ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ರೈತನ ಕೈಹಿಡಿದ ‘ಹಣ್ಣುಗಳ ರಾಜ’

₹ 70 ಸಾವಿರ ಆದಾಯ ಗಳಿಸಿದ ಎಂ.ಎ ವಹಾಬ್
Last Updated 18 ಜೂನ್ 2021, 19:30 IST
ಅಕ್ಷರ ಗಾತ್ರ

ಜನವಾಡ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ‘ಹಣ್ಣುಗಳ ರಾಜ’ ಬೀದರ್ ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ರೈತ ಎಂ.ಎ ವಹಾಬ್ ಅವರ ಕೈ ಹಿಡಿದಿದ್ದಾನೆ. ಕೋವಿಡ್‍ನಿಂದ ವಿಧಿಸಲಾದ ಲಾಕ್‍ಡೌನ್ ವೇಳೆ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸಿ ಅವರು ₹ 70 ಸಾವಿರ ಆದಾಯ ಗಳಿಸಿದ್ದಾರೆ.

ಮಕ್ಕಳ ಶಿಕ್ಷಣಕ್ಕಾಗಿ ಬೀದರ್‌ನಲ್ಲಿ ನೆಲೆಸಿರುವ ಅವರು ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಮೊದಲು ತರಕಾರಿ, ಶುಂಠಿ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದ ಅವರು, ಇದೀಗ ಹಣ್ಣು ವ್ಯಾಪಾರವನ್ನೂ ಆರಂಭಿಸಿ ಸೈ ಎನಿಸಿಕೊಂಡಿದ್ದಾರೆ.

ಗುತ್ತಿಗೆ ಪಡೆದ ತೋಟದಲ್ಲಿಯ ಗಿಡಗಳ ಮಾವು ಕಟಾವಿಗೆ ಬರುವಷ್ಟರಲ್ಲಿ ಲಾಕ್‍ಡೌನ್ ಮಾಡಲಾಯಿತು. ಆದರೆ, ಮುಂಚಿತವಾಗಿಯೇ ತಯಾರಿ ಮಾಡಿಕೊಂಡಿದ್ದರಿಂದ ವಹಾಬ್ ಅವರಿಗೆ ಸಮಸ್ಯೆ ಆಗಲಿಲ್ಲ.

ದಶೇರಿ, ಲಾಂಗ್ರಾ, ಬೆನಿಶಾನ್, ತೋತಾಪುರಿ ತಳಿಯ ಹಣ್ಣುಗಳನ್ನು ಅವರು ಹಂತ ಹಂತವಾಗಿ ಕಟಾವು ಮಾಡಿದರು.
ಹಣ್ಣುಗಳನ್ನು ರಾಸಾಯನಿಕ ರಹಿತವಾಗಿ ಕಡಿಮೆ ಅವಧಿಯಲ್ಲಿ ಮಾಗಿಸುವ ತಂತ್ರಜ್ಞಾನಕ್ಕಾಗಿ ಯೂಟ್ಯೂಬ್‍ನಲ್ಲಿ ಹುಡುಕಾಟ ನಡೆಸಿದಾಗ, ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಹಣ್ಣು ಮಾಗಿಸುವ ತಾಂತ್ರಿಕತೆಯ ದೃಶ್ಯ ಕಣ್ಣಿಗೆ ಬಿದ್ದಿತು. ತಕ್ಷಣ ಅವರು ಕೇಂದ್ರವನ್ನು ಸಂಪರ್ಕಿಸಿ, ಕೇಂದ್ರದಲ್ಲಿ ಪ್ರಾತ್ಯಕ್ಷಿಕೆಗೆ ಇಟ್ಟಿದ್ದ ಕಡಿಮೆ ಖರ್ಚಿನಲ್ಲಿ ಹಣ್ಣು ಮಾಗಿಸುವ ಚೇಂಬರ್ ಪಡೆದು ಹಣ್ಣು ಮಾಗಿಸಿದರು.

ರಟ್ಟಿನ ಡಬ್ಬದಲ್ಲಿ ತಲಾ 5 ಕೆ.ಜಿ ಹಾಗೂ 10 ಕೆ.ಜಿ ಹಣ್ಣು ತುಂಬಿ ‘ಡೆಕ್ಕನ್ ಫಾರ್ಮ್’ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡಲು ಶುರು ಮಾಡಿದರು.

ಫೋನ್ ಕರೆ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಬೈಕ್‍ನಲ್ಲಿ ಹಣ್ಣು ಪೂರೈಸಿದರು. 52ಕ್ಕೂ ಹೆಚ್ಚು ಗ್ರಾಹಕರಿಗೆ ಎರಡು- ಮೂರು ಬಾರಿ ಹಣ್ಣು ತಲುಪಿಸಿದರು. ಒಂದು ಸಾವಿರ ಕೆ.ಜಿಯಷ್ಟು ಹಣ್ಣಿಗೆ ಪ್ರತಿ ಕೆ.ಜಿಗೆ ₹ 60 ರಿಂದ 100 ರ ವರೆಗೆ ಬೆಲೆ ದೊರೆಯಿತು. ಶ್ರಮ ಹಾಗೂ ಯುಕ್ತಿ ಬಳಸಿದ ಕಾರಣ ಅವರಿಗೆ ಸಹಜವಾಗಿಯೇ ಯಶಸ್ಸು ಲಭಿಸಿತು.

23 ಮಾವಿನ ಮರಗಳಿಂದ ಎಲ್ಲ ಖರ್ಚುಗಳನ್ನು ಹೊರತುಪಡಿಸಿ ₹ 70 ಸಾವಿರ ಲಾಭ ದೊರಕಿದೆ. ಇದು, ಬರುವ ವರ್ಷವೂ ಹಣ್ಣಿನ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಹೇಳುತ್ತಾರೆ ಎಂ.ಎ ವಹಾಬ್.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಹಾಗೂ ತೋಟಗಾರಿಕೆ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಅವರ ಸಕಾಲಿಕ ಮಾರ್ಗದರ್ಶನವನ್ನು ಸ್ಮರಿಸಲು ಅವರು ಮರೆಯಲಿಲ್ಲ.

ವಹಾಬ್ ಅವರು ತಾಂತ್ರಿಕತೆ ಹಾಗೂ ಜನರ ಸಂಪರ್ಕ ಬಳಸಿಕೊಂಡು ಫೋನ್ ಕಾಲ್ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಇತರ ರೈತರು, ವ್ಯಾಪಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ತಿಳಿಸುತ್ತಾರೆ.

ಕೃಷಿ ವಿಜ್ಞಾನ ಕೇಂದ್ರವು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಯಶಸ್ಸು ಗಳಿಸಲು ಆಸಕ್ತ ರೈತರಿಗೆ ತಾಂತ್ರಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT