ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ. 2ರಂದು ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ: ಖರ್ಗೆ, ಸಿಎಂ, ಮಠಾಧೀಶರು ಭಾಗಿ

Published 30 ನವೆಂಬರ್ 2023, 9:45 IST
Last Updated 30 ನವೆಂಬರ್ 2023, 9:45 IST
ಅಕ್ಷರ ಗಾತ್ರ

ಬೀದರ್‌: ‘ಡಿಸೆಂಬರ್‌ 2ರಂದು ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಹಾಗೂ ‘ಲೋಕನಾಯಕ’ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಭಾಲ್ಕಿ ಪಟ್ಟಣದ ಬಿಕೆಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಡಾ. ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆದ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಬೆಂಗಳೂರು, ಡಾ. ಭೀಮಣ್ಣ ಖಂಡ್ರೆ ಜನ್ಮಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದನ ಗ್ರಂಥ ಬಿಡುಗಡೆಗೊಳಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯರು, ಶ್ರೀಶೈಲದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಜಿಡಗಾದ ಮುರುಘರಾಜೇಂದ್ರ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ, ಚಿತ್ತರಗಿಯ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಕಲಬುರಗಿಯ ಶರಣಬಸಪ್ಪ ಅಪ್ಪಾ, ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಕೊಟ್ಟೂರಿನ ಅನ್ನದಾನೀಶ್ವರ ಶಿವಯೋಗಿಗಳು, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು, ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬಿಷಪ್‌ ರಾಬರ್ಟ್‌ ಮಿರಾಂಡ, ಬಂತೆ ವರಜ್ಯೋತಿ ಸೇರಿದಂತೆ ನಾಡಿನ ಪ್ರಮುಖ ಧಾರ್ಮಿಕ ಮುಖಂಡರು ಭಾಗವಹಿಸುವರು. ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿನಂದನ ನುಡಿ ಆಡುವರು. ಸಚಿವ ಸಂಪುಟದ ಸಹದ್ಯೋಗಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಆಚರಣೆ, ಅಭಿನಂದನ ಗ್ರಂಥ ಬಿಡುಗಡೆಗೊಳಿಸಬೇಕೆನ್ನುವುದು ಅವರ ಅಭಿಮಾನಿಗಳ ಬಹುದಿನಗಳ ಒತ್ತಾಸೆಯಾಗಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ವೀರಶೈವ ಮಹಾಸಭೆಯ ಸಹಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಮ್ಮ ತಂದೆಯವರಾದ ಭೀಮಣ್ಣ ಖಂಡ್ರೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ನಿಜಾಮನ ವಿರುದ್ಧವೂ ಹೋರಾಟ, ಸಂಘರ್ಷ ಮಾಡಿದ್ದಾರೆ. ಬಹುಸಂಖ್ಯಾತ ಕನ್ನಡಿಗರಿರುವ ಈ ಭಾಗ ಕರ್ನಾಟಕದಲ್ಲಿ ಉಳಿಯಬೇಕೆಂದು ರೈಲು ರೋಕೋ ಚಳವಳಿ ನಡೆಸಿದ್ದಾರೆ. ಲಕ್ಷಕ್ಕಿಂತ ಹೆಚ್ಚು ಸಹಿ ಸಂಗ್ರಹ ಮಾಡಿ ನೂರಾರು ಜನರನ್ನು ದೆಹಲಿಗೆ ಕರೆದೊಯ್ದು ಹೋರಾಡಿ, ಗಡಿ ಜಿಲ್ಲೆ ಬೀದರ್‌ ರಾಜ್ಯದಲ್ಲಿ ಉಳಿಸಿಕೊಂಡರು. ಅದಕ್ಕಾಗಿ ಅವರಿಗೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಕೃಷಿ ಆಧಾರಿತ ಬಿಎಸ್‌ಎಸ್‌ಕೆ ಕಾರ್ಖಾನೆ ಶುರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದರ ನಂತರ ಕಬ್ಬು ಬೆಳೆಗಾರರ ಅಗತ್ಯ ಮನಗಂಡು ಎಂಜಿಎಸ್‌ಎಸ್‌ಕೆ ಕೂಡ ಆರಂಭಿಸಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣರಿಗೆ ಶಿಕ್ಷಣ ಕೊಟ್ಟಿದ್ದಾರೆ. ಗ್ರಾಮೀಣ ತಾಂತ್ರಿಕ ಕಾಲೇಜಿನಿಂದ 13 ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕಲಿತಿದ್ದಾರೆ. ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಿದ್ದಾರೆ ಎಂದರು.

ಬರಗಾಲದಲ್ಲಿ ರೈತರಿಗೆ ಉಚಿತವಾಗಿ ಸರ್ಕಾರವೇ ಬೀಜ ನೀಡಬೇಕೆಂದು ಬೀಜ ಆಂದೋಲನ ನಡೆಸಿದ್ದರು. ಸರ್ಕಾರ ಆ ಆಂದೋಲನಕ್ಕೆ ಮಣಿದು ಎಲ್ಲಾ ರೈತರಿಗೂ ಉಚಿತವಾಗಿ ಬೀಜ ವಿತರಿಸಿತ್ತು. 371(ಜೆ), ನೀರಾವರಿ ಯೋಜನೆಗಳು, ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಿ ಜಾರಿಗೆ ತಂದಿದ್ದರು. ಮಹಾಸಭೆ ಅಧ್ಯಕ್ಷರಾಗಿ, ಜಾತ್ಯತೀತರಾಗಿ ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದು ವಿವರಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌ ಮಾತನಾಡಿ, ಭೀಮಣ್ಣ ಖಂಡ್ರೆಯವರು ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದವರು. ಹೋರಾಟಗಳಿಗೆ ಶಕ್ತಿ ತುಂಬಿದವರು. ಅವರಿಗೆ ದೊಡ್ಡ ಇತಿಹಾಸ ಇದೆ. ಅವರ ಸೇವೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.

ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ಮುಖಂಡರಾದ ಮಹಾಂತೇಶ ಪಾಟೀಲ, ವಿಜಯಕುಮಾರ, ಮನೋಹರ, ಆನಂದ ದೇವಪ್ಪ ಹಾಜರಿದ್ದರು.

‘ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮವಿದು’

‘ಭಾಲ್ಕಿಯಲ್ಲಿ ಡಿ. 2ರಂದು ಹಮ್ಮಿಕೊಂಡಿರುವ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಪಕ್ಷಾತೀತ, ಜಾತ್ಯತೀತ ವಾದುದು’ ಎಂದು ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ತಿಳಿಸಿದರು.

ನಾಡಿನ ಎಲ್ಲಾ ಪ್ರಮುಖ ಮಠಾಧೀಶರು, ರಾಜಕೀಯ ನೇತಾರರು, ಸ್ವಯಂ ಸೇವಾ ಸಂಸ್ಥೆಗಳವರು ಭಾಗವಹಿಸುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ನಾಡಿಗೆ, ದೇಶಕ್ಕೆ ಭೀಮಣ್ಣ ಖಂಡ್ರೆಯವರ ಕೊಡುಗೆ ಬಹಳ ದೊಡ್ಡದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT