ಭಾನುವಾರ, ಜುಲೈ 3, 2022
24 °C
ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ಹೇಳಿಕೆ

ಶಾಲಾ, ಕಾಲೇಜುಗಳ ಪಠ್ಯದಲ್ಲಿ ಜಾನಪದ ಅಳವಡಿಸಿ: ರಾಣಿ ಸತ್ಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಶಾಲಾ ಪಠ್ಯದಲ್ಲಿ ಜಾನಪದ ಕಲೆ, ಸಾಹಿತ್ಯವನ್ನು ಪರಿಚಯಿಸಬೇಕಿದೆ. ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಕಲೆಗಳ ಪ್ರಾಯೋಗಿಕ ಶಿಕ್ಷಣ ನೀಡುವಂತಾಗಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ಕಲೆ, ಕಲಾವಿದರನ್ನು ಉಳಿಸಿಕೊಳ್ಳಲು, ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗಬಹುದು’ ಎಂದು ನಾಟ್ಯಶ್ರೀ ನೃತ್ಯಾಲಯದ ನಿದೇರ್ಶಕಿ, ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷೆ ರಾಣಿ ಸತ್ಯಮೂರ್ತಿ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ಸಾಹಿತ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಮತ್ತು ಎರಡನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನಪದರು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾವ್ಯ ಕಟ್ಟಿದರು. ಜಾನಪದ ಕಲೆಗಳು ಬರೀ ಸಂತಸವನ್ನಷ್ಟೇ ಕೊಡಲಿಲ್ಲ. ಆರೋಗ್ಯಕರ ಸಮಾಜದ ಕಾವಲುಗಾರನಂತೆಯೂ ಅವು ಕೆಲಸ ಮಾಡಿವೆ’ ಎಂದು ತಿಳಿಸಿದರು.

‘ಜನಪದ ನಮ್ಮ ಸಂಸ್ಕೃತಿಯ ಬೇರು. ಜಾನಪದ ಶಿಷ್ಟ ಸಾಹಿತ್ಯದ ಬೇರು. ಭಾರತವು ಜಾನಪದ ಸಾಹಿತ್ಯದ ತೊಟ್ಟಿಲಾಗಿದೆ. ಜನಪದರು ತಾವು ಪಟ್ಟಪಾಡುಗಳು, ಆದರ್ಶಗಳು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಉಳಿಯಲಿ ಎನ್ನುವ ಆಶಯದಿಂದ, ತಮಗೆ ಹೊಳೆದಂತೆ ಮುಕ್ತ ಮನಸ್ಸಿನಿಂದ ಜೇನುಗೂಡಿನಂತಹ ಸಾಹಿತ್ಯವನ್ನು ಕಟ್ಟಿದ್ದಾರೆ. ಕಲೆಯನ್ನು, ಕಲಾವಿದರನ್ನು ಸೃಷ್ಟಿಸಿದ್ದಾರೆ’ ಎಂದು ಹೇಳಿದರು.

‘ಜನಪದ ಸಾಹಿತ್ಯ ಮತ್ತು ಕಲೆಯ ಮೂಲ ಆಶಯ ಸುಂದರ ಸಮಾಜ ನಿರ್ಮಿಸುವುದಾಗಿತ್ತು. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟಿದ್ದರು. ಸ್ವಾಭಿಮಾನದ ವಿಷಯ ಬಂದಾಗ ಪ್ರಾಣವನ್ನೂ ಲೆಕ್ಕಿಸದ ಹಲವು ದೃಷ್ಟಾಂತಗಳನ್ನು ಜನಪದ ಸಾಹಿತ್ಯದಲ್ಲಿ ಕಾಣಬಹುದು. ಕೆರೆಗೆಹಾರ ಇದಕ್ಕೊಂದು ಉದಾಹರಣೆ. ಊರಿನ ಒಳಿತಿಗಾಗಿ ಕೆರೆಗೆ ಹಾರವಾಗುವ ಭಾಗಿರಥಿಯ ತ್ಯಾಗಮಯ ಬದುಕು ಪ್ರೇರಣದಾಯಕವಾಗಿದೆ’ ಎಂದರು.

‘ಈಗಿನ ಆಧುನಿಕ ಸಮಯದಲ್ಲಿ ಜನಪದ ಕಲೆಗಳು ಮರೆಯಾಗುತ್ತಿವೆ. ಊರಿನ ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ದೊಡ್ಡಾಟ, ಸಣ್ಣಾಟ, ಹಲಗೆವಾದನ, ವಾಲಕ, ಕಂಸಾಳೆ, ಕರಡಿಮಜಲು, ಡಪ್ಪಿನಾಟಗಳು ಮರೆಯಾಗಿ ನಗೆಹಬ್ಬ, ಸಂಗೀತ ಸಂಜೆ, ನೃತ್ಯ, ಕ್ರಿಕೆಟ್‍ ಟೂರ್ನಿಗಳು ರಾರಾಜಿಸುತ್ತಿವೆ’ ಎಂದು ತಿಳಿಸಿದರು.

‘ಕಲೆಗಳ ಜತೆಗೆ ಆಚರಣೆಗಳು, ಸಾಂಪ್ರದಾಯಿಕ ವೇಷಭೂಷಣಗಳೂ ಮರೆಯಾಗುತ್ತಿವೆ. ಭೂತೇರು, ಗೊಂದಲಿಗರು, ಡೊಂಬರು, ಪಾತರದವರು, ಬುಡಬುಡಿಕೆಯವರು ತಮ್ಮ ಸಂಸ್ಕೃತಿಯನ್ನು ತೊರೆದು, ಕಾಲದ ಕರೆಗೆ ಓಗೊಟ್ಟು, ತಮ್ಮನ್ನು ತಾವು ಬದಲಾಯಿಸಿಕೊಂಡು ನವಸಮಾಜಕ್ಕೆ ಹೊಂದಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ಜಾನಪದ ಸಾಹಿತ್ಯವನ್ನು, ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಅವುಗಳನ್ನು ಕಾಳಜಿಯಿಂದ ಸಂರಕ್ಷಿಸಬೇಕಾಗಿದೆ. ಜನಪರ ಕಾಳಜಿ ಮತ್ತು ಸಮಷ್ಠಿಯ ಹಿತ ಇರುವ ಕಲೆಗಳನ್ನು, ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ’ ಎಂದು ಅವರು ಹೇಳಿದರು.

ಜಾನಪದ ಸಾಹಿತಿ ಕಾಶೀನಾಥರೆಡ್ಡಿ ಸಮ್ಮೇಳನ ಉದ್ಘಾಟಿಸಿದರು. ಉದ್ಯಮಿ ಬಸವರಾಜ ಧನ್ನೂರ್‌, ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ, ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ಎಸ್. ಪ್ರಭು, ಕಜಾಪ ತಾಲ್ಲೂಕು ಘಟಕದ ಅದ್ಯಕ್ಷ ಎಸ್.ಬಿ. ಕುಚಬಾಳ, ಕರ್ನಾಟಕ ಜಾನಪದ ಪರಿಷತ್ತಿನ ಕಲ್ಯಾಣ ಕರ್ನಾಟಕ ಸಂಯೋಜಕ ಜಗನ್ನಾಥ ಹೆಬ್ಬಾಳೆ, ಕೆ. ಸತ್ಯಮೂರ್ತಿ, ನಿಜಲಿಂಗಪ್ಪ ತಗಾರೆ ಇದ್ದರು.

ಮಹಾನಂದಾ ಮಡಕಿ ನಿರೂಪಿಸಿದರು. ದೆಹಲಿಯ ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು