ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯಜ್ಞಾನಕ್ಕೆ ‘ನಾಲ್ದೇರಾ’ ಪೂರಕ ಕಥನ: ಘಾಳಿ

ಪ್ರವಾಸಿಗರೊಂದಿಗೆ ಮುಖಾಮುಖಿ ಕಾರ್ಯಕ್ರಮ
Last Updated 12 ನವೆಂಬರ್ 2020, 15:27 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಬರೆದ `ನಾಲ್ದೇರಾ’ ಪ್ರವಾಸ ಕಥನವು ವಿಷಯಜ್ಞಾನ ಪಡೆಯಲು ಪೂರಕ ಕೃತಿಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಆಶ್ರಯದಲ್ಲಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ‘ನಾಲ್ದೇರಾ’ ಕೃತಿ ಪರಿಚಯ ಹಾಗೂ ಸಹ ಪ್ರವಾಸಿಗರೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿವಕುಮಾರ ಕಟ್ಟೆ ಅವರು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಅವರು ಕಂಡ ದೃಶ್ಯಗಳು ಮತ್ತು ಹೊಸ ಅನುಭವಗಳನ್ನು ಬರೆದಿದ್ದಾರೆ. ಸಾಮಾನ್ಯ ವ್ಯಕ್ತಿಯೂ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ಪುಸ್ತಕ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಹೇಳಿದರು.

ಪುಸ್ತಕ ಪರಿಚಯಿಸಿದ ಸಾಹಿತಿ ಸಂಜೀವಕುಮಾರ ಅತಿವಾಳೆ, ‘ಸೃಜನಶೀಲ ಬರಹಗಾರ ಶಿವಕುಮಾರ ಕಟ್ಟೆಯವರು ಉತ್ತರ ಭಾರತದಲ್ಲಿ ಕಂಡ ಪ್ರೇಕ್ಷಣಿಯ ಹಾಗೂ ರಮಣೀಯ ತಾಣಗಳನ್ನು ಕೇಂದ್ರವಾಗಿಟ್ಟುಕೊಂಡು ನಾಲ್ದೇರಾ ಕೃತಿಯನ್ನು ರಚಿಸಿದ್ದಾರೆ. ದೆಹಲಿ, ಚಂಡಿಗಢ, ಪಾಣಿಪತ, ಕುರುಕ್ಷೇತ್ರ ಸೇರಿದಂತೆ ಹಲವಾರು ಸ್ಥಳಗಳ ವಿಶಿಷ್ಟ ಶೈಲಿಯಲ್ಲಿ ವಿವರಿಸಿದ್ದಾರೆ’ ಎಂದರು.

‘ಕೃತಿಯುದ್ದಕ್ಕೂ ಐತಿಹಾಸಿಕ ಘಟನೆಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದು, ಯಾವುದೇ ಸ್ಮಾರಕ, ಕಟ್ಟಡ, ಸ್ಥಳಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಾಗ ಮಾಹಿತಿಯನ್ನು ಕರಾರುವಕ್ಕಾಗಿ ದಾಖಲಿಸಿರುವುದರಿಂದ ಕೃತಿಯು ಓದುಗರಿಗೆ ಇಷ್ಟವಾಗುತ್ತದೆ. ಕೊನೆಯವರೆಗೂ ಓದಿಸಿಕೊಂಡು ಹೋಗುವ ಮೌಲ್ಯಯುತ ಕೃತಿ ಇದಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಪ್ರವಾಸ ಕಥನಗಳ ಓದುವಿಕೆಯಿಂದ ಹೊಸ ಹೊಸ ವಿಷಯಗಳನ್ನು ತಿಳಿಯಲು ಸಾಧ್ಯ. ಕೆಲಸದೊತ್ತಡದ ನಡುವೆಯೇ ಸೃಜನಾತ್ಮಕ ಹಾಗೂ ಉಪಯೋಗಕರ ಕೃತಿ ಬರೆದ ಶಿವಕುಮಾರ ಕಟ್ಟೆಯವರು ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.

ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಸವರಾಜ ಬಲ್ಲೂರ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತು ಸೃಜನಾತ್ಮಕ ಕವಿ ಮತ್ತು ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಮ್ಮೇಳನಗಳು, ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರವಾಸ ಕಥನದಲ್ಲಿ ಬರುವ ಸಹ ಪ್ರವಾಸಿಗರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುತ್ತಿರುವುದು ಹೊಸ ಪ್ರಯೋಗವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರು ಪ್ರವಾಸದ ಅನುಭವಗಳನ್ನು ಹಂಚಿಕೊಂಡರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಪ್ರಭು ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ, ಶಿರೋಮಣಿ ತಾರೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮಚೇಂದ್ರ, ವಿಜಯಶೆಟ್ಟಿ, ರಾಜಶೇಖರ ಮಿತ್ರಾ, ಅರುಣಕುಮಾರ, ವಿದ್ಯಾಸಾಗರ, ಶೈಲಜಾ, ಸುರೇಖಾ, ಗೀತಾ ಪಾಟೀಲ, ಅಸ್ಮಾ, ಜ್ಯೋತಿ ಇದ್ದರು.

ನಾಲ್ದೇರಾ ಸಹಪ್ರವಾಸಿಗರಾದ ಮಲ್ಲಿಕಾರ್ಜುನ ಬಿ., ಬಕ್ಕಪ್ಪ ನಿರ್ಣಾಕರ್, ರವಿಂದ್ರಕುಮಾರ ಬಡಿಗೇರ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು. ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ರಮೇಶ ಬಿರಾದಾರ, ರಾಮಚಂದ್ರ ಗಣಾಪೂರ, ಹಿರಿಯ ಕಲಾವಿದರಾದ ವಿಜಯಕುಮಾರ ಸೊನಾರೆ ಅನಿಸಿಕೆಗಳನ್ನು ಹಂಚಿಕೊಂಡರು.

ಹಿರಿಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ ಸ್ವಾಗತ ಗೀತೆ ಹಾಡಿದರು. ದೇವಿಸಾಸ ಜೋಶಿ ನಿರೂಪಿಸಿದರು. ಮಲ್ಲಿಕಾರ್ಜುನ ಬಿ.ಆರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT