ಮಂಗಳವಾರ, ಜನವರಿ 21, 2020
17 °C
ಓಣಿಗಳಲ್ಲಿ ಚರಂಡಿ, ಸಿಸಿ ರಸ್ತೆ ಇಲ್ಲದೆ ತೊಂದರೆ

ಬಸವಕಲ್ಯಾಣ: ಮೂಲಸೌಕರ್ಯಗಳ ಕೊರತೆಯಿಂದ ಜನರ ಪರದಾಟ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

prajavani

ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾದಲ್ಲಿನ ಮೂಲಸೌಲಭ್ಯ ಕೊರತೆಯಿಂದ ಜನರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಿಟ್ಟಾ ಗ್ರಾಮ ಸಮಸ್ಯೆಗಳ ಆಗರವಾಗಿದೆ. ಶೌಚಾಲಯಗಳ ಕೊರತೆಯ ಕಾರಣದಿಂದ ಮಹಿಳೆಯರು ಬಹಿರ್ದೆಸೆಯನ್ನು ಅವಲಂಬಿಸಿದ್ದಾರೆ. ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ರಸ್ತೆಯಲ್ಲಿ ಬಹಿರ್ದೆಸೆಗೆ ಹೋಗುವುದರಿಂದ ದುರ್ಗಂಧ  ಬೀರುತ್ತಿರುತ್ತದೆ. ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ  ಎದುರಾಗುತ್ತದೆ. ಬಸವಭವನದ ಸಮೀಪದಲ್ಲಿನ ಹಳೆಯ ನೀರಿನ ಓವರ್ ಹೆಡ್ ಟ್ಯಾಂಕ್ ಹತ್ತಿರ ಚರಂಡಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

`ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, ನಾರಾಯಣಪುರ ರಸ್ತೆ ಪಕ್ಕದಲ್ಲಿನ ನೀರಿನ ಘಟಕ ನಿರ್ಮಾಣಗೊಂಡು ಎರಡು ವರ್ಷವಾದರೂ ಆರಂಭ ವಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಂದು ಸಲ ನಳಗಳಲ್ಲಿ ಹೊಲಸು ನೀರು ಸರಬರಾಜು ಆಗುತ್ತಿದ್ದು, ಅದನ್ನೇ ಕುಡಿಯಬೇಕಾಗುತ್ತಿದೆ. ನಾನಾ ರೋಗಗಳು ಬರುತ್ತಿವೆ’ ಎಂದು ಹೇಳುತ್ತಾರೆ ಮಾರುತಿ ಫುಲೆ. 

`ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲ ಸೌಲಭ್ಯಗಳಿಲ್ಲ. ಕಾಯಂ ವೈದ್ಯರಿಲ್ಲ. ರೋಗಿಗಳು ಸಂಕಟ ಅನುಭವಿಸುತ್ತಿದ್ದಾರೆ’ ಎಂದು ಗ್ರಾಮಸ್ಥರ ಅಳಲು ತೋಡಿಕೊಳ್ಳುತ್ತಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿ ವಸತಿ ನಿಲಯ ಹಾಗೂ ಹೊಸ ಬಡಾವಣೆ ಒಂದೇ ರಸ್ತೆಯಲ್ಲಿವೆ. ಆದರೆ, ಇವುಗಳಿಗೆ ಹೋಗಲು ಕಚ್ಚಾ ರಸ್ತೆಯನ್ನೇ ಅವಲಂಭಿಸಬೇಕಾಗಿದೆ. ಇಲ್ಲಿನ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು ಎಂದು ಅನೇಕ ಸಲ ಒತ್ತಾಯಿಸಿದರೂ ಪ್ರಯೋಜನ ಆಗಿಲ್ಲ ಎಂದು ರಾಜಪ್ಪ ದೂರಿದರು.

`ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರನ್ನೊಳಗೊಂಡು ಇಬ್ಬರು ಶಿಕ್ಷಕರ ಹುದ್ದೆ ಖಾಲಿಯಾಗಿವೆ. ಇದರಿಂದ ಮಕ್ಕಳಿಗೆ ಪಾಠ ಬೋಧನೆಗೆ ತೊಂದರೆಯಾಗಿದ್ದು, ಶೀಘ್ರದಲ್ಲೇ ಕಾಯಂ ಶಿಕ್ಷಕರನ್ನು ಒದಗಿಸಬೇಕು ಎನ್ನುತ್ತಾರೆ ಬಸವಣ್ಣೆಪ್ಪ.

ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಗ್ರಾಮದ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು