ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರಕ್ಕಿಲ್ಲ ಅವಕಾಶ

ಚುನಾವಣಾ ಆಯೋಗದ ನಿರ್ದೇಶನ ಪಾಲಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ
Published 21 ಮಾರ್ಚ್ 2024, 8:18 IST
Last Updated 21 ಮಾರ್ಚ್ 2024, 8:18 IST
ಅಕ್ಷರ ಗಾತ್ರ

ಬೀದರ್‌: ‘ರಾಜಕೀಯ ಪಕ್ಷಗಳು ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಭೆ–ಸಮಾರಂಭ, ಪ್ರಚಾರ ನಡೆಸುವಂತಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆದ ವಾಹನಗಳನ್ನು ಮಾತ್ರ ಬಳಸಬೇಕು. ಪ್ರತಿ ಹತ್ತು ವಾಹನಗಳ ನಂತರ ನೂರು ಮೀಟರ್ ಅಂತರ ಕಾಯ್ದುಕೊಂಡು ಮೆರವಣಿಗೆ ನಡೆಸಬೇಕು. ಯಾವುದೇ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರಿಗೆ ಊಟ ಕೊಡುವ ಹಾಗಿಲ್ಲ. ನೀರು ಮತ್ತು ಮಜ್ಜಿಗೆ ಕೊಡಬಹುದು. ಈ ಮಾಹಿತಿಯನ್ನು ತಮ್ಮ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ ತಿಳಿಸಬೇಕು ಎಂದು ಸೂಚಿಸಿದರು.

ಚುನಾವಣಾ ಪ್ರಚಾರ ಸಭೆಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10ರ ಒಳಗೆ ಆಯೋಜಿಸತಕ್ಕದ್ದು. ಸಮಯ ಮೀರಿದ ನಂತರ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಒಂದು ಕಾರ್ಯಕ್ರಮದ ನಂತರ ಇನ್ನೊಂದು ಕಾರ್ಯಕ್ರಮ ಆಯೋಜನೆಗೆ ಕನಿಷ್ಠ ಒಂದು ಗಂಟೆಯ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಮನೆಗಳ ಮೇಲೆ ಪಕ್ಷದ ಧ್ವಜ ಹಾಗೂ ಗೋಡೆ ಬರಹಗಳನ್ನು ಬರೆಸಬೇಕಾದರೆ ಆ ಮನೆ ಮಾಲೀಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದರು.

ಜನನಿಬಿಡ ಪ್ರದೇಶಗಳಲ್ಲಿ ಸಭೆ, ಸಮಾರಂಭ ಮಾಡಲು ಅವಕಾಶ ಇರುವುದಿಲ್ಲ.‌ ಚುನಾವಣಾ ಸಭೆ– ಸಮಾರಂಭ, ವಾಹನ, ಚುನಾವಣಾ ಕಚೇರಿ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯಲು ಸುವಿಧಾ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಏಪ್ರಿಲ್ 12ರಿಂದ ನಾಮಪತ್ರಗಳ ಸಲ್ಲಿಕೆ‌ ಆರಂಭವಾಗಲಿದೆ. ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ. 20ರಂದು ನಾಮಪತ್ರಗಳ ಪರಿಶೀಲನೆ, ಏ. 22ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ. 7ರಂದು ಮತದಾನ ನಡೆಯಲಿದೆ. ಜೂ. 4ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶೀಲ್ದಾರ ಅಣ್ಣಾರಾವ್ ಪಾಟೀಲ, ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಸಿಪಿಎಂ ಸೇರಿದಂತೆ ಇತರೆ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

‘ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ’

‘ಈಗಾಗಲೇ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಯಾರು ಕೂಡ ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗೂ ಸ್ಥಳಾಂತರಿಸಲು ಏಪ್ರಿಲ್‌ 9ರ ವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ. ಜಿಲ್ಲೆಯ ಮತದಾರರು https://bidar.nic.in/ ಹಾಗೂ ರಾಜ್ಯದ ವೆಬ್‌ಸೈಟ್‌ ವಿಳಾಸ https://voters.eci.gov.in/download-eroll?statecode=S10ನಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಥವಾ https://electoralsearch.eci.gov.in/ voterhelpline ಆ್ಯಪ್‌ನಲ್ಲಿ ತಮ್ಮ ಮತಗಟ್ಟೆ ಮಟ್ಟದ ಅಧಿಕಾರಿ ಭೇಟಿ ಮಾಡಿ ಹೆಸರುಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬಹುದು. ಒಂದುವೇಳೆ ಹೆಸರಿರದಿದ್ದಲ್ಲಿ ಅಥವಾ ಸ್ಥಳಾಂತರಿಸಬೇಕಾದಲ್ಲಿ ತಹಶೀಲ್ದಾರ್‌ ಕಚೇರಿ ಅಥವಾ ಬಿಎಲ್‌ಒ ಮೂಲಕ ನಮೂನೆ–6ರ ಮೂಲಕ ಹೆಸರು ನೋಂದಣಿ ಮಾಡಿಸಬಹುದು. ನಮೂನೆ 8 ಭರ್ತಿ ಮಾಡಿ ಹೆಸರು ಸ್ಥಳಾಂತರಿಸಿಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಏ. 9 ಕಡೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ 21 ಪ್ರಕರಣ

‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾ. 16ರಿಂದ ಮಾ. 20ರ ವರೆಗೆ ಜಿಲ್ಲೆಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಒಟ್ಟು ₹7.15 ಲಕ್ಷ ಮೌಲ್ಯದ  ಮದ್ಯವನ್ನು ಅಬಕಾರಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT