ಮಂಗಳವಾರ, ಜನವರಿ 31, 2023
27 °C
ಕಬ್ಬಿಗೆ ಯೋಗ್ಯ ಬೆಲೆ ನಿಗದಿಪಡಿಸಲು ಆಗ್ರಹ

ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕಬ್ಬಿಗೆ ಯೋಗ್ಯ ಬೆಲೆ ನಿಗದಿಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘದ ಮುಂದಾಳತ್ವದಲ್ಲಿ ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಬೆಳಿಗ್ಗೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಗಣೇಶ ಮೈದಾನದಲ್ಲಿ ಸೇರಿದ ರೈತರು ಜನರಲ್ ಕಾರ್ಯಪ್ಪ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಅಂಬೇಡ್ಕರ್ ವೃತ್ತಕ್ಕೆ ಬಂದರು. ಅಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಬಳಿಕ ಮಹಾವೀರ ವೃತ್ತ, ಬಸವೇಶ್ವರ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಇಡೀ ದೇಶದಲ್ಲೇ ಬೀದರ್‍ನಲ್ಲಿ ರೈತರ ಕಬ್ಬಿಗೆ ಅತಿ ಕಡಿಮೆ ಬೆಲೆ ಕೊಡಲಾಗುತ್ತಿದೆ. ಹಿಂದೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸರಾಸರಿ ಸಕ್ಕರೆ ಇಳುವರಿ ಶೇ 11 ರಿಂದ ಶೇ 11.5 ರಷ್ಟು ಬರುತ್ತಿತ್ತು. ಕೇಂದ್ರ ಸರ್ಕಾರದ ಎಫ್‍ಆರ್‍ಪಿ ನಿಗದಿಪಡಿಸಿದ ನಂತರ ಕೇವಲ ಶೇ 9 ರಷ್ಟು ಇಳುವರಿ ತೋರಿಸಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹ 2,500 ಬೆಲೆ ನಿಗದಿಪಡಿಸಬೇಕು. ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಮಾತ್ರ 2021-22ನೇ ಸಾಲಿಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‍ಗೆ ₹ 2,050 ಬೆಲೆ ಸಂದಾಯ ಮಾಡಿದೆ. ಉಳಿದ ಕಾರ್ಖಾನೆಗಳಿಗೂ ಇದೇ ಬೆಲೆ ಪಾವತಿಸಲು ಸೂಚಿಸಬೇಕು. ಶೀಘ್ರ ಕಬ್ಬು ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ಕಲ್ಪಿಸಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ 12 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಲಾಭ ಎಲ್ಲ ಅರ್ಹ ರೈತರಿಗೂ ದೊರಕುವಂತೆ ನೋಡಿಕೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ರೈತರ ಹೊಲಗಳಿಗೆ ನಮ್ಮ ಹೊಲ ನಮ್ಮ ದಾರಿ ಯೋಜನೆ ಅಡಿ ರಸ್ತೆ ನಿರ್ಮಿಸಬೇಕು. ಕಾರಂಜಾ ಕಾಲುವೆ ಮೂಲಕ ರೈತರ ಹೊಲಗಳಿಗೆ ನೀರು ಹಾಯಿಸಬೇಕು. ಕಾರಂಜಾ ಸಂತ್ರಸ್ತರಿಗೆ ಪ್ರತಿ ಎಕರೆಗೆ ರೂ. 20 ಲಕ್ಷ ಪರಿಹಾರ ಕೊಡಬೇಕು. ಮನ್ನಾಎಖ್ಖೆಳ್ಳಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಿಸಬೇಕು. ಸರ್ಕಾರದ ವತಿಯಿಂದಲೇ ಎಲ್ಲ ರೈತರ ಜಮೀನಿನ ಮಾಪನ ಮಾಡಿಸಬೇಕು ಎಂದು ಆಗ್ರಹಿಸಿದರು.
15 ದಿನಗಳ ಒಳಗೆ ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವ ವಹಿಸಿದ್ದರು.
ಸಂಘದ ರಾಜ್ಯ ಪ್ರತಿನಿಧಿ ಶೇಷರಾವ್ ಕಣಜಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಉಪಾಧ್ಯಕ್ಷರಾದ ಚಂದ್ರಶೇಖರ ಜಮಖಂಡಿ, ಸಿದ್ದಣ್ಣ ಭೂಶೆಟ್ಟಿ, ಶಂಕರೆಪ್ಪ ಪಾರಾ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೋಭಾವತಿ ಕಾರಬಾರಿ, ಮುಖಂಡರಾದ ಸತೀಶ್ ನನ್ನೂರೆ, ಸುಭಾಷ್ ರಗಟೆ, ಬಾಬುರಾವ್ ಜೋಳದಾಪಕಾ, ನಾಗಯ್ಯ ಸ್ವಾಮಿ, ಪ್ರವೀಣ್ ಕುಲಕರ್ಣಿ, ಪ್ರಕಾಶ ಬಾವಗೆ, ಮಲ್ಲಿಕಾರ್ಜುನ ಬಿರಾದಾರ, ಭಾಗ್ಯಶ್ರೀ ದೇಶಮುಖ, ಮಹಾನಂದಾ ದೇಶಮುಖ, ವಿಠ್ಠಲರಾವ್ ಪಾಟೀಲ, ಸಿದ್ದಪ್ಪ ಯರಬಾಗ್, ಸುಮಂತ ಗ್ರಾಮಲೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು