ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಕೊರತೆ

ಸೌಲಭ್ಯದ ನಿರೀಕ್ಷೆಯಲ್ಲಿ 9,500 ಮೀನುಗಾರರು
Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ಇಲ್ಲದ ಕಾರಣ ಗ್ರಾಹಕರು ಹಾಗೂ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯೇ ನಿಂತು ಮೀನು ಮಾರಾಟ ಮಾಡುತ್ತಿರುವುದರಿಂದ ವಾಸನೆಯಿಂದ ಕೆಲವರಿಗೆ ಕಿರಿಕಿರಿಯಾಗಿದೆ. ಗ್ರಾಹಕರು ರಸ್ತೆ ಮೇಲೆ ವಾಹನ ನಿಲುಗಡೆ ಮಾಡಿ ಮೀನು ಖರೀದಿಸಲು ಹೋಗುವುದರಿಂದ ಸಂಚಾರ ಒತ್ತಡವೂ ಹೆಚ್ಚುತ್ತಿದೆ.

ನಗರದ ಹೊರವಲಯದಲ್ಲಿ ಒಂದು ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣ ಮಾಡಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಮೀನು ವ್ಯಾಪಾರಿಗಳ ಬೇಡಿಕೆಗೆ ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಹ ಸ್ಪಂದಿಸಿಲ್ಲ.

ಬೀದರ್‌, ಔರಾದ್, ಹುಮನಾಬಾದ್ ಹಾಗೂ ಭಾಲ್ಕಿ ಪಟ್ಟಣದಲ್ಲೂ ಇದೇ ಸಮಸ್ಯೆ ಇದೆ. ಮೀನು ವ್ಯಾಪಾರ ನಡೆಸುವವರು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲೂ ಚಿಕ್ಕದಾದ ಹಾಗೂ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಿಸಬೇಕು ಎನ್ನುವುದು ಮೀನುಗಾರರ ಬೇಡಿಕೆಯಾಗಿದೆ.

ಬೀದರ್‌ ಜಿಲ್ಲೆಗೆ ಹೈದರಾಬಾದ್, ವಿಜಯವಾಡ, ಕಾರವಾರ, ಮಂಗಳೂರು, ಉಡುಪಿಯಿಂದ ನಿತ್ಯ ಸರಾಸರಿ 12 ಟನ್‌ ಮೀನು ಬರುತ್ತಿದೆ. ಬೀದರ್‌ನಲ್ಲೇ ನಿತ್ಯ 5 ಟನ್‌ ಮಾರಾಟವಾಗುತ್ತದೆ. ನಗರದ ಹೈದರಾಬಾದ್‌ ರಸ್ತೆ, ಚಿದ್ರಿಯ ಪಶು ವಿಶ್ವವಿದ್ಯಾಲಯದ ಮಾರ್ಗದಲ್ಲಿ ಮೀನು ಮಾರಾಟ ಮಾಡಲಾಗುತ್ತದೆ. ಕೆಲ ಮೀನುಗಾರರು ಬೈಕ್‌ ಹಾಗೂ ಆಟೊಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.

‘ಜಿಲ್ಲೆಯಲ್ಲಿ ಮೀನುಗಾರಿಕೆಗೆ ಬಹಳಷ್ಟು ಅವಕಾಶಗಳು ಇವೆ. ಉತ್ತಮ ಮಾರುಕಟ್ಟೆ ನಿರ್ಮಿಸಿದರೆ ಎಲ್ಲ ಮೀನುಗಾರರಿಗೂ ಅನುಕೂಲವಾಗಲಿದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕ್ರಮ ವಹಿಸಬೇಕು’ ಎಂದು ಅಂಬಿಗರ ಚೌಡಯ್ಯ ಸೇನೆಯ ಅಧ್ಯಕ್ಷ ಸುನೀಲ್‌ ಭಾವಿಕಟ್ಟಿ ಒತ್ತಾಯಿಸುತ್ತಾರೆ.

‘ಬೀದರ್‌ ನಗರದಲ್ಲಿ ಮೀನು ಮಾರುಕಟ್ಟೆಯ ಅವಕಶ್ಯಕತೆ ಇದೆ. ಮೀನು ಮಾರುಕಟ್ಟೆಗೆ ನಗರ ವ್ಯಾಪ್ತಿಯಲ್ಲಿ 100X 100 ಅಡಿ ಜಾಗ ಕೊಡುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರ ಜತೆಗೆ ಶೈತ್ಯೀಕರಣ ಹಾಗೂ ಮಂಜುಗಡ್ಡೆ ಘಟಕ ಆರಂಭಿಸಲು ಅರ್ಧ ಎಕರೆ ಜಾಗ ಕೇಳಲಾಗಿದೆ. 2022 ಜುಲೈ 22ರಂದು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲೇಶ ಬಡಿಗೇರ ಹೇಳುತ್ತಾರೆ.

‘ಜಿಲ್ಲೆಗೆ 20 ಟನ್‌ ದಾಸ್ತಾನು ಮಾಡುವ ಕೋಲ್ಡ್ ಸ್ಟೋರೇಜ್‌ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಇದಕ್ಕೆ ₹80 ಲಕ್ಷ ಬೇಕಾಗಲಿದೆ. ಜಾಗ ಕೊಟ್ಟರೆ ಸಾಕು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಕೋಲ್ಡ್ ಸ್ಟೋರೇಜ್‌ ನಿರ್ಮಿಸಿ ಕೊಡಲಿದೆ. ಯಾದಗಿರಿಯಲ್ಲಿ ಸುಸಜ್ಜಿತ ಕೋಲ್ಡ್ ಸ್ಟೋರೇಜ್‌ ನಿರ್ಮಿಸಲಾಗಿದೆ. ಆಂಧ್ರಪ್ರದೇಶದ ಮೀನುಗಾರರು ಬಳಸಿಕೊಳ್ಳುತ್ತಿದ್ದಾರೆ. ಬೀದರ್‌ನಲ್ಲಿ ಕೋಲ್ಡ್ ಸ್ಟೋರೇಜ್‌ ನಿರ್ಮಾಣವಾದರೆ ಜಿಲ್ಲೆಯ ಮೀನುಗಾರರಿಗೆ ಅನುಕೂಲವಾಗಲಿದೆ. ವಹಿವಾಟು ಹೆಚ್ಚಾಗಿ ಆದಾಯದಲ್ಲೂ ಏರಿಕೆಯಾಗಲಿದೆ’ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT