ಗುರುವಾರ , ಮಾರ್ಚ್ 23, 2023
32 °C

ಲಾಕ್‌ಡೌನ್ ಬಿಸಿ | ಖರೀದಿಸುವವರು ಬಾರದೆ ಜಮೀನಿನಲ್ಲೇ ಹಾಳಾಗುತ್ತಿರುವ ಕಲ್ಲಂಗಡಿ

ವೀರೇಶ್ ಎನ್. ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ಸುಬ್ಬಣ್ಣ ದರಗೊಂಡ್ ಅವರ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು, ಲಾಕ್‌ಡೌನ್‌ ಪರಿಣಾಮದಿಂದ ಖರೀದಿಸುವವರು ಬಾರದೇ ತೋಟದಲ್ಲಿಯೇ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗಿದೆ.

‘ಎರಡು ಎಕರೆ ಹೊಲದಲ್ಲಿ ₹ 1 ಲಕ್ಷ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ಕಟಾವಿಗೆ ಬಂದಿದೆ. ಆದರೆ, ಲಾಕ್‌ಡೌನ್‌ ಪರಿಣಾಮದಿಂದ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಬೇರೆ ಪಟ್ಟಣ, ನಗರಗಳಿಗೆ ಟೆಂಪೋದಲ್ಲಿ ಕೊಂಡೊಯ್ಯಲು ಪ್ರಯತ್ನ ಪಟ್ಟು ವಿಫಲವಾಗಿದ್ದೇನೆ. ಅಲ್ಲಿಯ ಮಾರುಕಟ್ಟೆಯಲ್ಲೂ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಟೆಂಪೋ ಬಾಡಿಗೆ ಕೊಡಲೂ ಹಣವಿಲ್ಲವಾಗಿದೆ‘ ಎಂದು ಸುಬ್ಬಣ್ಣ ಅಳಲು ತೋಡಿಕೊಂಡರು. 

‘ಹಣ್ಣುಗಳು ತೋಟದಲ್ಲಿಯೇ ಹಳದಿ ಬಣ್ಣಕ್ಕೆ ತಿರುಗಿ ಇದ್ದಲ್ಲಿಯೇ ಕೊಳೆತು ಹೋಗುತ್ತಿವೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಬಂದು ಕೈ ತುಂಬಾ ಹಣ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ನನ್ನಂತಹ ಇತರ ರೈತರಿಗೆ ಇದೀಗ ಕೊರೊನಾ ವೈರಸ್‌ನಿಂದಾಗಿ ನಷ್ಟ ಅನುಭವಿಸುವಂತಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಈ ಸಮಸ್ಯೆಯನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.  ಈಚೆಗೆ ಅಧಿಕಾರಿಗಳು ಕಾಟಾಚಾರಕ್ಕಾಗಿ ತೋಟಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಹಣ್ಣು ಖರೀದಿಗೆ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು‘ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು