ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಹೆಚ್ಚುವರಿ ಬೀಜ ಸಿಗದು: ಕೃಷಿ ಸಚಿವ ಬಿ.ಸಿ. ಪಾಟೀಲ

ವಿಡಿಯೊ ಸಂವಾದದಲ್ಲಿ ಹೇಳಿಕೆ
Last Updated 19 ಜೂನ್ 2021, 14:49 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಜಿಲ್ಲೆಗೆ ಈಗ ಪೂರೈಸಲಾಗಿರುವ ಬೀಜ ದಾಸ್ತಾನಿನಲ್ಲೇ ಎಲ್ಲವನ್ನೂ ಸರಿದೂಗಿಸಿಕೊಳ್ಳಬೇಕು. ಇನ್ನೂ ಹೆಚ್ಚುವರಿ ಬೀಜ ಕೊಡಲಾಗದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರಿನಿಂದ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವಿಡಿಯೊ ಸಂವಾದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಬೀದರ್‌ ಜಿಲ್ಲೆಗೆ ಹೆಚ್ಚುವರಿ ಬೀಜ ಪೂರೈಸುವಂಎ ಮನವಿ ಮಾಡಿದಾಗ ಕೃಷಿ ಸಚಿವರು ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಬೇಕು ಎಂದರು.

‘ಬೀದರ್‌ ಜಿಲ್ಲೆಗೆ ಕಳೆದ ವರ್ಷ 75 ಸಾವಿರ ಕ್ವಿಂಟಲ್ ಸೋಯಾಬೀನ್‌ ಕೊಡಲಾಗಿದೆ. ಪ್ರಸಕ್ತ ವರ್ಷ 92,600 ಕ್ವಿಂಟಲ್‌
ಬೀಜ ವಿತರಣೆ ಮಾಡಲಾಗಿದೆ. 17 ಸಾವಿರಕ್ಕೂ ಅಧಿಕ ಕ್ವಿಂಟಲ್‌ ಹೆಚ್ಚುವರಿ ಬೀಜ ವಿತರಿಸಲಾಗಿದೆ. ಎಲ್ಲ ಕಡೆ ಬೇಡಿಕೆ ಇರುವ ಕಾರಣ ಇನ್ನಷ್ಟು ಬೀಜ ಕೊಡಲಾಗದು’ ಎಂದು ಸ್ಟಷ್ಟವಾಗಿ ಹೇಳಿದರು.

‘ಜಿಲ್ಲೆಯಲ್ಲಿ ಸೋಯಾ ಬೀಜದ ಕೊರತೆಯಾಗಿದೆ. ಜಿಲ್ಲೆಯ ರೈತರಿಂದ ಸೋಯಾಕ್ಕೆ ಅಧಿಕ ಬೇಡಿಕೆ ಇದೆ. ಹೆಚ್ಚುವರಿ ಬೀಜ ಬಿಡುಗಡೆ ಮಾಡಬೇಕು’ ಎಂದು ಪ್ರಭು ಚವಾಣ್‌ ಅವರು ಮುಖ್ಯಮಂತ್ರಿ ಬಿ..ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಸೋಯಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ತೊಗರಿ, ಹೆಸರು, ಉದ್ದು, ಜೋಳ, ಮೆಕ್ಕೆಜೋಳ, ಸಜ್ಜೆ, ಭತ್ತದ ಬೀಜ ಲಭ್ಯವಿದೆ. ರೈತರು ಕೇವಲ ಸೋಯಾ ಬೀಜವನ್ನು ಮಾತ್ರ ಅವಲಂಬಿಸದೇ ದಾಸ್ತಾನು ಲಭ್ಯವಿರುವ ಇತರೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡುವುದು ಉತ್ತಮ. ಈ ಕುರಿತು ಕೃಷಿ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಬೇಕು’ ಎಂದು ವಿಡಿಯೊ ಸಂವಾದದ ಬಳಿಕ ಚವಾಣ್ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

‘ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯ ವೈಫಲ್ಯದಿಂದ ಬೀಜ ಕೊರತೆಯಾಗಿದೆ. ಜಂಟಿ ನಿರ್ದೇಶಕರು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ ಎನ್ನುವ ದೂರುಗಳು ಬರುತ್ತಿವೆ. ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ
ಬೇರೆಡೆಗೆ ವರ್ಗ ಮಾಡಿಸಿಕೊಂಡು ಹೋಗಬೇಕು’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಅವರ ವಿಡಿಯೊ ಸಂವಾದಕ್ಕೆ ವಿಳಂಬವಾಗಿ ಬಂದ ಪಂಚಾಯತ್ ರಾಜ್ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬು ಪವಾರ್ ಅವರ ಕರ್ತವ್ಯ ನಿರ್ಲಕ್ಷ್ಯಕ್ಕೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಗ್ನಿಶಾಮಕ, ಜೆಸ್ಕಾಂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT