ಬೀದರ್: 2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ವರ್ಚುವಲ್ ಮೂಲಕ ಚಾಲನೆ ಕೊಟ್ಟಿದ್ದಾರೆ. ಅದೇ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಫೆ. 7ರಂದು ಪುನಃ ಚಾಲನೆ ಕೊಡಲು ಮುಂದಾಗಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ ಖಂಡ್ರೆ ವಿರುದ್ಧ ಹರಿಹಾಯ್ದರು. ಪಾಪನಾಶ ದೇವಸ್ಥಾನದ ಜೀರ್ಣೊದ್ಧಾರಕ್ಕೆ ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರಕ್ಕೆ 2022ರ ಸೆಪ್ಟೆಂಬರ್ 21ರಂದು ಪ್ರಸ್ತಾವ ಸಲ್ಲಿಸಿದ್ದೆ. 2023ರ ಸೆಪ್ಟೆಂಬರ್ 19ರಂದು ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆಯಡಿ ಗುರುತಿಸಿ, 2024ರ ಮಾರ್ಚ್ 7ರಂದು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮಾನಿಟರಿಂಗ್ ಏಜೆನ್ಸಿ ನಿಗದಿಪಡಿಸಿ ಟೆಂಡರ್ ಕರೆಯಲಾಗಿತ್ತು. ಈಗ ಅದೇ ಕಾಮಗಾರಿಗೆ ಪುನಃ ಶಂಕುಸ್ಥಾಪನೆ ನೆರವೇರಿಸಿ, ಪ್ರಧಾನಿಗೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ಮಾಡಿಕೊಡಬಾರದು ಎಂದು ಹಕ್ಕೊತ್ತಾಯ ಮಾಡಿದರು.

ವರ್ಷದ ಹಿಂದೆಯೇ ಕಾಮಗಾರಿ ಆರಂಭಗೊಳ್ಳಬೇಕಿತ್ತು. ಆದರೆ, ದುರುದ್ದೇಶದಿಂದ ಗುತ್ತಿಗೆದಾರರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿರುವುದರಲ್ಲಿ ತಂದೆ (ಈಶ್ವರ ಖಂಡ್ರೆ) ಹಾಗೂ ಮಗನ (ಸಾಗರ ಖಂಡ್ರೆ) ಕೊಡುಗೆ ಶೂನ್ಯ. ಸತ್ಯ ಮರೆಮಾಚುವುದಕ್ಕಾಗಿ ಬೀದರ್ ನಗರದಾದ್ಯಂತ ಕಟೌಟ್ಗಳನ್ನು ಹಾಕಿಸಿದ್ದಾರೆ. ಈಶ್ವರ ಖಂಡ್ರೆ ಜಿಲ್ಲೆಯಲ್ಲಿ ಅರಾಜಕತೆಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.

ಮಾಜಿಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ ದೇವಸ್ಥಾನಕ್ಕೆ ಮತ್ತೆ ಮಾಡುವ ಅಗತ್ಯವಿಲ್ಲ. ಯಾಕೆ ಈ ಕೆಟ್ಟ ಮನಸ್ಥಿತಿ ಈಶ್ವರ ಹಾಗೂ ಸಾಗರ ಅವರಿಗೆ ಬಂದಿದೆಯೋ ಗೊತ್ತಿಲ್ಲ. ಮಾಡಲು ಬಹಳಷ್ಟು ಕೆಲಸವಿದೆ ಅದನ್ನು ಮಾಡಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಮುಖಂಡರಾದ ರಾಜಶೇಖರ್ ನಾಗಮೂರ್ತಿ, ನಾಗಭೂಷಣ್ ಕಮಠಾಣೆ, ಬಾಬುರಾವ್ ಕಾರಬಾರಿ, ರಾಕೇಶ್ ಪಾಟೀಲ್, ರಾಜೇಂದ್ರ ಪೂಜಾರಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ್ ಚೌಧರಿ ಹಾಜರಿದ್ದರು.

‘ಪಾಪನಾಶ ಲಿಂಗದ ಮೇಲೆ ಆಣೆ ಪ್ರಮಾಣ ಮಾಡಲಿ’

‘ಒಂದುವೇಳೆ ಅಭಿವೃದ್ಧಿ ಕಾಮಗಾರಿ ಸಾಗರ ಖಂಡ್ರೆಯವರ ಪ್ರಯತ್ನದಿಂದ ಆಗಿದ್ದರೆ ಪಾಪನಾಶ ಶಿವಲಿಂಗದ ಮೇಲೆ ಕೈಯಿಟ್ಟು ಆಣೆ ಪ್ರಮಾಣ ಮಾಡಬೇಕು. ನಾನು ಕೂಡ ಬರುವೆ. ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರ ಖಂಡ್ರೆ ಸುಳ್ಳು ಹೇಳಬಾರದು’ ಎಂದು ಭಗವಂತ ಖೂಬಾ ಸವಾಲೆಸೆದರು.

ಖಂಡ್ರೆ ರಾಜಕಾರಣ ಕೊನೆಯ ಹಂತದಲ್ಲಿದೆ. ದೀಪ ಆರುವಾಗ ಕೊನೆಯ ಗಳಿಗೆಯಲ್ಲಿ ಹೇಗೆ ಮಾಡುತ್ತದೋ ಅದೇ ರೀತಿ ಇವರ ವರ್ತನೆಯಾಗಿದೆ. ಇವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರೂ 2023ರ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರ ಬಿಟ್ಟು ಹೋಗದಂತೆ ಕಟ್ಟಿ ಹಾಕಿದ್ದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿಯಲ್ಲಿ ಬಿಜೆಪಿ ಶಾಸಕನನ್ನು ಗೆಲ್ಲಿಸಿಕೊಂಡು ಬರಲಿದ್ದು, ಇದು ನನ್ನ ಮತ್ತೊಂದು ಸವಾಲು ಎಂದು ಹೇಳಿದರು.

‘ಈಶ್ವರ ಅರಣ್ಯ ಸಚಿವರಾದ ನಂತರ ಪ್ರಾಣಿಗಳು ನಾಡೊಳಗೆ’

‘ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ಎಲ್ಲ ಪ್ರಾಣಿಗಳು ಕಾಡು ಬಿಟ್ಟು ನಾಡೊಳಗೆ ಬರುತ್ತಿವೆ. ರೈತರ ಮೇಲೆ ಅವುಗಳು ದಾಳಿ ನಡೆಸುತ್ತಿವೆ. ಹೊನ್ನಿಕೇರಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಹಿಡಿಯುತ್ತಿಲ್ಲ’ ಎಂದು ಮಾಜಿಶಾಸಕ ಪ್ರಕಾಶ ಖಂಡ್ರೆ ಕುಟುಕಿದರು.

ಈಶ್ವರ ಖಂಡ್ರೆ ನಾಲ್ಕು ಸಲ ಭಾಲ್ಕಿ ಶಾಸಕರಾಗಿ, ಎರಡು ಸಲ ಮಂತ್ರಿಯಾಗಿದ್ದಾರೆ. ಭಾಲ್ಕಿಯಲ್ಲಿ ನ್ಯಾಯವಾದಿಗಳ ಕಾಲೊನಿಗೆ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಇವರು ಸಚಿವರು, ಮಗ ಸಂಸದ, ಇವರದ್ದೇ ಸರ್ಕಾರವಿದ್ದರೂ ಏನೂ ಮಾಡುತ್ತಿಲ್ಲ ಎಂದು ಟೀಕಿಸಿದರು.

ನಾಳೆ ಪಾಪನಾಶಿನಿಯಲ್ಲಿ ಬಿಜೆಪಿಯಿಂದ ಪೂಜೆ

‘ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪುನಃ ಶಂಕುಸ್ಥಾಪನೆಯ ಅಗತ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಟಕ್ಕೆ ಬಿದ್ದು ಶಂಕುಸ್ಥಾಪನೆಗೆ ಮುಂದಾಗಿರುವುದು ಖಂಡನಾರ್ಹ. ನಾಚಿಕೆಗೇಡಿನ ವಿಷಯ. ಒಂದುವೇಳೆ ಪುನಃ ಶಂಕುಸ್ಥಾಪನೆ ಮಾಡಿದರೆ ಪಕ್ಷದಿಂದ ಧರಣಿ ನಡೆಸಲಾಗುವುದು. ಫೆ. 7ರಂದು ಬೆಳಿಗ್ಗೆ 10ಕ್ಕೆ ಪಕ್ಷದ ವತಿಯಿಂದ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ಬೇಗ ಪೂರ್ಣಗೊಳ್ಳಲೆಂದು ಪ್ರಾರ್ಥಿಸಲಾಗುವುದು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಶಂಕುಸ್ಥಾಪನೆಗೊಂಡ ಅನೇಕ ಯೋಜನೆಗಳಿಗೆ ಪುನಃ ಶಂಕುಸ್ಥಾಪನೆ ಮಾಡಿ, ತಮ್ಮದೆಂದು ಹೇಳಿಕೊಳ್ಳುವ ಚಾಳಿ ಕಾಂಗ್ರೆಸ್ನವರು ಎಲ್ಲೆಡೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಹೋದ ವರ್ಷ ಚಾಲನೆ ಕೊಡಿಸಿದ ₹2,025 ಕೋಟಿ ಮೊತ್ತದ ಯೋಜನೆಗಳಿಗೂ ಹಿಂದೆಯೇ ಚಾಲನೆ ಕೊಡಲಾಗಿತ್ತು. ಶಾಶ್ವತವಾಗಿ ಇವರದ್ದೇ ಸರ್ಕಾರ ಇರಲ್ಲ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ದೇಗುಲದ ಶಂಕುಸ್ಥಾಪನೆಯ ಕಟೌಟ್ಗಳನ್ನು ಎಲ್ಲೆಡೆ ಹಾಕಿಸಿದ್ದಾರೆ. ಅದರ ಶುಲ್ಕ ಕಟ್ಟಿದ್ದಾರೆಯೇ ಎಂಬುದನ್ನು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಬೇಕು. ಬಿಜೆಪಿ ಕಾರ್ಯಕರ್ತರು ಕಟೌಟ್ ಹಾಕಲು ಮುಂದಾದರೆ ಪ್ರಿಂಟಿಂಗ್ ಪ್ರೆಸ್ನವರನ್ನು ಹೆದರಿಸಿದ್ದಾರೆ. ಇದು ತುಘಲಕ್ ದರ್ಬಾರ್, ಜಿಲ್ಲಾಡಳಿತ ಕಾಂಗ್ರೆಸ್ ಕೈಗೊಂಬೆಯಾಗಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.