ಭಾನುವಾರ, ಸೆಪ್ಟೆಂಬರ್ 26, 2021
28 °C

ಮೂರು ತಿಂಗಳಿಂದ ನರೇಗಾ ಹಣ ಬಂದಿಲ್ಲ: ಸಚಿವ ಬಂಡೆಪ್ಪ ಕಾಶೆಂಪೂರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ರಾಜ್ಯದ 156 ತಾಲ್ಲೂಕುಗಳಲ್ಲಿ ಬರ ಇದೆ. ಜಿಲ್ಲೆಗಳಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕೆಂದರೆ ಕೇಂದ್ರ ಸರ್ಕಾರದಿಂದ ಮೂರು ತಿಂಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನರೇಗಾ ಯೋಜನೆಯ ಹಣ ಬಂದಿಲ್ಲ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಆರೋಪಿಸಿದರು.

‘ಕೇಂದ್ರ ಸರ್ಕಾರದ ಭರವಸೆಯ ಮೇಲೆ ಕುಳಿತರೆ ಜನರು ಉದ್ಯೋಗ ಅರಸಿ ಬೇರೆ ಊರುಗಳಿಗೆ ಗುಳೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮನಗಂಡು ರಾಜ್ಯ ಸರ್ಕಾರವೇ ಕಾಮಗಾರಿ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳನ್ನು ಮುಂದುವರಿಸಿದೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿಕರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಕಾಶೆಂಪೂರ ಆರೋಪಿಸಿದರು.

‘ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎನ್ನುವ ಕೂಗು ಇತ್ತು. ಮಹಾರಾಷ್ಟ್ರ ಹಾಗೂ ತಮಿಳುನಾಡಿನ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು. ಆದರೆ, ಸಾಲ ಮನ್ನಾ ಮಾಡಲಿಲ್ಲ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಸಹಕಾರ ಬ್ಯಾಂಕ್‌ಗಳ ರೈತರ ಸಾಲಮನ್ನಾ ಯೋಜನೆ ಮುಂದಿನ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಆದರೆ, ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ರೈತರಿಗೆ ಏನು ಮಾಡಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸಹಕಾರ ಬ್ಯಾಂಕ್‌ಗಳ ಮೂಲಕ 22 ಲಕ್ಷ ರೈತರು ಪಡೆದಿದ್ದ ₹ 8,165 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಬೀದರ್‌ ಜಿಲ್ಲೆಯ ರೈತರ ₹522 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರ, ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ ₹ 44 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಹಿಂದಿನ ಯಾವ ಸರ್ಕಾರವೂ ಇಷ್ಟು ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿದ ಉದಾಹರಣೆ ಇಲ್ಲ’ ಎಂದು ತಿಳಿಸಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದ 8 ಲಕ್ಷ ರೈತರ 2,800 ಕೋಟಿ ಸಾಲ ಮನ್ನಾ ಆಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದ 1.17 ಲಕ್ಷ ಜನರ ₹ 509 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಜೂನ್‌ 10ರ ವೇಳೆಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರೈತರ ಆದಾಯ ಹೆಚ್ಚಿಸಲು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

‘ದೇಶದಲ ಕ್ಷೀರ ಕ್ರಾಂತಿಯಲ್ಲಿ ಗುಜರಾತ್‌ನ ಅಮೂಲ್‌ ಮೊದಲ ಹಾಗೂ ಕರ್ನಾಟಕದ ನಂದಿನಿ ದ್ವಿತೀಯ ಸ್ಥಾನದಲ್ಲಿದೆ. ರೈತರಿಗೆ ಪ್ರತಿ ಲೀಟರ್ ಹಾಲಿಗೆ ಆರು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ, ಕೇಂದ್ರ ರೈತರ ಖಾತೆಗೆ ಕೇವಲ ₹ 2 ಸಾವಿರ ಜಮಾ ಮಾಡುವುದಾಗಿ ಘೋಷಣೆ ಮಾಡಿದೆ. ಇಷ್ಟು ಹಣದಿಂದ ರೈತರಿಗೆ ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎನ್ನುವುದು ಗೊತ್ತಿಲ್ಲ’ ಎಂದು ಟೀಕಿಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ಬಾರಿ ರಾಜ್ಯಕ್ಕೆ ಬಂದರೂ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ’ ಎಂದು ಹೇಳಿದರು.

ಬಿಜೆಪಿಯಿಂದ ಅಸ್ಥಿರತೆ ಸೃಷ್ಟಿ

ಬಿಜೆಪಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರ್ಕಾರ ಬೀಳಲಿದೆ ಎನ್ನುವುದನ್ನು ಉಲ್ಲೇಖಿಸಿ ಗಡುವುಗಳನ್ನು ಕೊಡುತ್ತಲೇ ಬಂದಿದೆ. ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರ ಪತನವಾಗುವುದಿಲ್ಲ. ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಮೈತ್ರಿ ಸರ್ಕಾರದ ಕೈಹಿಡಿಯಲಿದ್ದು, ಜೆಡಿಎಸ್‌–ಕಾಂಗ್ರೆಸ್‌ ಸೇರಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ’ ಎಂದು ಹೇಳಿದರು.

ಜಾತ್ಯತೀತ ಪಕ್ಷಕ್ಕೆ ಬೆಂಬಲಿಸಿ: ಅಲೆಗ್ಝಾಂಡರ್

ಕೇಂದ್ರದಲ್ಲಿ ಜಾತ್ಯತೀತ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ದಿಸೆಯಲ್ಲಿ ಮತದಾರರು ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮಾಜಿ ಸಚಿವ ಅಲೆಗ್ಝಾಂಡರ್ ಮನವಿ ಮಾಡಿದರು.

‘ನಾನು ಕೇರಳದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾದ ನಂತರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಿವೃತ್ತಿಯ ನಂತರ ಮತ್ತೆ ಕಾಂಗ್ರೆಸ್‌ ಸೇರಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಕ್ರೈಸ್ತ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ್ದೇನೆ. ಕಾಂಗ್ರೆಸ್‌ ಸಾಧನೆ ಹಾಗೂ ಬಿಜೆಪಿ ವೈಫಲ್ಯವನ್ನು ಮತದಾರರ ಗಮನಕ್ಕೆ ತಂದಿದ್ದೇನೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು