ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಹೇಳಿಕೆಗೆ ಖಂಡನೆ; ವರದಿ ಜಾರಿಯಾದರೆ ಹೋರಾಟ–ಶಾಸಕ ಚವಾಣ್‌ ಎಚ್ಚರಿಕೆ

Published 11 ಸೆಪ್ಟೆಂಬರ್ 2023, 16:35 IST
Last Updated 11 ಸೆಪ್ಟೆಂಬರ್ 2023, 16:35 IST
ಅಕ್ಷರ ಗಾತ್ರ

ಬೀದರ್‌: ‘ಸದಾಶಿವ ಆಯೋಗದ ವರದಿ ಜಾರಿಗೊಳಿಸುತ್ತೇವೆ’ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ನೀಡಿರುವ ಹೇಳಿಕೆ ತೀವ್ರ ಖಂಡನಾರ್ಹವಾದುದು. ಅವೈಜ್ಞಾನಿಕ, ಸಂವಿಧಾನಕ್ಕೆ ವಿರುದ್ಧವಾದ ವರದಿಯನ್ನು ಜಾರಿಗೊಳಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿಸಚಿವರೂ ಆದ ಬಿಜೆಪಿ ಔರಾದ್‌ ಶಾಸಕ ಪ್ರಭು ಚವಾಣ್ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಾದಿಗ ಸಮುದಾಯ ಆಯೋಜಿಸಿದ್ದ ಸಭೆಯಲ್ಲಿ ಮುನಿಯಪ್ಪ ಅವರು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಪರಿಶಿಷ್ಟರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಬಾರದಿತ್ತು. ಕೂಡಲೇ ಮುಖ್ಯಮಂತ್ರಿಯವರು ಮುನಿಯಪ್ಪ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ.

ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತಿ ದೊಡ್ಡ ಷಡ್ಯಂತ್ರ ಇದು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಈ ಆಯೋಗದ ವರದಿಯನ್ನು ಜಾರಿಗೊಳಿಸಬಾರದು. ರಾಜ್ಯದ ಜನ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿರುವುದು ಉತ್ತಮ ಆಡಳಿತ ಕೊಡಲೆಂದು. ಆದರೆ, ನೀವು ಅಧಿಕಾರಕ್ಕೆ ಬಂದ ನಂತರ ಜನರ ನೆಮ್ಮದಿ ಹಾಳು ಮಾಡಲು ಹೊರಟಿದ್ದೀರಿ ಎಂದು ಟೀಕಿಸಿದ್ದಾರೆ.

ಎಲ್ಲಾ ಜಾತಿಗಳಿಗೆ ಎಲ್ಲಾ ವಿಭಾಗಗಳಲ್ಲೂ ಸಮಪಾಲು ಬೇಕಿದೆ. ಅದು ನಮ್ಮ ಸಂವಿಧಾನದ ಆಶಯ. ಆದರೆ, ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇಲ್ಲಿಯವರೆಗೆ ಬಹಿರಂಗವಾಗದಿರುವ ವರದಿಯನ್ನು ಚರ್ಚೆಯಿಲ್ಲದೆ ಜಾರಿ ಮಾಡುವುದು ಅಪ್ರಜಾಸತ್ತಾತ್ಮಕ ಕ್ರಮವಾಗುತ್ತದೆ. ಸೋರಿಕೆಯಾಗಿರುವ ಈ ವರದಿಯ ಅಂಶಗಳನ್ನು ಗಮನಿಸಿದಾಗ ಇದಂತೂ ವಾಸ್ತವಕ್ಕೆ ದೂರವಾದ ವರದಿ ಎಂದು ಗೊತ್ತಾಗುತ್ತದೆ. ಹಳೆಯ ಅಂಕಿ ಅಂಶಗಳನ್ನು ಒಳಗೊಂಡಿರುವುದರಿಂದ ಇದರ ಚರ್ಚೆ ಈಗ ಅಪ್ರಸ್ತುತ. ಈ ವರದಿಯಿಂದ ಪರಿಶಿಷ್ಟರಿಗೆ ನ್ಯಾಯ ಸಿಗುವುದಿಲ್ಲ. ರಾಜ್ಯದಲ್ಲಿನ ಕೊರಮ, ಕೊರಚ, ಬೋವಿ ಹಾಗೂ ಬಂಜಾರ ಸಮುದಾಯವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವು ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ರಾಜ್ಯದಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ಹೊರಟಿದೆ.
– ಪ್ರಭು ಚವಾಣ್‌, ಔರಾದ್‌ ಶಾಸಕ

2005ರಲ್ಲಿ ರಚನೆಯಾದ ಸದಾಶಿವ ಆಯೋಗ ಏಳು ವರ್ಷಗಳ ನಂತರ 2012ರಲ್ಲಿ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿ ಸಲ್ಲಿಕೆಯಾಗಿ ಈಗಾಗಲೇ 12 ವರ್ಷಗಳು ಕಳೆದು ಹೋಗಿವೆ. ಈಗ ಇದನ್ನು ಜಾರಿಗೊಳಿಸುತ್ತೇವೆ ಎನ್ನುವುದು ಅಪ್ರಸ್ತುತ. ರಾಜ್ಯದಲ್ಲಿ ಬಂಜಾರ, ಬೋವಿ, ಕೊರಚ, ಕೊರಮ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಸರ್ಕಾರಿ ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಈ ಸಮುದಾಯಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕೆ ಹೊರತು ಇವರಿಗಿರುವ ಸವಲತ್ತುಗಳನ್ನು ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ವಿನಾಕಾರಣ ಯಾರಾದ್ದೊ ಮೇಲಿನ ಸೇಡು ತೀರಿಸಿಕೊಳ್ಳಲು ಜಾತಿನಿಂದನೆ ಪ್ರಕರಣ ದಾಖಲಾಗುತ್ತಿರುವುದರ ಬಗ್ಗೆ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರು ಇತ್ತೀಚೆಗೆ ಉಲ್ಲೇಖಿಸಿರುವುದು ಸರಿಯಾಗಿಯೇ ಇದೆ. ರಾಜ್ಯದಲ್ಲಿ ಈ ರೀತಿಯ ಬ್ಲ್ಯಾಕ್ ಮೆಲ್ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಅಟ್ರಾಸಿಟಿ ಪ್ರಕರಣಗಳು ಮಹತ್ವ ಕಳೆದುಕೊಳ್ಳುತ್ತವೆ. ಇದರಿಂದ ಬೇರೆ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಮುದಾಯದ ಜನ ಗಂಭೀರವಾಗಿ ಯೋಚಿಸಬೇಕೆಂದು ಚವಾಣ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT