ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಮ್ಸ್‌ನಲ್ಲಿ ಈ ವರ್ಷದಿಂದ ಪಿಜಿ ಕೋರ್ಸ್‌

ನಾಲ್ಕು ಹೊಸ ವಿಭಾಗಗಳಲ್ಲಿ 20 ಸೀಟುಗಳಿಗೆ ಈ ವರ್ಷದಿಂದಲೇ ಪ್ರವೇಶ
Published 8 ಜೂನ್ 2024, 5:38 IST
Last Updated 8 ಜೂನ್ 2024, 5:38 IST
ಅಕ್ಷರ ಗಾತ್ರ

ಬೀದರ್‌: ನಗರದ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್‌) ನಾಲ್ಕು ಹೊಸ ಸ್ನಾತಕೋತ್ತರ (ಪಿಜಿ) ಕೋರ್ಸ್‌ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿದೆ.

ಬ್ರಿಮ್ಸ್‌ನಲ್ಲಿ ಪಿ.ಜಿ. ಕೋರ್ಸ್‌ ಆರಂಭಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಕೊನೆಗೂ ಅದಕ್ಕೆ ಒಪ್ಪಿಗೆ ಸಿಕ್ಕಿರುವುದರಿಂದ ಈ ಭಾಗದ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಕೀಲು ಮತ್ತು ಮೂಳೆ ಶಾಸ್ತ್ರ ವಿಭಾಗ (ಆರ್ಥೋ), ನೇತ್ರಶಾಸ್ತ್ರ ವಿಭಾಗ (ಆಪಥಾಲಮೊಲಾಜಿ), ಹೆರಿಗೆ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ (ಒಬಿಜಿ) ಮತ್ತು ಸೂಕ್ಷ್ಮ ಜೀವ ವಿಜ್ಞಾನಶಾಸ್ತ್ರ ವಿಭಾಗದ (ಮೈಕ್ರೊ ಬಯಲಾಜಿ) ಕೋರ್ಸ್‌ಗಳನ್ನು ಆರಂಭಿಸಲು ಎನ್‌ಎಂಸಿ ಅಧಿಕೃತ ಒಪ್ಪಿಗೆ ನೀಡಿದೆ. ವರ್ಚುವಲ್‌ ಮೂಲಕ ಬ್ರಿಮ್ಸ್‌ನಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ನಂತರವೇ ಒಪ್ಪಿಗೆ ಸಿಕ್ಕಿದೆ ಎಂದು ಗೊತ್ತಾಗಿದೆ.

ನಾಲ್ಕು ವಿಭಾಗಗಳಲ್ಲಿ ತಲಾ ಐದು ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 20 ಸೀಟುಗಳು ಇರಲಿವೆ. ಪ್ರಸಕ್ತ ವರ್ಷದಿಂದಲೇ ಪಿ.ಜಿ ಕೋರ್ಸ್‌ಗಳು ಆರಂಭವಾಗಲಿದ್ದು, ಬರುವ ಆಗಸ್ಟ್‌ನಲ್ಲಿ ಪ್ರವೇಶ ಪ್ರಕ್ರಿಯೆ ಶುರುವಾಗಲಿದೆ.

ಪಿ.ಜಿ ಕೋರ್ಸ್‌ಗಳ ಆರಂಭದಿಂದ ಬ್ರಿಮ್ಸ್‌ನಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳು ಕೂಡ ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ. ಎಂಬಿಬಿಎಸ್‌ ಪೂರ್ಣಗೊಳಿಸಿದ ಜಿಲ್ಲೆಯ ವಿದ್ಯಾರ್ಥಿಗಳು ಅನ್ಯ ಭಾಗಗಳಿಗೆ ಹೋಗುವುದು ತಪ್ಪಲಿದೆ.

2007ರಲ್ಲಿ ಬ್ರಿಮ್ಸ್‌ ಆರಂಭಗೊಂಡಿದೆ. ಪಿ.ಜಿ ಕೋರ್ಸ್‌ ಆರಂಭಿಸಬೇಕೆನ್ನುವುದು ಸ್ಥಳೀಯರ ಬೇಡಿಕೆಯಾಗಿತ್ತು. ರಾಜ್ಯದ ಇತರೆ ಜಿಲ್ಲೆಗಳ ಮೆಡಿಕಲ್‌ ಕಾಲೇಜುಗಳಲ್ಲಿ ಪಿ.ಜಿ. ಕೋರ್ಸ್ ಆರಂಭಿಸಲು ಅನುಮತಿ ಸಿಕ್ಕಿತ್ತು. ಆದರೆ, ಬೀದರ್‌ ಮೆಡಿಕಲ್‌ ಕಾಲೇಜಿಗೆ ಸುದೀರ್ಘ 17 ವರ್ಷಗಳ ನಂತರ ಪಿ.ಜಿ. ಕೋರ್ಸ್‌ ಆರಂಭಿಸಲು ಒಪ್ಪಿಗೆ ಸಿಕ್ಕಿದೆ.

ಬ್ರಿಮ್ಸ್‌ನಲ್ಲಿ ನಾಲ್ಕು ಹೊಸ ಪಿ.ಜಿ ಕೋರ್ಸ್‌ಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಬರುವ ದಿನಗಳಲ್ಲಿ ಇನ್ನೂ ಕೆಲ ಕೋರ್ಸ್‌ಗಳಿಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಹೊಸ ಕೋರ್ಸ್‌ಗಳಿಗೆ ಆಗಸ್ಟ್‌ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.
ಡಾ. ಶಿವಕುಮಾರ ಶೆಟಕಾರ ಬ್ರಿಮ್ಸ್‌ ನಿರ್ದೇಶಕ

ಅನುಮತಿ ದೊರೆತ ಹೊಸ ಪಿ.ಜಿ ಕೋರ್ಸ್‌ಗಳು * ಕೀಲು ಮತ್ತು ಮೂಳೆ ಶಾಸ್ತ್ರ ವಿಭಾಗ * ನೇತ್ರಶಾಸ್ತ್ರ ವಿಭಾಗ (ಆಪಥಾಲಮೊಲಾಜಿ) * ಹೆರಿಗೆ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ * ಸೂಕ್ಷ್ಮ ಜೀವ ವಿಜ್ಞಾನಶಾಸ್ತ್ರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT