ್ಚೆಚ್ಚು ಸಾಲ ನೀಡಿ ಷೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಷೇರು ಬಂಡವಾಳ ಮತ್ತು ಠೇವಣಿಗಳಿಂದ ದೊರಕುವ ಬಂಡವಾಳಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಕಷ್ಟದಲ್ಲಿ ಗ್ರಾಹಕರಿಗೆ ಅವರ ಠೇವಣಿ ಮರಳಿಸಿದರೆ ಜನರ ವಿಶ್ವಾಸ ದ್ವಿಗುಣಗೊಳ್ಳುತ್ತದೆ‘ ಎಂದು ತಿಳಿಸಿದರು.

’ಈಗಿನ ವಾತಾವರಣ ಸಹಕಾರ ಸಂಸ್ಥೆಗಳ ವ್ಯವಹಾರ ಅಭಿವೃದ್ಧಿಗೆ ಪೂರಕವಾಗಿದೆ. ಸಹಕಾರಿ ಸಂಘಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಸಂಘಗಳು ಸ್ವಂತ ಬಂಡವಾಳವನ್ನು ವ್ಯಾಪಾರ ಅಭಿವೃದ್ಧಿಗೆ ಸಾಲವಾಗಿ ನೀಡಬೇಕು. ಇದರಿಂದ ಜನರಿಗೆ ಉದ್ಯೋಗ ಕೈಗೊಳ್ಳಲು ಅನುಕೂಲವಾಗುತ್ತದೆ, ಬ್ಯಾಂಕಿಗೆ ಬಡ್ಡಿಯೂ ಬರುತ್ತದ‘‘ ಎಂದು ಹೇಳಿದರು.

’ಡಿಸಿಸಿ ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತಿದೆ. ಎಲ್ಲಿ ಜನರಿದ್ದಾರೋ ಅಲ್ಲಿ ಮಾರುಕಟ್ಟೆ ವ್ಯವಹಾರ ನಡೆಯುತ್ತದೆ. ಸಹಕಾರಿಗಳು ಇದನ್ನು ಮನಗಂಡು ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್‌ ಬ್ಯಾಂಕಿಂಗ್, ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಠ್ಠಲ್ ರೆಡ್ಡಿ ಮಾತನಾಡಿ, ’ಸಂಘ ನಡೆಸುವಲ್ಲಿ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ ಮಹತ್ವದ್ದಾಗಿದೆ‘ ಎಂದರು.

’ದಶಕದ ಹಿಂದೆ ಬೆಳೆ ವಿಮೆ ಯೋಜನೆ ಹಾಗೂ ಸಹಕಾರಿ ಸಾಲ ವಿತರಣೆಯಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿತ್ತು. ಪಿ.ಎಂ.ಎಫ್.ಬಿ.ವೈ-ಬಂದ ಬಳಿಕ ಬೀದರ್‌ ಡಿಸಿಸಿ ಬ್ಯಾಂಕ್‌ ಮುಂಚೂಣಿಯಲ್ಲಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಬ್ಯಾಂಕಿನಿಂದಲೇ ಪ್ರೀಮಿಯಂ ತುಂಬಿಸುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದರಿಂದ ಬೆಳೆ 1.25 ಲಕ್ಷ ರೈತರಿಗೆ ಒಟ್ಟು ₹ 350 ಕೋಟಿ ಬೆಳೆ .ವಿಮೆ ದೊರಕಿದೆ‘ ಎಂದು ಹೇಳಿದರು.

’ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಗ್ರಾಮ ಸಮೀಕ್ಷೆ ಮಾಡಿ ಸಾಲದ ಬೇಡಿಕೆ, ಉಳಿತಾಯ ಹಾಗೂ ಅವರ ಕುಟುಂಬದ ಆದಾಯದ ಮಾಹಿತಿ ಪಡೆದು ಯೋಜನೆ ರೂಪಿಸಬೇಕು. ಜನ ಸೇವಕ ಸಂಸ್ಥೆಯಾಗಿ ಸಹಕಾರಿ ಸಂಘಗಳನ್ನು ಬೆಳೆಸಬೇಕು‘ ಎಂದು ಸಲಹೆ ನೀಡಿದರು.

ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ .ಮಲ್ಲಿಕಾರ್ಜುನ ಮಹಾಜನ ಮಾತನಾಡಿ, ’ತರಬೇತಿಗಳು ಕೌಶಲ ಹೆಚ್ಚಿಸಲು ನೆರವಾಗುತ್ತವೆ‘ ಎಂದರು.

ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪಿ. ಹಾಗೂ ಮಹಾಲಿಂಗ ನಿರೂಪಿಸಿದರು. ಉಪನ್ಯಾಸಕ ಎಸ್.ಜಿ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT