ಸೋಮವಾರ, ಮಾರ್ಚ್ 8, 2021
27 °C
ನಬಾರ್ಡ್‌ನ ಬೆಂಗಳೂರಿನ ಸಹಾಯಕ ಮಹಾಪ್ರಬಂಧಕ ರೋನಿ ರಾಜು ಹೇಳಿಕೆ

ಪಿಕೆಪಿಎಸ್‌ಗಳಿಂದ ಆರ್ಥಿಕ ಸದೃಢತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ರೈತರಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿವೆ. ದೇಶದ ಅರ್ಥವ್ಯವಸ್ಥೆ ಬಲಗೊಳಿಸುವಲ್ಲಿಯೂ ನೆರವಾಗಿವೆ’ ಎಂದು ನಬಾರ್ಡ್‌ನ ಬೆಂಗಳೂರಿನ ಸಹಾಯಕ ಮಹಾ ಪ್ರಬಂಧಕ ರೋನಿ ರಾಜು ಹೇಳಿದರು.

ಇಲ್ಲಿಯ ಡಿ.ಸಿ.ಸಿ. ಬ್ಯಾಂಕಿನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಚಿಕ್ಕಮಗಳೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಪ್ಯಾಕ್ಸ್‌ಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಏರ್ಪಡಿಸಿರುವ ಮೂರು ದಿನಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ 96,540 ಪಿಕೆಪಿಎಸ್‌ಗಳಿದ್ದು 14 ಕೋಟಿ ಸದಸ್ಯರ ಬಂಡವಾಳದೊಂದಿಗೆ ರೈತರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ಬದಲಾದ ಪರಿಸ್ಥಿತಿಗಳಿಗೆ ತಕ್ಕಂತೆ ಸುಧಾರಣೆ ಕಾಣುತ್ತಿರುವ ಸಹಕಾರ ವ್ಯವಸ್ಥೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದು ಪಿಕೆಪಿಎಸ್‌ಗಳು ಕಂಪ್ಯೂಟರೀಕೃತ ವ್ಯವಹಾರ ನಡೆಸುತ್ತಿವೆ’ ಎಂದರು.

‘ಪ್ರಧಾನಮಂತ್ರಿ ಮೋದಿ ಅವರ ಆಶಯದಂತೆ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಹಾಗೂ ಸ್ಥಳೀಯ ಆರ್ಥಿಕತೆಗೆ ಬಲ ತುಂಬಲು ಪ್ರಯತ್ನಿಸುತ್ತಿವೆ. ಪಿಕೆಪಿಎಸ್‌ಗಳ ಸುಧಾರಣೆಗಾಗಿ ನಬಾರ್ಡ್ ಸಹ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ತಿಳಿಸಿದರು.

‘ಕಂಪ್ಯೂಟರೀಕರಣಕ್ಕಾಗಿ ಶೇಕಡ 50ರಷ್ಟು ಅನುದಾನ ಮತ್ತು ಪ್ಯಾಕ್ಸ್‌ಗಳಲ್ಲಿ ಅಭಿವೃದ್ಧಿಗಾಗಿ ಸ್ವಂತ ಕಟ್ಟಡ ನಿರ್ಮಾಣ ವ್ಯಾಪಾರಿ ಮಳಿಗೆ, ಗೋದಾಮು, ಶಿಥಲೀಕರಣ ಘಟಕ ನಿರ್ಮಿಸಲು ಸಹಾಯಧನದೊಂದಿಗೆ ಸಾಲ ನೀಡುತ್ತಿದೆ. ಇದರ ಲಾಭ ಪಡೆಯಬೇಕು’ ಎಂದು ಹೇಳಿದರು.

‘ಸಹಕಾರ ಸಂಘಗಳು ರೈತರಿಗೆ ಬೆಳೆಸಾಲ, ಮಧ್ಯಮಾವಧಿ ಸಾಲ ಮತ್ತು ಪ್ರಧಾನ ಮಂತ್ರಿ ಫಸಲ್‌ಬಿಮಾ ಯೋಜನೆ ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯ ಮೊದಲಾದ ವ್ಯವಹಾರಗಳನ್ನು ನಡೆಸುವುದರ ಜತೆಗೆ ಉತ್ಪನ್ನ ಖರೀದಿ, ಮಾರಾಟ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ ನೀಡಬೇಕು. ಸಿಬ್ಬಂದಿ ತಮ್ಮ ವೃತ್ತಿ ಕೌಶಲ ಹೆಚ್ಚಿಸಿಕೊಂಡು ಇದಕ್ಕೆ ತಯಾರಾಗಬೇಕು. ಆ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು’ ಎಂದರು.

ಡಿ.ಸಿ.ಸಿ. ಬ್ಯಾಂಕಿನ ಆರ್ಥಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಮಾತನಾಡಿ, ‘ಸಹಕಾರ ಸಂಘಗಳು ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಸ್ಥಳೀಯವಾಗಿ ಅಗತ್ಯವಿರುವ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡುವ ಮೂಲಕ ವ್ಯವಹಾರ ಹೆಚ್ಚಿಸಕೊಳ್ಳಬೇಕು’ ಎಂದು ತಿಳಿಸಿದರು.

‘ಕೇವಲ ಕೃಷಿ ಸಾಲ ನೀಡುವುದರ ಮೇಲೆ ಅವಲಂಬಿತರಾಗದೆ ಸ್ವಂತ ಬಂಡವಾಳ ಕ್ರೋಢೀಕರಿಸಲು ಮುಂದಾಗಬೇಕು. ಇದರಿಂದ ಸಂಸ್ಥೆಗಳು ಇನ್ನಷ್ಟು ಸದೃಢಗೊಳ್ಳಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಹಾಜನ ಮಾತನಾಡಿದರು. ನಬಾರ್ಡ್ ಅಧಿಕಾರಿ ಮನೀಶ್ ಕುಮಾರ, ಎಸ್.ಜಿ ಪಾಟೀಲ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಮಹಾಲಿಂಗ ನಿರೂಪಿಸಿದರು. ಅನಿಲ ಪರೇಶ್ಯಾನೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು