ಶುಕ್ರವಾರ, ಡಿಸೆಂಬರ್ 2, 2022
19 °C

ಮಹಿಳಾ ಸಮಾನತೆಯಿಂದ ನಾಡಿನ ಅಭಿವೃದ್ಧಿ: ಪ್ರೊ.ಸ.ಚಿ ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಗೆ ಸಿಗಬೇಕಿದ್ದ ಸಮಾನ ಸ್ಥಾನಮಾನ ದೊರೆತರೆ ನಾಡಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಗೌರಿ ಪ್ರಕಾಶನದ ಸಹಯೋಗದಲ್ಲಿ ಸುನೀತಾ ಕೂಡ್ಲಿಕರ್ ರಚಿತ ‘ತಾಯ್ತನದ ವಿಭಿನ್ನ ಗ್ರಹಿಕೆಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇಡೀ ನಾಡಿಗೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ತಾಯಿ-ಮಗುವಿನ ವೃತ್ತ ನಿರ್ಮಿಸಿ ಮಹಿಳೆಗೆ ಆದರ ಪೂರ್ವಕವಾಗಿ ಕಂಡಿದೆ. 12ನೇ ಶತಮಾನದಲ್ಲಿ ಅಂದಿನ ಶರಣರು ಮಹಿಳೆಯನ್ನು ಎತ್ತರದಲ್ಲಿ ಕಂಡಿರುವ ಅನೇಕ ಉದಾಹರಣೆಗಳು ಇವೆ’ ಎಂದರು.

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ’ ಎಂಬ ಗಾದೆ ಅಕ್ಷರಶಃ ಸತ್ಯವಾಗಿಸಲು ಆಕೆಗೆ ಉತ್ತಮ ಶಿಕ್ಷಣ ನೀಡುವುದು ಅಗತ್ಯ. ಮಹಿಳೆ ಇಂದು ಹಲವು ವಿಧದಲ್ಲಿ ಕೌಟುಂಬಿಕ ಹಿಂಸೆ ಅನುಭವಿಸುತ್ತಾಳೆ. ಹೆಣ್ಣು, ಗಂಡೆಂಬ ಭೇದ ಮಾಡುವವರು ಮೊದಲು ಈ ಪುಸ್ತಕ ಖರೀದಿಸಿ ಅಧ್ಯಯನ ಮಾಡಿದರೆ ನಿಜಕ್ಕೂ ಮಹಿಳೆಯ ಸತ್ಯ ರೂಪ ಪರಿಚಯವಾಗಲಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಬೀದರ್ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಳ್ಳಿ ಮಾತನಾಡಿ,‘ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವದ ಸ್ಥಾನ ಇದೆ. ನಮ್ಮ ಸಂಸ್ಕೃತಿ ನೋಡಿ ವಿದೇಶಿಗರು ಸಹ ಇತ್ತಿಚೀಗೆ ಹೆಣ್ಣನ್ನು ಗೌರವಿಸುವ ಮನಸ್ಸು ಮಾಡಿದ್ದಾರೆ. ಇದು ಒಳ್ಳೆ ಬೆಳವಣಿಗೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ,‘ಆಧುನಿಕ ಕಾಲದಲ್ಲಿ ತಾಯಿಯನ್ನು ಗೌರವಿಸುವುದರ ಬಗ್ಗೆ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಹಿಳೆ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು, ಒಳ್ಳೆ ಸಂಸ್ಕಾರವನ್ನೂ ಕೊಡಬೇಕು. ಆ ಮಗು ಮನೆಗೆ, ಕುಟುಂಬಕ್ಕೆ ಹಾಗೂ ಇಡೀ ಸಮಾಜದ ಆಸ್ತಿಯಾಗಿ ನಿಲ್ಲುವಂತೆ ಮಾಡಬೇಕು’ ಎಂದು ತಿಳಿಸಿದರು.

ಸಾಹಿತಿ ಡಾ.ಸೋಮನಾಥ ಯಾಳವಾರ ಮಾತನಾಡಿದರು. ಸುನೀತಾ ಕೂಡ್ಲಿಕರ್, ಶಾಂತಾಬಾಯಿ ಕಾಟೇಕರ್, ಡಾ.ರಾಜೇಂದ್ರ ಬಿರಾದಾರ, ಭಾರತಿ ವಸ್ತ್ರದ, ಡಾ.ಅಶೋಕ ಕೋರೆ, ಡಾ.ಸಂಜೀವಕುಮಾರ ಜುಮ್ಮಾ ಹಾಗೂ ಸಂಜೀವಕುಮಾರ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಸರ್ಕಾರಿ ಡಿಪ್ಲೊಮಾ ಕಾಲೇಜಿನ ಸುನೀಲಕುಮಾರ ಕೂಡ್ಲಿಕರ್, ಅಕ್ಕಮಹಾದೇವಿ ಬ್ಯಾಂಕ್‍ನ ಅಧ್ಯಕ್ಷೆ ನೀಲಗಂಗಾ ಹೆಬ್ಬಾಳೆ, ಕರ್ನಾಟಕ ಜಾನಪದ ಪರಿಷತ್‍ನ ಪ್ರಕಾಶ ಕನ್ನಾಳೆ ಹಾಗೂ ಶಿವಶರಣಪ್ಪ ಗಣೇಶಪುರ ಇದ್ದರು.

ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಮಹಾನಂದಾ ಮಡಕಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.