ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಮುದ್ದೆ ಚರ್ಮ ರೋಗ: ಹೈನುಗಾರಿಕೆ ಉದ್ಯಮಕ್ಕೆ ಪೆಟ್ಟು

ವೈರಾಣುವಿನಿಂದ ಪಶು ಸಂಗೋಪನೆ
Last Updated 4 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಜನವಾಡ: ಕೊರೊನಾ ವೈರಾಣು ಮನುಷ್ಯರನ್ನು ಕಾಡುತ್ತಿದ್ದರೆ, ಜಾನುವಾರುಗಳಿಗೆ ಈಗ ‘ಮುದ್ದೆ ಚರ್ಮ ರೋಗ’ದ ಆತಂಕ ಎದುರಾಗಿದೆ. ಕೆಲ ದಿನಗಳಿಂದ ವಿಶೇಷವಾಗಿ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ಮುದ್ದೆ ಚರ್ಮ ರೋಗ ಕಾಣಿಸಿಕೊಂಡಿದೆ.

ಹೈನು ರಾಸುಗಳು ಕಡಿಮೆ ಹಾಲು ಕೊಡುವುದು, ಜಾನುವಾರುಗಳ ಕಾರ್ಯ ನಿರ್ವಹಣೆ ಸಾಮರ್ಥ್ಯ ಕಡಿಮೆ ಆಗುವುದು ಇದರ ಲಕ್ಷಣಗಳಾಗಿವೆ. ಆಡು ಮತ್ತು ಕುರಿಗಳಿಗೆ ಇದು ಬಾಧೆ ಉಂಟು ಮಾಡುವುದಿಲ್ಲ.

ಈಚಿನ ದಿನಗಳಲ್ಲಿ ಮುದ್ದೆ ಚರ್ಮ ರೋಗ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ರೈತರು ರೋಗದ ಮಾಹಿತಿ ಪಡೆದು ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅಕ್ಷಯಕುಮಾರ ತಿಳಿಸಿದ್ದಾರೆ.

ಕೆಲ ಹಸು ಮತ್ತು ಎತ್ತುಗಳಲ್ಲಿ ಮೈ ಮೇಲೆ ಗುಳ್ಳೆ/ಗಡ್ಡೆಗಳಂತೆ ಬಾವು ಕಾಣಿಸಿಕೊಂಡು ಕೆಲ ದಿನಗಳ ನಂತರ ಒಡೆದು ರಕ್ತ ತೀವ್ರ ಸೋರಿಕೆಯಾಗುತ್ತದೆ. ಪಶು ಸಂಗೋಪನೆ ಮತ್ತು ಹೈನುಗಾರಿಕೆ ಉದ್ಯಮಕ್ಕೆ ಈ ರೋಗ ಪೆಟ್ಟು ನೀಡಲಿದೆ. ಕಾರಣ, ಜಾನುವಾರು ಸಾಕಣೆ ಮಾಡುವವರು ಹಾಗೂ ರೈತರು ಕೆಲ ಕಾಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಈ ರೋಗದಿಂದ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಅಂದರೆ ಶೇ 1 ರಿಂದ 2 ರಷ್ಟು ಮಾತ್ರ ಇದೆ ಎಂದು ತಿಳಿಸಿದ್ದಾರೆ.

ಪ್ರಾರಂಭಿಕ ಹಂತದಲ್ಲಿ ರೋಗಗ್ರಸ್ತ ಪ್ರಾಣಿಗಳಲ್ಲಿ ಅತಿಯಾದ ಜ್ವರ, ಆಹಾರ ತಿನ್ನದಿರುವುದು, ನಿಶ್ಯಕ್ತಿ ಕಾಣಿಸುತ್ತದೆ. ಕೆಲ ಜಾನುವಾರುಗಳ ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಕಾಣಿಸುತ್ತದೆ ಎಂದು ಹೇಳಿದ್ದಾರೆ.

ಜಾನುವಾರು ಮೈ ಮೇಲೆ ಎಲ್ಲ ಕಡೆ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣುಗಳಿಂದ ನೀರು ಸೋರುತ್ತದೆ. ಕಾಲುಗಳಲ್ಲಿ ನೀರು ತುಂಬಿ ಬಾವು ಕಾಣಿಸುತ್ತದೆ ಎಂದು ತಿಳಿಸಿದ್ದಾರೆ.

ಈ ರೋಗವು ಸೊಳ್ಳೆ, ಉಣ್ಣೆ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ಒಂದು ಜಾನುವಾರಿನಿಂದ ಮತ್ತೊಂದಕ್ಕೆ ಹರಡುತ್ತದೆ. ರೋಗಗ್ರಸ್ತ ಜಾನುವಾರುಗಳಿಂದ ಮಲಿನಗೊಂಡ ಆಹಾರ ಹಾಗೂ ನೀರಿನಿಂದ ಹರಡುವ ಸಾಧ್ಯತೆ ಇರುತ್ತದೆ. ರೋಗಗ್ರಸ್ತ ಜಾನುವಾರಿಗೆ ಬಳಸಿದ ಸಿರೇಜ್ ಮತ್ತು ಸೂಜಿಯನ್ನು ಬೇರೆ ಜಾನುವಾರಿಗೆ ಉಪಯೋಗಿಸಿದಾಗಲೂ ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಮುದ್ದೆ ಚರ್ಮ ರೋಗಕ್ಕೆ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಜಾನುವಾರುಗಳಲ್ಲಿ ಕಾಣಿಸುವ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಅತಿಯಾದ ಜ್ವರವಿದ್ದರೆ ಪ್ರಾಥಮಿಕವಾಗಿ ಜಾನುವಾರಿನ ದೇಹ ತಂಪಾಗಿಸಲು ಹಸಿ ಬಟ್ಟೆ ಹಾಕಬೇಕು ಅಥವಾ ಅವುಗಳ ಮೇಲೆ ನೀರು ಹಾಕಬೇಕು ಎಂದು ತಿಳಿಸಿದ್ದಾರೆ.

ಜಾನುವಾರಿನ ಮೈಮೇಲೆ ಕಾಣಿಸುವ ಗಡ್ಡೆಗಳು ತೀವ್ರವಾದ ನೋವು ಉಂಟು ಮಾಡುವುದರಿಂದ ನೋವು ನಿವಾರಕ ಔಷಧ ಹಾಗೂ ಬ್ಯಾಕ್ಟೇರಿಯಲ್ ಇನ್‍ಪೆಕ್ಷನ್ ತಪ್ಪಿಸಲು ಐದರಿಂದ ಏಳು ದಿನಗಳವರೆಗೆ ಆ್ಯಂಟಿಬಯೊಟಿಕ್‍ಗಳನ್ನು ನುರಿತ ಪಶು ವೈದ್ಯರಿಂದ ಕೊಡಿಸಬೇಕು ಎಂದು ಹೇಳಿದ್ದಾರೆ.

ಚರ್ಮದ ಮೇಲಿನ ಗಾಯಗಳಿಗೆ ಪೊಟ್ಯಾಶಿಯಂ ಪರಮಾಂಗನೈಟ್ ನೀರಿನಿಂದ ತೊಳೆದು ಪೊವೆಡಿನ್ ಐಯೊಡಿನ್ ದ್ರಾವಣ/ಕ್ರೀಮ್ ಹಾಗೂ ಬೇವಿನ ಎಣ್ಣೆ ಲೇಪಿಸಬೇಕು. ರೋಗ ಹರಡುವಿಕೆ ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರ್ಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೊಟ್ಟಿಗೆ ಸ್ವಚ್ಛಗೊಳಿಸಲು ಫರ್ಮಲಿನ್ ಶೇ 1, ಸೋಡಿಯಂ ಹೈಪೊಕ್ಲೋರೈಟ್ ಶೇ 2-3 ಅಥವಾ ಫಿನೈಲ್ ಶೇ 2 ರಷ್ಟು ಬಳಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ಪಶು ಚಿಕಿತ್ಸಾಲಯವನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT