ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ |ಬೀದರ್: ಬಿಜೆಪಿ ‘ಸಸ್ಪೆನ್ಸ್‌’ ಅಂತ್ಯ, ಕಾಂಗ್ರೆಸ್‌ನಿಂದ ಯಾರು?

ರಾಜಶೇಖರ ಪಾಟೀಲ ಹುಮನಾಬಾದ್‌, ಸಾಗರ್‌ ಖಂಡ್ರೆ ಹೆಸರು ಮುಂಚೂಣಿಯಲ್ಲಿ
Published 15 ಮಾರ್ಚ್ 2024, 5:33 IST
Last Updated 15 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಬೀದರ್‌: ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

ಪಕ್ಷದಲ್ಲಿ ತೀವ್ರ ತಿಕ್ಕಾಟವಿದ್ದರೂ ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿ ಎಲ್ಲ ರೀತಿಯ ಗೊಂದಲಗಳಿಗೆ ತೆರೆ ಎಳೆದಿದೆ. ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮೂರನೇ ಸಲ ಪಕ್ಷ ಟಿಕೆಟ್‌ ನೀಡಿದೆ. ಇದರೊಂದಿಗೆ ಬಿಜೆಪಿಯ ‘ಸಸ್ಪೆನ್ಸ್‌’ಗೆ ತೆರೆ ಬಿದ್ದಿದೆ. ಆದರೆ, ಕಾಂಗ್ರೆಸ್‌ ಇನ್ನೂ ಗೊಂದಲದಲ್ಲಿ ಮುಳುಗಿರುವಂತೆ ಕಾಣಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಹೆಸರು ಈ ಹಿಂದೆ ಕೇಳಿ ಬಂದಿತ್ತು. ಆದರೆ, ಸ್ವತಃ ಅವರೇ ಅದನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ್ದಾರೆ. ಆನಂತರ ಮಾಜಿಸಚಿವರೂ ಆದ ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಹೆಸರು ಕೇಳಿ ಬಂದಿತ್ತು. ದಿನಗಳು ಕಳೆದಂತೆ ಸಚಿವ ಈಶ್ವರ ಖಂಡ್ರೆಯವರ ಮಗ ಸಾಗರ್‌ ಖಂಡ್ರೆಯವರ ಹೆಸರು ಮುಂಚೂಣಿಗೆ ಬಂದಿದೆ. ಜಿಲ್ಲೆಯ ಪ್ರತಿಯೊಂದು ಭಾಗದಲ್ಲಿ ಅವರ ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಚುನಾವಣೆಗೆ ಬೇಕಾದ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರರೂ ಆದ ಆಳಂದ ಶಾಸಕ ಬಿ.ಆರ್‌. ಪಾಟೀಲ, ಮುಖಂಡರಾದ ಬಸವರಾಜ ಬುಳ್ಳಾ, ಅಯಾಜ್‌ ಖಾನ್‌, ಅಬ್ದುಲ್‌ ಮನ್ನಾನ್‌ ಸೇಠ್‌ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಸಾಗರ್‌ ಖಂಡ್ರೆ ಅಥವಾ ರಾಜಶೇಖರ ಪಾಟೀಲ ಹುಮನಾಬಾದ್‌ ಇವರಿಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ದೃಢಪಡಿಸಿವೆ.

ನೆರೆಯ ಜಿಲ್ಲೆ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಒಂದುವೇಳೆ ಸಾಗರ್‌ ಖಂಡ್ರೆಯವರಿಗೆ ಬೀದರ್‌ ಕ್ಷೇತ್ರದ ಟಿಕೆಟ್‌ ಕೊಟ್ಟರೆ ‘ಪರಿವಾರವಾದ’ ರಾಜಕಾರಣದ ಆರೋಪ ಬರಬಹುದು. ಎರಡೂ ಕ್ಷೇತ್ರಗಳ ಮೇಲೆ ಅದರ ಪರಿಣಾಮ ಬೀರಬಹುದು. ಹೀಗಾಗಿ ಪಕ್ಷವು ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೊಂದೆಡೆ ರಾಜಶೇಖರ ಪಾಟೀಲ ಹುಮನಾಬಾದ್‌ ಅವರು ಟಿಕೆಟ್‌ ಅಂತಿಮಗೊಳ್ಳುವವರೆಗೆ ಯಾವುದೇ ರೀತಿಯ ಹೇಳಿಕೆ ಕೊಡದಿರಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಟೀಲ ಪರ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಈಶ್ವರ ಬಿ. ಖಂಡ್ರೆಯವರು ಮಗನಿಗೆ ಟಿಕೆಟ್‌ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಒಟ್ಟಿನಲ್ಲಿ ಸಾಗರ್‌ ಖಂಡ್ರೆ ಹಾಗೂ ರಾಜಶೇಖರ ಪಾಟೀಲ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ.

‘ಮುಂಚೂಣಿಯಲ್ಲಿ ಇಬ್ಬರ ಹೆಸರು’

‘ಕಾಂಗ್ರೆಸ್‌ ಪಕ್ಷದಲ್ಲಿ ಅನೇಕ ಜನ ಆಕಾಂಕ್ಷಿಗಳಿದ್ದಾರೆ. ಆದರೆ ಸಾಗರ್‌ ಖಂಡ್ರೆ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಹೆಸರು ಮುಂಚೂಣಿಯಲ್ಲಿವೆ. ಇಷ್ಟರಲ್ಲೇ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT