ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಕೈಕೊಟ್ಟ ಮುಂಗಾರು, ಬಿತ್ತನೆ ಮಾಡಿದ ಹಿಂಗಾರು ಬೆಳೆಯೂ ಹಾನಿ

ಗುರುಪ್ರಸಾದ ಮೆಂಟೇ
Published 24 ನವೆಂಬರ್ 2023, 6:01 IST
Last Updated 24 ನವೆಂಬರ್ 2023, 6:01 IST
ಅಕ್ಷರ ಗಾತ್ರ

ಹುಲಸೂರ: ಮುಂಗಾರು ಹಂಗಾಮಿನ ಅವಧಿಯ ಬೆಳೆಗಳನ್ನು ಕಳೆದುಕೊಂಡು ನಷ್ಟದಲ್ಲಿರುವ ಅನ್ನದಾತರಿಗೆ, ಹಿಂಗಾರು ಹಂಗಾಮಿನ ಮೊದಲ ಅರ್ಧ ಅವಧಿ ಮುಗಿಯುತ್ತಾ ಬಂದರೂ ಸಹ ವಾಡಿಕೆಯಷ್ಟು ಮಳೆ ಬಾರದೇ ಇರುವುದು ಚಿಂತೆಗೆ ದೂಡಿದೆ.

ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ತಾಲ್ಲೂಕಿನ ಮಿರಕಲ, ಆಳವಾಯಿ, ಹರೆವಾಡಿ , ಹನುಮಂತವಾಡಿ, ಮೇಹಕರ, ಗುಂಜರ್ಗ, ಹಾಲಹಳ್ಳಿ ಸೇರಿ ಹಲವೆಡೆ ಮೊಳಕೆಯೊಡೆದ ಬೀಜಗಳು ಅಲ್ಲೇ ಮುರುಟಿ ಹೋಗಲಾರಂಭಿಸಿವೆ.

ಇನ್ನು, ತಾಲ್ಲೂಕಿನ ಕೆಲವೆಡೆ ತೊಗರಿ ಬೆಳೆಯು ಕಾಯಿ ಕಟ್ಟುವ ಹಂತದಲ್ಲಿವೆ. ತೇವಾಂಶ ಕೊರತೆಯಿಂದ ಬೆಳೆಯು ಸಂಪೂರ್ಣ ಒಣಗಿ ನಿಂತಿವೆ. ಅಳಿದುಳಿದ ತೊಗರಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಯತ್ನವನ್ನು ಮಾಡುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 19,286 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. 18,680 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಹುಲಸೂರು ಸಹಾಯಕ ಕೃಷಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಹಿಂಗಾರಿನ ಅವಧಿಯಲ್ಲಿ ಈವರೆಗೆ 2,850 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಇದು ಶೇ 45.02 ಆಗಿದೆ.

ಈ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಎಲ್ಲಾ ರೈತರು ಉತ್ತಿ, ಬಿತ್ತಿ ಬೆಳೆ ಇಟ್ಟರೂ ಮಳೆ ಇಲ್ಲದೆ ಬೆಳೆಗಳು ಒಣಗಿದೆ. ಕಳೆ ತೆಗೆಯುವುದು, ಗೊಬ್ಬರ ಹಾಕುವುದು ಸೇರಿ ಹತ್ತಾರು ಸಾವಿರ ರೂಪಾಯಿಗಳ ಬಂಡವಾಳ ಹಾಕಿದ್ದಾರೆ. ಆದರೆ, ಬೆಳೆ ಕೈಗೆ ಬರದೆ ಹಾಕಿದ ಬಂಡವಾಳ ವಾಪಸ್ಸಾಗಿಲ್ಲ. ಹಾಗಾಗಿ ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ ಮೇಲಧಿಕಾರಿಗಳಿಗೆ ವರದಿ ನೀಡಿ ಪ್ರತಿ ಎಕರೆಗೆ ₹25 ಸಾವಿರ ಬೆಳೆ ಪರಿಹಾರವನ್ನು ನೀಡಬೇಕು ಎಂದು ರೈತ ಸಂಘಟನೆಗಳ ಒತ್ತಾಯವಾಗಿದೆ.

ತಾಲ್ಲೂಕಿನಲ್ಲಿ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ಜಲ ಮೂಲಗಳನ್ನು ಗೊತ್ತು ಮಾಡಬೇಕು. ಬ್ಯಾಂಕ್‌ ಹಾಗೂ ಖಾಸಗಿಯವರಿಂದ ಸಾಲ ಪಡೆದ ರೈತರು ಸಾಲ, ಬಡ್ಡಿ, ಚಕ್ರ ಬಡ್ಡಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಜೀವನ ನಡೆಸಲಾಗದೆ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದಾರೆ. ಸರ್ಕಾರ ಶೀರ್ಘ ಪರಿಹಾರ ಹಣ ಬಿಡುಗಡೆ ಮಾಡಬೇಕು. ಇದರ ಜತೆಗೆ ದನಕರುಗಳಿಗೆ ಮೇವು, ನೀರು ಒದಗಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಬರಗಾಲಕ್ಕೆ ಸಂಬಂಧಿಸಿದಂತೆ ತಮ್ಮ ಹಂತದಲ್ಲಿ ಬಗೆಹರಿಸುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಸರ್ಕಾರ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳಾಗಿದ್ದು ಅವುಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.
ಶಿವಾನಂದ ಮೇತ್ರಿ ತಹಶೀಲ್ದಾರ್‌
ನೀರಾವರಿ ಸೌಲಭ್ಯ ಇರುವ ರೈತರಿಗೆ ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ತುಂತುರು ಹಾಗೂ ಹನಿ ನೀರಾವರಿ ಯೋಜನೆ ಅಡಿಯಲ್ಲಿ ಸ್ಪಿಂಕ್ಲರ್ ಪೈಪ್‌ ನೀಡಲಾಗುತ್ತಿದ್ದು ಅದರ ಸದುಪಯೋಗಪಡಿಸಿಕೊಳ್ಳಿ.
ಮಾರ್ಥಂಡ ಮಚಕುರಿ ಸಹಾಯಕ ಕೃಷಿ ನಿರ್ದೇಶಕ ಹುಲಸೂರ ತಾಲ್ಲೂಕು
ಬರ ಘೋಷಣೆಯಾದರೂ ಬೆಳೆಹಾನಿಗೆ ಪರಿಹಾರ ಇನ್ನೂ ಬಂದಿಲ್ಲ. ಶೀಘ್ರ ಸರ್ಕಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಾಕಿ ನುಡಿದಂತೆ ನಡೆಯಬೇಕು.
ಮಲ್ಲಿಕಾರ್ಜುನ್ ಸ್ವಾಮಿ ಜಿಲ್ಲಾಧ್ಯಕ್ಷ ಕರ್ಣಾಟಕ ರಾಜ್ಯ ರೈತ ಸಂಘ ಬೀದರ್
ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು. ನರೇಗಾದ ಅಡಿಯಲ್ಲಿ ಉದ್ಯೋಗ ಕಲ್ಪಿಸಲು ಪಿಡಿಒಗಳಿಗೆ ಸೂಚಿಸಲಾಗಿದೆ.
ಮಹದೇವ ಬಾಬಳಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ
ಗೋಶಾಲೆಗೆ ಆಗ್ರಹ
ಮಳೆ ಕೊರತೆಯಿಂದ ಬಿತ್ತಿದ ಬೆಳೆ ಬಾಡುತ್ತಿರುವುದು ಒಂದೆಡೆಯಾದರೆ ಜಾನುವಾರುಗಳಿಗೆ ಈಗಲೇ ಹಸಿ ಮೇವಿನ ಕೊರತೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಮೇವು ಸಮಸ್ಯೆ ಎದುರಾಗಬಹುದು. ಈಗಲೇ ಗೋಶಾಲೆ ತೆರೆಯಬೇಕೆಂಬ ಆಗ್ರಹ ಕೇಳಿ ಬಂದಿದೆ. ‘ಹಳ್ಳಿಗಳಲ್ಲಿ ಕೆಲಸವಿಲ್ಲದೆ ಕೃಷಿ ಕಾರ್ಮಿಕರು ನಗರಗಳತ್ತ ಗುಳೆ ಹೊರಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಎಲ್ಲ ಗ್ರಾಮಗಳಲ್ಲೂ ಗ್ರಾಮ ಪಂಚಾಯಿತಿಯಿಂದ ನರೇಗಾ ಕಾಮಗಾರಿ ಆರಂಭಿಸಿ ಕೆಲಸ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗೋಶಾಲೆ ತೆರೆದು ಮೇವಿನ ಬ್ಯಾಂಕ್‌ ಆರಂಭಿಸಬೇಕು. ಬರ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರೈತ ಸಂಘದ ಕಾರ್ಯದರ್ಶಿ ಚಂದ್ರಯ್ಯ ಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT