ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ವಕೀಲ ಬಾಬಶೆಟ್ಟಿ ಹತ್ಯೆಗೆ ₹5 ಲಕ್ಷ ಸುಪಾರಿ- ಪ್ರಮುಖ ಆರೋಪಿ ಬಂಧನ

Published 12 ಮೇ 2024, 6:27 IST
Last Updated 12 ಮೇ 2024, 6:30 IST
ಅಕ್ಷರ ಗಾತ್ರ

ಬೀದರ್‌: ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಔರಾದ್‌ ತಾಲ್ಲೂಕಿನ ಖೇರ್ಡಾ ಗ್ರಾಮದ ಕಾಶಪ್ಪ ಚನ್ನಪ್ಪ ದೇಶಮುಖ (47) ಬಂಧಿತ. ಈತ ಖೇರ್ಡಾ ಗ್ರಾಮದ ಪಿಕೆಪಿಎಸ್‌ ಬ್ಯಾಂಕಿನ ಮುಖ್ಯ ಅಧಿಕಾರಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಾಲ ಬೀಸಿ ಶನಿವಾರ (ಮೇ 11) ಬಂಧಿಸಿದ್ದಾರೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಮೇ 5ರಂದು ನಗರದ ನೌಬಾದಿನ ಆಟೊ ನಗರ ಸಮೀಪ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಕೆಎ 34, ಎನ್‌ 0103 ಸಂಖ್ಯೆಯ ಕಾರು, ಮಚ್ಚು, ಖಾರದ ಪುಡಿ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಈ ವೇಳೆ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ. ಈಗ ಒಂದು ವಾರದ ನಂತರ ಮುಖ್ಯ ಆರೋಪಿಯನ್ನು ಸಹ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

‘ಔರಾದ್‌ ತಾಲ್ಲೂಕಿನ ವಡಗಾಂವ್‌ ಗ್ರಾಮದ ಸರ್ವೇ ನಂಬರ್‌ 163ರಲ್ಲಿ ಮೂರು ಎಕರೆ ಐದು ಗುಂಟೆ ಜಮೀನು ಕಾಶಪ್ಪ ಅವರಿಗೆ ಸೇರಿದೆ. ಸುಮಾರು ₹20 ಲಕ್ಷ ಸಾಲ ಪಡೆದು ಅದನ್ನು ಬೇರೊಬ್ಬರ ಹೆಸರಲ್ಲಿ ಅಡವಿಟ್ಟಿದ್ದಾರೆ. ಅಡವಿಟ್ಟುಕೊಂಡ ವ್ಯಕ್ತಿಯಿಂದ ವಕೀಲ ಬಾಬಶೆಟ್ಟಿ ಚಂದ್ರಪ್ಪ ಕರ್ಸೆ ಖರೀದಿಸಿದ್ದರು. ಜಮೀನು ಖರೀದಿಸದಂತೆ ತಿಳಿಸಿದ್ದರೂ ಕರ್ಸೆ ಕಿವಿಗೊಟ್ಟಿರಲಿಲ್ಲ. ಇದರಿಂದಾಗಿ ಕರ್ಸೆ ಮೇಲೆ ಕಾಶಪ್ಪ ದೇಶಮುಖನಿಗೆ ಮನಃಸ್ತಾಪವಿತ್ತು. ಸ್ನೇಹಿತನೊಂದಿಗೆ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ₹5 ಲಕ್ಷ ಸುಪಾರಿ ಕೊಟ್ಟು, ಮುಂಗಡವಾಗಿ ₹85 ಸಾವಿರ ನೀಡಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಏ. 28ರಂದು ನಗರದ ಕೆಎಚ್‌ಬಿ ಕಾಲೊನಿಯಲ್ಲಿ ವಕೀಲ ಬಾಬಶೆಟ್ಟಿ ಚಂದ್ರಪ್ಪ ಕರ್ಸೆ ಅವರ ಹತ್ಯೆಗೆ ಯತ್ನ ನಡೆದಿತ್ತು. ಅಂದು ಸಂಜೆ 7.30ರ ಸುಮಾರಿಗೆ ಇಂಡಿಕಾ ವಿಸ್ತಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಾಬಶೆಟ್ಟಿ ಅವರ ಮೇಲೆ ಖಾರದ ಪುಡಿ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ್ದರು. ಅವರ ಬಲಗೈ ಮತ್ತು ಮೂಗಿಗೆ ಗಾಯಗಳಾಗಿದ್ದವು. ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ಅವರ ಮೇಲೆ ಕಾರು ಹತ್ತಿಸಲು ವಿಫಲ ಯತ್ನ ನಡೆದಿತ್ತು. ಇದರಿಂದ ವಕೀಲರ ಬಲಗಾಲ ಹಿಮ್ಮಡಿಗೆ ಗಾಯಗಳಾಗಿದ್ದವು. ಕರ್ಸೆ ಅವರು ಕೊಟ್ಟ ದೂರಿನ ಮೇರೆಗೆ ನೂತನ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಮೇ 5ರಂದು ಮೂವರನ್ನು ಬಂಧಿಸಲಾಗಿತ್ತು. ಈಗ ಮುಖ್ಯ ಸೂತ್ರಧಾರನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯನ್ನು ಸಿಬ್ಬಂದಿ ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ನಾಗರೆಡ್ಡಿ ಬಂಧಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಡಿವೈಎಸ್ಪಿ ಶಿವನಗೌಡ ಪಾಟೀಲ, ನೂತನ ನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂತೋಷ ಎಲ್‌.ಟಿ. ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ತಂಡದಲ್ಲಿ ನೂತನ ನಗರ ಠಾಣೆಯ ಸಿಬ್ಬಂದಿ ರಾಮಣ್ಣ, ಮಲ್ಲಿಕಾರ್ಜುನ, ನಿಂಗಪ್ಪ, ಧನರಾಜ, ಭರತ, ಗಾಂಧಿ ಗಂಜ್‌ ಠಾಣೆಯ ಅನಿಲ್‌, ನವೀನ್‌, ಇರ್ಫಾನ್‌, ಗಂಗಾಧರ, ಪ್ರವೀಣ, ಮಾರ್ಕೆಟ್‌ ಠಾಣೆಯ ಆರಿಫ್‌, ಮುತ್ತಣ್ಣ ಹಾಗೂ ಪ್ರೇಮ ಇದ್ದರು. ಪ್ರಕರಣ ಭೇದಿಸಿದ ತಂಡದ ಎಲ್ಲರಿಗೂ ಪ್ರಶಂಸಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT