ಸೋಮವಾರ, ಸೆಪ್ಟೆಂಬರ್ 27, 2021
23 °C
ಕಲಬುರ್ಗಿ ವಿಭಾಗ ಮಟ್ಟದ ಕಾರ್ಯಾಗಾರ

ಕಂದುರೋಗ: ಹೆಣ್ಣು ಕರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣದ ಮಹತ್ವದ ಕಾರ್ಯಕ್ರಮದಡಿ ರಾಜ್ಯಮಟ್ಟದ ಕಂದುರೋಗ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ವಿಭಾಗ ಮಟ್ಟದ ಕಾರ್ಯಾಗಾರ ಸೋಮವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಸಸಿಗೆ ನೀರು ಹಾಕುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ಕಾರ್ಯಾಗಾರದಲ್ಲಿ ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಪಾಲ್ಗೊಂಡಿದ್ದರು.

ಕಂದು ರೋಗ ಅಂದರೇನು?, ಅದನ್ನು ತಡೆಗಟ್ಟುವ ರೀತಿ ಹೇಗೆ?, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಏನು?
ಎನ್ನುವುದರ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ಕಂದು ರೋಗವು ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆ ಮೊದಲಾದ ಪ್ರಾಣಿಗಳಲ್ಲಿ ಕಂಡು ಬರುವ ಮಾರಕ ರೋಗವಾಗಿದೆ. ಈ ರೋಗದಿಂದ ಜಾನುವಾರುಗಳಲ್ಲಿ ಗರ್ಭಪಾತ, ಅನಾರೋಗ್ಯ ಹಾಗೂ ಬಂಜೆತನ ಉಂಟಾಗಿ ಪಶುಪಾಲಕರಿಗೆ ನಷ್ಟ ಉಂಟುಮಾಡುತ್ತದೆ.

ಈ ವಿಷಯವನ್ನು ರೈತರಿಗೆ ತಿಳಿಸಿ ಅಭಿಯಾನ ನಡೆಸಬೇಕು ಎಂದು ಸೂಚಿಸಲಾಯಿತು. ಜಿಲ್ಲೆಯಲ್ಲಿ ಇರುವ ಎಲ್ಲ 25 ಸಾವಿರ ಹೆಣ್ಣು ಕರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಲಸಿಕಾದಾರರು ಕೂಡ ಕಡ್ಡಾಯ ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ಧರಿಸಿ ಸುರಕ್ಷತೆಯಿಂದ ಲಸಿಕೆ ಹಾಕಬೇಕು ಎಂದು ಸಚಿವರು ಸಲಹೆ ಮಾಡಿದರು.

ಹೆಚ್ಚುವರಿ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಮಾತನಾಡಿ,‘ಪ್ರತಿ ಬಂಧ ಕೋಪಾಯವಾಗಿ 4-8 ತಿಂಗಳು ಪ್ರಾಯದ ಹಸು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸುವುದರಿಂದ ಜಾನುವಾರುಗಳ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು. ‘ಹಸು ಮತ್ತು ಎಮ್ಮೆಗಳ 4-8 ತಿಂಗಳ ಹೆಣ್ಣು ಕರುಗಳಿಗೆ ಮಾತ್ರ ಉಚಿತವಾಗಿ ಹಾಕಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಪ್ರಾಣಿ ಕಲ್ಯಾಣ ಸಹಾಯವಾಣಿ ಉಚಿತ ಕರೆ ಸಂಖ್ಯೆ 8277100200ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ಬೀದರ್ ಜಿಲ್ಲೆಯ ರೈತರಿಗೆ ತಿಳಿಸಿ ಅಭಿಯಾನದ ಯಶಸ್ಸಿಗೆ ಸಹಕರಿಸಲಾಗುವುದು’ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಬೂರೆ ತಿಳಿಸಿದರು.ಇಲಾಖೆ ನಿರ್ದೇಶಕ ಡಾ.ಮಂಜುನಾಥ ಪಾಳೆಗಾರ ಮಾತನಾಡಿದರು. ಕಾರ್ಯಾಗಾರದಲ್ಲಿ ಪಶುಪಾಲನಾ ಇಲಾಖೆಯ ಕಲಬುರ್ಗಿಯ ಉಪ ನಿರ್ದೇಶಕ ಡಾ.ಬಿ.ಎಸ್.ಪಾಟೀಲ, ರಾಯಚೂರಿನ ಡಾ.ಶಿವಣ್ಣ, ಬಳ್ಳಾರಿಯ ಪರಮೇಶ್ವರ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು