ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆಯಾಗದ ಆಪರೇಷನ್ ಥಿಯೇಟರ್‌

ದನಗಳ ಕೊಟ್ಟಿಗೆಯಾದ ಕೆಲ ಆರೋಗ್ಯ ಉಪ ಕೇಂದ್ರಗಳು
Last Updated 8 ಜುಲೈ 2018, 14:42 IST
ಅಕ್ಷರ ಗಾತ್ರ

ಜನವಾಡ: ಗ್ರಾಮೀಣ ಭಾಗದ ಜನರಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ಸುಲಭವಾಗಿ ಒದಗಿಸಲು ಸರ್ಕಾರ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಪರೇಷನ್ ಥಿಯೇಟರ್‌ಗಳನ್ನು ನಿರ್ಮಿಸುತ್ತಿದೆ. ಆದರೆ, ಅವು ರೋಗಿಗಳಿಂದ ದೂರವೇ ಉಳಿದಿವೆ.

ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಪರೇಷನ್ ಥಿಯೇಟರ್‌ಗಳು ಇದ್ದರೂ ಒಂದೂ ಬಳಕೆಯಲ್ಲಿ ಇಲ್ಲ. ಹೀಗಾಗಿ ರೋಗಿಗಳು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೂ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇದೆ.

ಮಹಿಳೆಯರು ಹಾಗೂ ಪುರುಷರ ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಇಲ್ಲವೇ ಭಾರತೀಯ ಕುಟುಂಬ ಯೋಜನಾ ಸಂಘ (ಎಫ್‌ಪಿಎಐ)ವನ್ನು ಅವಲಂಬಿಸುವಂತಾಗಿದೆ. ಬಳಕೆ ಮಾಡಿಕೊಳ್ಳದ ಕಾರಣ ಕೆಲ ಕಡೆ ಆಪರೇಷನ್ ಥಿಯೇಟರ್‌ಗಳ ಕಿಟಕಿ, ಗಾಜುಗಳು ಒಡೆದಿವೆ. ಟೈಲ್ಸ್‌ಗಳು ಕಿತ್ತು ಬಂದಿವೆ. ಬೀದರ್ ತಾಲ್ಲೂಕಿನಲ್ಲಿ ನಗರ ಪ್ರದೇಶದಲ್ಲಿ 5 ಹಾಗೂ ಗ್ರಾಮೀಣ ಪ್ರದೇಶದಲ್ಲಿ 9 ಪಿಎಚ್‌ಸಿಗಳು ಇವೆ. ಮನ್ನಳ್ಳಿ, ಕಮಠಾಣ, ಬಗದಲ್, ಘೋಡಂಪಳ್ಳಿ, ಚಿಲ್ಲರ್ಗಿ, ಜನವಾಡ, ಯರನಳ್ಳಿ, ಆಣದೂರು ಹಾಗೂ ಖೇಣಿ ರಂಜೋಳ ಇವು ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು.

ಗ್ರಾಮಾಂತರ ಪ್ರದೇಶದ ಪಿಎಚ್‌ಸಿಗಳಲ್ಲಿ ಮನ್ನಳ್ಳಿ ಒಂದರಲ್ಲೇ 108 ಅಂಬುಲೆನ್ಸ್ ಇದೆ. ಆಣದೂರು, ಕಮಠಾಣ ಹಾಗೂ ಚಿಲ್ಲರ್ಗಿಯಲ್ಲಿ ಓಮ್ನಿ ವಾಹನಗಳು ಇವೆ. ಬಗದಲ್, ಘೋಡಂಪಳ್ಳಿ, ಜನವಾಡ, ಖೇಣಿ ರಂಜೋಳ ಹಾಗೂ ಯರನಳ್ಳಿಯಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ವಾಹನದ ವ್ಯವಸ್ಥೆ ಇಲ್ಲ.

108 ಅಂಬುಲೆನ್ಸ್ ನಲ್ಲಿ ಎಲ್ಲ ಬಗೆಯ ರೋಗಿಗಳಿಗೆ ಉಚಿತ ಸೇವೆ ಇದೆ. ಆಮ್ನಿ ವಾಹನದಲ್ಲಿ ಗರ್ಭಿಣಿಯರು ಮಾತ್ರ ಹೆರಿಗೆಗಾಗಿ ಉಚಿತ ಸೇವೆ ಪಡೆಯಬಹುದಾಗಿದೆ. ಬೇರೆ ರೋಗಿಗಳು ಪೆಟ್ರೋಲ್ ವೆಚ್ಚವನ್ನು ಖುದ್ದು ಭರಿಸಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಜನ.

ಘೋಡಂಪಳ್ಳಿ, ಯರನಳ್ಳಿ ಹಾಗೂ ಖೇಣಿ ರಂಜೋಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಹೆರಿಗೆ ಸೌಲಭ್ಯ ಇಲ್ಲದ ಕಾರಣ ಗರ್ಭಿಣಿಯರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಚಿಲ್ಲರ್ಗಿ ಗ್ರಾಮದ ಮುಖಂಡ ಶ್ರೀನಿವಾಸ ರೆಡ್ಡಿ ದೂರುತ್ತಾರೆ.ಕಮಠಾಣ, ಆಣದೂರು, ಯರನಳ್ಳಿ, ಘೋಡಂಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತುಗೋಡೆ ಇಲ್ಲದೇ ಇರುವುದರಿಂದ ಕೇಂದ್ರಗಳ ಜಾಗ ಅತಿಕ್ರಮಣ ಮಾಡಿಕೊಳ್ಳಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ತಾಲ್ಲೂಕಿನಲ್ಲಿರುವ 54 ಆರೋಗ್ಯ ಉಪ ಕೇಂದ್ರಗಳ ಪೈಕಿ ಸುಮಾರು 8ಕ್ಕೆ ಸ್ವಂತ ಕಟ್ಟಡ ಇಲ್ಲ. ಐದು ಶಿಥಿಲಗೊಂಡಿವೆ. ಕೆಲ ಉಪ ಕೇಂದ್ರಗಳ ಆವರಣವನ್ನೇ ಜನ ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ. ದನಗಳನ್ನೂ ಕಟ್ಟುತ್ತಿದ್ದಾರೆ ಎನ್ನುತ್ತಾರೆ ಹಿರಿಯರೊಬ್ಬರು.

ತಾಲ್ಲೂಕಿನಲ್ಲಿ ವೈದ್ಯರ ಕೊರತೆ ಇದೆ. ಅಲೋಪಥಿ ವೈದ್ಯರ ಕೊರತೆಯ ಕಾರಣ ಆಯುಷ್ ವೈದ್ಯರ ಸೇವೆ ಪಡೆದುಕೊಳ್ಳಲಾಗುತ್ತಿದೆ. ತಾಲ್ಲೂಕಿನ ಪಿಎಚ್‌ಸಿಗಳಲ್ಲಿ ಏಳು ಜನ ಮಾತ್ರ ಕಾಯಂ ವೈದ್ಯರು ಇದ್ದಾರೆ. ಇರುವ ವೈದ್ಯರಿಗೆ ಎರಡು-ಮೂರು ಪಿಎಚ್‌ಸಿಗಳ ಪ್ರಭಾರ ನೀಡಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯು ರೋಗಿಗಳಿಗೆ ಸಮರ್ಪಕ ಸೇವೆ ಒದಗಿಸಲು ತೊಡಕಾಗಿ ಪರಿಣಮಿಸಿದೆ. ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತು ಕೊಡಬೇಕಿದೆ. ಬಡ ರೋಗಿಗಳಿಗೆ ಎಲ್ಲ ಬಗೆಯ ಆರೋಗ್ಯ ಸೇವೆ ಒದಗಿಸುವ ಕೆಲಸ ಆಗಬೇಕಿದೆ ಎಂದು ಜನ ಅಭಿಪ್ರಾಯಪಡುತ್ತಾರೆ.

ಏನಿದೆ ಸೌಲಭ್ಯ:
ಹೊರ, ಒಳ ರೋಗಿಗಳ ವಿಭಾಗ, ಹೆರಿಗೆ ಸೌಲಭ್ಯ, ಗರ್ಭಿಣಿ, ಬಾಣಂತಿ ಹಾಗೂ ಐದು ವರ್ಷದೊಳಗಿನ ಮಕ್ಕಳ ಉಚಿತ ತಪಾಸಣೆ, ಪ್ರತಿ ದಿನ ಲಸಿಕಾ ಅಧಿವೇಶನ, ಪ್ರತಿ ವಾರ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ರೋಗಗಳ ಮಾಹಿತಿ ನೀಡುವ ಸ್ನೇಹ ಕ್ಲಿನಿಕ್, ಪ್ರತಿ ತಿಂಗಳ 9ನೇ ದಿನಾಂಕದಂದು ಗಂಡಾಂತರ ಗರ್ಭಿಣಿಯರ ತಪಾಸಣೆ, ತಿಂಗಳಿಗೊಮ್ಮೆ ಹೊಸ ಕ್ಷಯರೋಗಿಗಳ ಹಾಗೂ ಹಳೆಯ ಕ್ಷಯರೋಗಿಗಳ ಸಭೆ.

ಏನಿಲ್ಲ:
ಕಾಯಂ ಅಲೋಪಥಿ ವೈದ್ಯರು, ಸ್ತ್ರೀರೋಗ, ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಕರ ಕೊರತೆ ಇದೆ. 108 ಆಂಬುಲನ್ಸ್ ಸೇವೆ ಎಲ್ಲೆಡೆ ಇಲ್ಲ. ಆಪರೇಷನ್ ಥಿಯೇಟರ್‌ಗಳು ಚಾಲ್ತಿಯಲ್ಲಿ ಇಲ್ಲ. ಮೂರು ಪಿಎಚ್‌ಸಿಗಳಿಲ್ಲ. ದಿನದ 24 ಗಂಟೆ ಹೆರಿಗೆ ಸೇವೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT