ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಜಿಲ್ಲಾ ಕನ್ನಡ ಭವನಕ್ಕೆ ಕೊನೆಗೂ ಕೂಡಿ ಬಂತು ಕಾಲ: ಐದು ದಶಕದ ಕನಸು ನನಸು

Published 1 ಫೆಬ್ರುವರಿ 2024, 5:25 IST
Last Updated 1 ಫೆಬ್ರುವರಿ 2024, 5:25 IST
ಅಕ್ಷರ ಗಾತ್ರ

ಬೀದರ್‌: ನಗರದಲ್ಲಿ ಸುಸಜ್ಜಿತವಾದ ಜಿಲ್ಲಾ ಕನ್ನಡ ಭವನ ನಿರ್ಮಿಸಬೇಕೆಂಬ ಐದು ದಶಕಗಳ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರ ಕನಸು ಈಗ ನನಸಾಗಿದೆ.

ಕನ್ನಡ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಪ್ರಶಸ್ತ್ಯವಾದ ಸ್ಥಳ ಸಿಕ್ಕಂತಾಗಿದೆ. 

2017ರಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ಈಶ್ವರ ಬಿ. ಖಂಡ್ರೆಯವರು ಕನ್ನಡ ಭವನಕ್ಕೆ ಜಮೀನು ಮಂಜೂರು ಮಾಡಿದ್ದರು. ಈಗ ಪುನಃ ಅವರು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಕಾಣುತ್ತಿರುವುದು ವಿಶೇಷ.

ಕನ್ನಡ ಭವನ ನಿರ್ಮಿಸಬೇಕೆಂದು ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಸತತವಾಗಿ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸುತ್ತ ಬಂದಿದ್ದರು. ಹಲವು ಜಿಲ್ಲಾ ಸಮ್ಮೇಳನಗಳಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿತ್ತು. ಹೋರಾಟಗಳು ನಡೆದಿದ್ದವು. ಅಂತಿಮವಾಗಿ 2017ರಲ್ಲಿ ಜಮೀನು ಮಂಜೂರಾಗುವ ಮೂಲಕ ಇನ್ನೇನು ಕನ್ನಡ ಭವನ ನಿರ್ಮಾಣವಾಗಲಿದೆ ಎಂಬ ಆಸೆ ಚಿಗುರೊಡೆದಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಅದು ನನೆಗುದಿಗೆ ಬಿದ್ದಿತ್ತು. ಕುಂಟುತ್ತ–ಏಳುತ್ತ ಏಳು ವರ್ಷಗಳ ನಂತರ ಕಟ್ಟಡ ಪೂರ್ಣಗೊಂಡಿದೆ.

‘ಕನ್ನಡ ಭವನಕ್ಕೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ₹2 ಕೋಟಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ₹25 ಲಕ್ಷ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹10 ಲಕ್ಷ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹5 ಲಕ್ಷ, ಹಾರಕೂಡ ಚನ್ನವೀರ ಶಿವಾಚಾರ್ಯರು ₹2 ಲಕ್ಷ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ ₹1 ಲಕ್ಷ, ಕನ್ನಡಾಭಿಮಾನಿ ಹಣಮಂತ ಬುಳ್ಳಾ ಅವರು ಮೊಟ್ಟ ಮೊದಲು ₹11 ಸಾವಿರ ನೀಡಿದ್ದರು. ಒಟ್ಟು ₹2.40 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. ಇನ್ನು ಹಲವಾರು ದೇಣಿಗೆ ಕೊಡಲು ಮುಂದೆ ಬಂದಿದ್ದಾರೆ. ಅದರಿಂದ ಹೊಸದಾದ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೀದರ್‌ ನಗರದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂದು ಐದು ದಶಕಗಳ ಬೇಡಿಕೆಯಾಗಿತ್ತು. ನನ್ನ ಅವಧಿಯಲ್ಲಿ ಅದು ಸಾಕಾರಗೊಂಡಿದ್ದು ಖುಷಿ ತಂದಿದೆ. ಗೆದ್ದರೆ ಕನ್ನಡ ಭವನ ನಿರ್ಮಾಣಕ್ಕೆ ಶ್ರಮಿಸುವೆ ಎಂದು ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಇದರ ಶ್ರೇಯ ಎಲ್ಲ ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳಿಗೆ ಸಲ್ಲುತ್ತದೆ. ಭವನ ನಿರ್ಮಾಣದಿಂದ ಕನ್ನಡ ಚಟುವಟಿಕೆಗಳನ್ನು ವಿಸ್ತರಿಸಲು ಸಹಾಯವಾಗುತ್ತದೆ’ ಎಂದು ಹೇಳಿದ್ದಾರೆ.

‘ಫೆ. 3ರಂದು ಬೆಳಿಗ್ಗೆ 11ಕ್ಕೆ ನಗರದ ಚಿಕಪೇಟ್‌ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಭವನ ಉದ್ಘಾಟಿಸುವರು. ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಉದ್ಘಾಟನೆ ನಂತರ ಕವಿಗೋಷ್ಠಿ ನಡೆಯಲಿದ್ದು, 50 ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಈಗ ಕನ್ನಡ ಭವನ ನಿರ್ಮಾಣವಾಗಿದ್ದು ಕನ್ನಡಾಭಿಮಾನಗಳ ಆಸೆ ಈಡೇರಿದೆ.
ಸುರೇಶ ಚನಶೆಟ್ಟಿ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
ಭವನ ಏನೇನು ಒಳಗೊಂಡಿದೆ?
ಒಂದು ಎಕರೆ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತವಾದ ಕನ್ನಡ ಭವನವು ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ನೆಲಮಹಡಿಯಲ್ಲಿ ಆರ್ಟ್ ಗ್ಯಾಲರಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿ ಮೊದಲನೇ ಮಹಡಿ ಗ್ರಂಥಾಲಯ ಅತಿಥಿಗಳು ಕಲಾವಿದರಿಗೆ ತಂಗಲು ಕೊಠಡಿಗಳು ಮೂರನೇ ಮಹಡಿಯಲ್ಲಿ ಏಕಕಾಲಕ್ಕೆ 500 ಜನ ಕುಳಿತುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾದ ಸಭಾ ಭವನ ನಿರ್ಮಿಸಲಾಗಿದೆ. ‘ಕನ್ನಡ ಭವನ ಒಟ್ಟು ₹8 ಕೋಟಿ ಮೊತ್ತದ ಯೋಜನೆಯಾಗಿದೆ. ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಬಯಲು ರಂಗ ಮಂದಿರ ಸಭಾ ಭವನ ಕನ್ನಡ ವನ ನಿರ್ಮಿಸುವ ಯೋಜನೆ ಇದೆ. ಬರುವ ದಿನಗಳಲ್ಲಿ ಗ್ರಂಥಾಲಯದಲ್ಲಿ ನಾಡಿನ ಎಲ್ಲ ಲೇಖಕರ ಪುಸ್ತಕಗಳನ್ನ ಇರಿಸಲಾಗುವುದು. ಯಾರು ಬೇಕಾದರೂ ಬಂದು ಕನ್ನಡ ಸಾಹಿತ್ಯದ ಅಧ್ಯಯನ ಮಾಡಬಹುದು’ ಎಂದು ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT