ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಹೊಸ ಇವಿಎಂ ಸಮಗ್ರ ಮಾಹಿತಿ ಪಡೆಯಿರಿ

ತಾಲ್ಲೂಕು ಮಟ್ಟದಲ್ಲಿ ತಲಾ 10 ಮಾಸ್ಟರ್‌ ಟ್ರೇನರ್‌ಗಳಿಗೆ ತರಬೇತಿ
Last Updated 4 ಡಿಸೆಂಬರ್ 2020, 14:57 IST
ಅಕ್ಷರ ಗಾತ್ರ

ಬೀದರ್: ‘ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ನಡೆದ ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಮಪತ್ರ ಸಲ್ಲಿಕೆಯಿಂದ ಆರಂಭವಾಗಿ ಮತದಾನ, ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆವರೆಗೂ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೀದರ್‌ನಲ್ಲಿ ಮಾತ್ರ ಹೊಸ ಮಾದರಿಯ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ಮತ ಯಂತ್ರಗಳ ಬಳಕೆಯ ಬಗೆಗೆ ಅಧಿಕಾರಿಗಳು ಚೆನ್ನಾಗಿ ಅರಿತುಕೊಳ್ಳಬೇಕು. ಮೊದಲೇ ತಿಳಿದುಕೊಂಡರೆ ಚುನಾವಣೆಯ ದಿನ ಗೊಂದಲಗಳು ಎದುರಾಗುವುದಿಲ್ಲ’ ಎಂದು ಹೇಳಿದರು.

ಮಾಸ್ಟರ್ ಟ್ರೇನರ್ ಡಾ. ಗೌತಮ ಅರಳಿ ಮಾತನಾಡಿ, ‘ಹೊಸ ಮಾದರಿಯ ಇವಿಎಂ ಬಳಕೆ ಸ್ವಲ್ಪ ಕ್ಲಿಷ್ಟಕರವಾಗಿರುತ್ತದೆ. ಹೀಗಾಗಿ ಚುನಾವಣೆ ಅಧಿಕಾರಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಆಯಾ ತಾಲ್ಲೂಕುವಾರು ವಾಟ್ಸ್‌ಆ್ಯಪ್‌ ಗ್ರುಪ್‌ ರಚಿಸಿ ಮಾರ್ಗದರ್ಶನ ನೀಡಲಾಗುತ್ತಿದೆ. ಸಂದೇಹಗಳಿದ್ದರೆ ಗ್ರುಪ್‌ನಲ್ಲಿ ಮೆಸೇಜ್‌ ಕಳಿಸಿ ಗೊಂದಲ ನಿವಾರಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಹೈದರಾಬಾದ್‌ನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್‌ (ಇಸಿಐಎಲ್)ನ ಅಧಿಕಾರಿಗಳುಡಿ.7ರಂದು ಜಿಲ್ಲಾ ರಂಗ ಮಂದಿರದಲ್ಲಿ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ ನೀಡಲಿದ್ದಾರೆ. ಪ್ರತಿ ತಾಲ್ಲೂಕಿಗೆ 10 ಮಾಸ್ಟರ್‌ ಟ್ರೇನರ್‌ಗಳನ್ನು ನಿಯೋಜಿಸಲಾಗಿದೆ. ಅವರು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶಾಶ್ವತ ಜಾತಿ ಪ್ರಮಾಣಪತ್ರ ಕೊಡಲಾಗಿದೆ. ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿರುವ ಪರಿಶಿಷ್ಟ ಅಭ್ಯರ್ಥಿಯಿಂದ ಹೊಸದಾಗಿ ಜಾತಿ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಹಿಂದುಳಿದ ವರ್ಗದವರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರ ಕೇವಲ ಆರು ತಿಂಗಳ ಅವಧಿ ವರೆಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ. ಹಿಂದುಳಿದ ವರ್ಗದ ಮೀಸಲಾತಿ ಅಡಿಯಲ್ಲಿ ಸ್ಪರ್ಧಿಸಲು ಬಯಸುವವರಿಂದ ಹೊಸದಾಗಿ ಜಾತಿ ಪ್ರಮಾಣಪತ್ರ ಪಡೆಯಬೇಕು. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ದಾಖಲೆಗಳನ್ನು ಪರಿಶೀಲಿಸಿ ತಕ್ಷಣ ಜಾತಿ ಪ್ರಮಾಣಪತ್ರ ಕೊಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣಾ ಕಾರ್ಯವನ್ನು ಹೇಗೆ ನಿಭಾಯಿಸಬೇಕು, ನಾಮಪತ್ರಗಳನ್ನು ಹೇಗೆ ಪಡೆಯಬೇಕು ಎಂಬಿತ್ಯಾದಿಗಳ ಕುರಿತು ಸಹ ವಿವರಣೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನ್‌ ಪಾಟೀಲ, ಭಾಲ್ಕಿ, ಬೀದರ್, ಬಸವಕಲ್ಯಾಣ, ಔರಾದ್, ಹುಮನಾಬಾದ್ ತಹಶೀಲ್ದಾರರು ಇದ್ದರು.

ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ 201 ಚುನಾವಣಾ ಅಧಿಕಾರಿಗಳು ಹಾಗೂ 211 ಸಹಾಯಕ ಮತಗಟ್ಟೆ ಅಧಿಕಾರಿಗಳು ಪಾಲ್ಗೊಂಡಿದ್ದರು.

178 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ

ಮೊದಲ ಹಂತದಲ್ಲಿ ಬಸವಕಲ್ಯಾಣದ 31, ಹುಲಸೂರಿನ 4, ಹುಮನಾಬಾದ್‌ನ 19, ಚಿಟಗುಪ್ಪದ 12, ಭಾಲ್ಕಿಯ 40 ಸೇರಿ ಒಟ್ಟು 106 ಗ್ರಾಮ ಪಂಚಾಯಿತಿಗಳಿಗೆ ಹಾಗೂ ಎರಡನೇ ಹಂತದಲ್ಲಿ ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನ ತಲಾ 33 , ಕಮಲನಗರ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳು ಸೇರಿ ಒಟ್ಟು 72 ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.ಜಿಲ್ಲೆಯ 8 ತಾಲ್ಲೂಕುಗಳ 178 ಗ್ರಾಮ ಪಂಚಾಯಿತಿಗಳ ಚುನಾವಣೆಗೆ 1,153 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 5,18,959 ಪುರುಷರು, 4,80,023 ಮಹಿಳೆಯರು ಹಾಗೂ 19 ಇತರೆ ಮತದಾರರು ಸೇರಿ ಒಟ್ಟು 9,99,001 ಮತದಾರರು ಜಿಲ್ಲೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT