ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆಕಾಯಿ ಕೆ.ಜಿಗೆ ₹700!

ಬೆಲೆ ಕೇಳಿ ಹೌಹಾರುತ್ತಿರುವ ಗ್ರಾಹಕರು
Last Updated 22 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ಬಹುತೇಕ ಎಲ್ಲ ಹಬ್ಬಗಳು ಮುಗಿದಿವೆ. ನಿಧಾನವಾಗಿ ಚಳಿ ಆವರಿಸಿಕೊಳ್ಳುತ್ತಿದೆ. ಈ ನಡುವೆ ಕೆಲ ತರಕಾರಿ ಬೆಲೆ ನಿಧಾನವಾಗಿ ಏರಿಕೆಯಾದರೆ, ಇನ್ನು ಕೆಲ ತರಕಾರಿ ಬೆಲೆ ಅಷ್ಟೇ ನಿಧಾನವಾಗಿ ಇಳಿದಿದೆ.

ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಬೆಲೆಯ ಆರ್ಭಟ ಮುಂದುವರಿದಿದೆ. ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹700 ಹಾಗೂ ಒಂದಕ್ಕೆ ₹50 ಮಾರಾಟವಾಗುತ್ತಿದೆ. ಸಾಮಾನ್ಯ ಗ್ರಾಹಕ ನುಗ್ಗೆಕಾಯಿ ಬೆಲೆ ಕೇಳಿಯೇ ಮಾರುದ್ದ ಜಿಗಿಯುತ್ತಿದ್ದಾರೆ. ಬೆಲೆ ಹೆಚ್ಚಳವಾದರೂ ಕೆಲ ನುಗ್ಗೆ ಪ್ರಿಯರು ಕೇಳಿ ಖರೀದಿಸುತ್ತಿದ್ದಾರೆ.

ಗಜ್ಜರಿ ಬೆಲೆ ಒಮ್ಮೆಲೇ ದುಪ್ಪಟ್ಟಾಗಿದೆ. ಪ್ರತಿ ಕ್ವಿಂಟಲ್‌ಗೆ ₹4 ಸಾವಿರ ಇದ್ದ ಗಜ್ಜರಿ ಬೆಲೆ ₹8 ಸಾವಿರಕ್ಕೆ ಏರಿದೆ.

ಈರುಳ್ಳಿ, ಬೆಳ್ಳುಳ್ಳಿ, ಬೀಟ್‌ರೂಟ್‌, ಬದನೆಕಾಯಿ, ತೊಂಡೆಕಾಯಿ, ಎಲೆಕೋಸು ಬೆಲೆ ₹1 ಸಾವಿರ ಹೆಚ್ಚಳವಾಗಿದೆ. ಹಸಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹500 ಏರಿಕೆಯಾಗಿದೆ. ಆಲೂಗಡ್ಡೆ ಹಾಗೂ ಹೂಕೋಸು ಬೆಲೆ ಮಾತ್ರ ಸ್ಥಿರವಾಗಿದೆ. ಮೆಂತೆಸೊಪ್ಪು ಹಾಗೂ ಕರಿಬೇವು ಬೆಲೆ ಕ್ವಿಂಟಲ್‌ಗೆ ₹4 ಸಾವಿರ, ಪಾಲಕ್‌ ₹3 ಸಾವಿರ, ಹಿರೇಕಾಯಿ ಹಾಗೂ ಕೊತಂಬರಿ ₹2 ಸಾವಿರ, ಬೆಂಡೆಕಾಯಿ, ಟೊಮೆಟೊ, ಬೀನ್ಸ್ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ₹1 ಸಾವಿರ ಕುಸಿದಿದೆ.

ನಗರದ ಸಗಟು ತರಕಾರಿ ಮಾರುಕಟ್ಟೆಗೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ, ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್‌ನಿಂದ ಮೆಣಸಿನಕಾಯಿ, ಬೀನ್ಸ್, ಬೀಟ್‌ರೂಟ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಆವಕವಾಗಿದೆ.

‘ಜಿಲ್ಲೆಯ ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಕರಿಬೇವು, ಕೊತ್ತಂಬರಿ, ಬದನೆಕಾಯಿ, ಬೆಂಡೆಕಾಯಿ, ಸಬ್ಬಸಗಿ ಮತ್ತು ಪಾಲಕ್‌ ಸೊಪ್ಪು ಬಂದಿದೆ’ ಎಂದು ಗಾಂಧಿ ಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನ ರೈತರು ಮಾತ್ರ ಅಲ್ಪಸ್ವಲ್ಪ ತರಕಾರಿ ಬೆಳೆಯುತ್ತಿದ್ದಾರೆ. ಪ್ರತಿ ವಾರ ಬೆಳಗಾವಿಯಿಂದ ಬರುತ್ತಿದ್ದ ತರಕಾರಿ ಕಡಿಮೆಯಾಗಿದೆ. ಮಹಾರಾಷ್ಟ್ರ, ತೆಲಂಗಾಣ ಹಾಗೂ ಉತ್ತರಪ್ರದೇಶದ ತರಕಾರಿ ನಗರದ ಮಾರುಕಟ್ಟೆಗೆ ಬರುತ್ತಿದೆ.

ಸೊಲ್ಲಾಪುರ ಹಾಗೂ ಔರಂಗಾಬಾದ್‌ ಜಿಲ್ಲೆಯಲ್ಲಿ ಬೆಳೆಯುವ ತರಕಾರಿಯೇ ಬೀದರ್‌ ಜಿಲ್ಲೆಯ ಜನರಿಗೆ ಆಧಾರವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದೆ. ಕೃಷಿ ಹಾಗೂ ತೋಟಗಾರಿಕೆ ಮೇಲೂ ಪರಿಣಾಮ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT