ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರಿಕರ ಜೀವನಕ್ಕೆ ಲಾಕ್‌ಡೌನ್‌ ಕತ್ತರಿ

ಹೊಲ– ಗದ್ದೆಗಳಲ್ಲಿ ತಲೆ ಕ್ಷೌರ ಮಾಡಿದರೂ ಆದಾಯವಿಲ್ಲ
Last Updated 12 ಮೇ 2021, 6:11 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ ಸೋಂಕಿನಿಂದಾಗಿ ಪ್ರತಿದಿನ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕ್ಷೌರಿಕರ ಜೀವನಕ್ಕೆ ಕತ್ತರಿ ಬಿದ್ದಂತಾಗಿದೆ.

ಕೊರೊನಾ ಮೊದಲ ಅಲೆಯಿಂದ ಉಂಟಾದ ನಷ್ಟದಿಂದ ಈಗಷ್ಟೇ ಚೇತರಿಕೆಯತ್ತ ಮರಳುತ್ತಿದ್ದ ಕ್ಷೌರಿಕರ ಜೀವನವು ಕೊರೊನಾದ ಎರಡನೇ ಅಲೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ.

ಸರ್ಕಾರದ ಆದೇಶದನ್ವಯ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶವಿದೆ. ಆದರೆ, ಕ್ಷೌರ ಮಾಡಿಸಿಕೊಳ್ಳಲು ಅಂಗಡಿಗೆ ಕೈ ಬೆರಳಣಿಕೆಯಷ್ಟು ಜನರು ಮಾತ್ರ ಬರುತ್ತಿದ್ದಾರೆ. ಇದರಿಂದ ಕ್ಷೌರಿಕರಿಗೆ ಆದಾಯವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ಕೊರೊನಾ ಹರಡುತ್ತಿರುವುದ ರಿಂದ ಬಹಳಷ್ಟು ಜನ ತಲೆ ಕ್ಷೌರ ಮಾಡಿಸಿಕೊಳ್ಳುವುದನ್ನು ಮುಂದೂಡಿ ದ್ದಾರೆ. ಮುಖ ಕ್ಷೌರವನ್ನು ಮನೆಯಲ್ಲಿ ತಾವೇ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕ ಮಕ್ಕಳ ಮುಡಿಯನ್ನು ತಾಯಂದಿರೇ ಕತ್ತರಿಸುತ್ತಿದ್ದಾರೆ. ಇನ್ನು ಕೆಲವರು ಗ್ರಾಮದ ಹೊರವಲಯದ ಮರವೊಂದರ ಕೆಳಗೆ ಕುಳಿತು, ಮಾಸ್ಕ್ ಧರಿಸಿ, ಸಲಕರಣೆಗಳಿಗೆ ಸ್ಯಾನಿಟೈಸ್ ಮಾಡಿಸಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಹಕರಿಲ್ಲದೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಚಳಕಾಪುರದ ಸಂಜುಕುಮಾರ ಹಡಪದ ಹೇಳುತ್ತಾರೆ.

‘ಕ್ಷೌರಿಕರ ಹೆಚ್ಚಿನ ಕುಟುಂಬಗಳು ದಿನದ ದುಡಿಮೆಯ ಮೇಲೆ ಅವಲಂಬಿತವಾಗಿವೆ. ಅಲ್ಲದೇ ಕೆಲವರು ಖಾಸಗಿ ವ್ಯಕ್ತಿಗಳ ಹತ್ತಿರ ಸಾಲ ಪಡೆದುಕೊಂಡು ಅಂಗಡಿ ಪ್ರಾರಂಭಿಸಿದ್ದಾರೆ. ಆದರೆ ಸದ್ಯ ವ್ಯಾಪಾರ ನಡೆಯದಿರುವುದರಿಂದ ಸಾಲದ ಬಡ್ಡಿಯನ್ನು ಸಹ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು’ ಎಂದು ದಾಡಗಿಯ ಕ್ಷೌರಿಕ ಅಂಗಡಿ ಮಾಲೀಕ ಮಧುಕರ ಒತ್ತಾಯಿಸುತ್ತಾರೆ.

‘ಗ್ರಾಮೀಣ ಭಾಗದ ಅನೇಕ ಯುವಕರು ಸಾಲ ಮಾಡಿಕೊಂಡು ಪಟ್ಟಣದಲ್ಲಿ ಸೆಲೂನ್ ಅಂಗಡಿ ತೆರೆದಿದ್ದಾರೆ. ಆದರೆ, ಈಗ ಸಾಲ ತೀರಿಸಲಾಗದೆ ಸಂಕಟ ಅನುಭವಿಸುತ್ತಿದ್ದಾರೆ. ಇದೀಗ ಮತ್ತೆ ಎರಡನೇ ಅಲೆ ಅವರನ್ನು ಮತ್ತಷ್ಟು ಕುಗ್ಗಿಸಿದೆ. ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್ ಸರಿದೂಗಿಸಲು ಪ್ರತಿದಿನ ಹೆಣಗಾಡುತ್ತಿದ್ದಾರೆ’ ಎಂದು ಮಾಸಿಮಾಡ ಗ್ರಾಮದ ಸುರೇಶ ನೋವನ್ನು ತೋಡಿಕೊಂಡರು.

‘ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಹರಡುತ್ತಿದಯರುವುದನ್ನು ಗಮನಿಸಿದರೆ ಮೇ 25ರ ನಂತರವೂ ಕರ್ಫ್ಯೂ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾದರೆ ನಮ್ಮ ಜೀವನ ಹೇಗೆ ಸಾಗಿಸುವುದು ಎಂಬ ಚಿಂತೆ ಕಾಡುತ್ತಿದೆ’ ಎಂದು ಬಹುತೇಕ ಕ್ಷೌರಿಕರು ತಮ್ಮ ಅಳಲನ್ನು ತೋಡಿಕೊಂಡರು.

₹10 ಸಾವಿರ ಪರಿಹಾರಕ್ಕೆ ಆಗ್ರಹ

ಕೊರೊನಾದಿಂದ ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಪರದಾಡಿದ್ದೇವೆ. ಸರ್ಕಾರದಿಂದ ಕೆಲವರಿಗೆ ₹5 ಸಾವಿರ ದೊರೆತಿದೆ. ಇನ್ನು ಬಹಳಷ್ಟು ಜನರಿಗೆ ಹಣ ಬಂದಿಲ್ಲ. ಈ ವರ್ಷವಾದರೂ ಕ್ಷೌರಿಕರಿಗೆ ₹10 ಸಾವಿರ ಪರಿಹಾರ ನೀಡುವ ಮೂಲಕ ನೆರವಾಗಬೇಕು’ ಎಂದು ಸವಿತಾ ಸಮಾಜ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗರಾಜ ಆರ್ಯ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT