ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್ | ಉದ್ಯೋಗದ ಭರವಸೆ ನೀಡುವ ಡಿಪ್ಲೊಮಾ

Published 23 ಮೇ 2023, 23:46 IST
Last Updated 23 ಮೇ 2023, 23:46 IST
ಅಕ್ಷರ ಗಾತ್ರ

ಗುಂಡು ಅತಿವಾಳ

ಹುಮನಾಬಾದ್: ಡಿಪ್ಲೊಮಾ ಬಹುಬೇಡಿಕೆಯ ಕೋರ್ಸ್‌. ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಹಂಬಲ ಹೊಂದಿದ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆಯಲು ಇದು ಸಕಾಲ.

ಜಿಲ್ಲೆಯ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಇನ್ ಆಟೊಮೊಬೈಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್‌ ಹಾಗೂ ಕಮರ್ಷಿಯಲ್‌ ಪ್ರಾಕ್ಟಿಸ್ (ಕನ್ನಡ ಮತ್ತು ಇಂಗ್ಲಿಷ್) ವಿಷಯದಲ್ಲಿ ಮೂರು ವರ್ಷದ ಕೌಶಲಾಧಾರಿತ ಡಿಪ್ಲೊಮಾ ಕೋರ್ಸ್‌ ಮಾಡಬಹುದು.

ಜಿಲ್ಲೆಯಲ್ಲಿ ಎರಡು ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಿವೆ. ಬೀದರ್‌ ಮತ್ತು ಔರಾದ್‌ನಲ್ಲಿ ಮಾತ್ರ ಸರ್ಕಾರಿ ಪಾಲಿಟೆಕ್ನಿಕ್‌ ಇದೆ. ಔರಾದ್‌ ತಾಲ್ಲೂಕಿನ ಠಾಣಾಕುಶನೂರದಲ್ಲಿ ಜೆ.ಎನ್‌.ಪಾಲಿಟೆಕ್ನಿಕ್‌ (ಅನುದಾನಿತ) ಹಾಗೂ ಪಾಲಿಟೆಕ್ನಿಕ್ ಸಂಸ್ಥೆ ಇದೆ.

‘ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ನಗರ ಹಾಗೂ ಪಟ್ಟಣಗಳಲ್ಲಿರುವ ಕೈಗಾರಿಕೆಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ಜ್ಯೂನಿಯರ್ ಎಂಜಿನಿಯರ್‌ ಹುದ್ದೆಗಳಿಗೆ ನೇಮಕ ಮಾಡಿ ಕೈತುಂಬ ಸಂಬಳ ಕೊಡುತ್ತಿವೆ. ಅಭ್ಯರ್ಥಿಗಳಿಗೆ ಆರಂಭಿಕ ವೇತನ ₹ 25 ಸಾವಿರದಿಂದ ₹ 50 ಸಾವಿರದವರೆಗೂ ಇದೆ’ ಎಂದು ಉಪನ್ಯಾಸಕ ಶಿವಕುಮಾರ ಕಟ್ಟೆ ಹೇಳುತ್ತಾರೆ.

ನಾನ್ ಎಂಜಿನಿಯರಿಂಗ್ ಕೋರ್ಸ್‌ ಆಗಿರುವ ಕಮರ್ಷಿಯಲ್ ಪ್ರಾಕ್ಟಿಸ್ ಮಾಡಿದವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೀಘ್ರಲಿಪಿಕಾರರಾಗಿ ಮತ್ತು ದತ್ತಾಂಶ ನೋಂದಣಿಕಾರರಾಗಿ ಉದ್ಯೋಗ ಪಡೆಯಬಹುದು. ಈ ಕೋರ್ಸ್‌ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್‌ನಲ್ಲಿ ಮಾತ್ರ ಲಭ್ಯ ಇದೆ. 371(ಜೆ) ಮೀಸಲಾತಿಯಲ್ಲಿ ಉದ್ಯೋಗವಕಾಶ ಹೆಚ್ಚಿದೆ.

ಪಾಲಿಟೆಕ್ನಿಕ್‌ ಶಿಕ್ಷಣ ಪಡೆದವರು ಹೆಚ್ಚಿನ ವಿದ್ಯಾಭ್ಯಾಸ ಬಯಸಿದರೆ ನೇರವಾಗಿ ಎಂಜಿನಿಯರಿಂಗ್‌ ಮೂರನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಅವಕಾಶ ಇದೆ.

ಈಗಾಗಲೇ ಪ್ರಸಕ್ತ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ ಪ್ರಥಮ ಸೆಮಿಸ್ಟರ್‌ ಡಿಪ್ಲೊಮಾ ಪ್ರವೇಶಾತಿಗೆ ಆನ್‌ಲೈನ್ ಮತ್ತು ನೇರಪ್ರವೇಶ (ಮೊದಲು ಬಂದವರಿಗೆ ಮೊದಲ ಆದ್ಯತೆ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಇಂಟ್ರಾಕ್ಟಿವ್‌ ಕೌನ್ಸೆಲಿಂಗ್ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಬೀದರ್ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಉಳಿದ ಕೋರ್ಸ್‌ಗಳಾದ ಸಿವಿಲ್, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮರ್ಷಿಯಲ್ ಪ್ರಾಕ್ಟಿಸ್‌ಗೆ ನೇರ ಪ್ರವೇಶವಿದೆ.

ಸರ್ಕಾರಿ ಪಾಲಿಟೆಕ್ನಿಕ್ ಔರಾದ್‌ನಲ್ಲಿರುವ ಸಿವಿಲ್, ಮೆಕ್ಯಾನಿಕಲ್, ಆಟೊಮೇಷನ್ ಅಂಡ್ ರೋಬೊಟಿಕ್ಸ್ ಹಾಗೂ ಅಲ್ಟರನೇಟಿವ್ ಎನರ್ಜಿ ಟೆಕ್ನಾಲಜಿ ಕೋರ್ಸ್‌ಗಳಿಗೆ ನೇರ ಪ್ರವೇಶ ಪಡೆಯಬಹುದು.

ಅರ್ಜಿಗಳನ್ನು ಜಾಲತಾಣ www.dte.kar.nic.in ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅರ್ಜಿ ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 2ರ ಸಂಜೆ 5.30ರವರೆಗೆ ಸಲ್ಲಿಸಬಹುದು.

ಭರ್ತಿ ಮಾಡಿದ ಅರ್ಜಿ, ನೋಂದಣಿ ಶುಲ್ಕ ಹಾಗೂ ಎಲ್ಲ ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಮೇ 22ರ ನಂತರ ಪ್ರಕಟಿಸಲಾಗುತ್ತದೆ.

2023-24ನೇ ಶೈಕ್ಷಣಿಕ ವರ್ಷದಲ್ಲಿ ಸೀಟು ಹಂಚಿಕೆ ಸಂಬಂಧ ವಿದ್ಯಾರ್ಥಿಗಳು ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಬಿ.ಆರ್. ಮಲ್ಲಿಕಾರ್ಜುನ ಅಥವಾ ಔರಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶೈಲಜಾ ನೀಲಶೆಟ್ಟಿ ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT