ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಸಗಿ ಶಾಲೆಗಳಿಗೂ ವೇತನಾನುದಾನ ನೀಡಿ’

ಅನುದಾನಿತ ಶಾಲೆಗಳ ಸೌಲಭ್ಯ: ಖಾಸಗಿ ಶಾಲೆಗಳಿಗೂ ವಿಸ್ತರಿಸಲು ಆಗ್ರಹ
Last Updated 11 ಡಿಸೆಂಬರ್ 2019, 2:00 IST
ಅಕ್ಷರ ಗಾತ್ರ

ಬೀದರ್: ಕಲ್ಯಾಣ ಕರ್ನಾಟಕದ ಅನುದಾನಿತ ಶಾಲೆಗಳಿಗೆ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಯಡಿ ಒದಗಿಸುತ್ತಿರುವ ಸೌಲಭ್ಯಗಳನ್ನು ಅನುದಾನ ರಹಿತ ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ನೇತೃತ್ವದಲ್ಲಿ ಶ್ರೀ ಸಾಯಿ ಆದರ್ಶ ಶಾಲೆ ಆವರಣದಿಂದ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ಗಾವಾನ್ ಚೌಕ್, ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‌ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರಿಗೆ ಸಲ್ಲಿಸಿದರು.

ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳು ಜಗತ್ತಿಗೆ ಅನೇಕ ಪ್ರತಿಭೆಗಳನ್ನು ನೀಡಿವೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆದರೆ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಅವುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿರುವುದು ಬೇಸರ ಉಂಟು ಮಾಡಿದೆ ಎಂದು ಹೇಳಿದರು.

1995 ರಿಂದ ಈಚೆಗೆ ಆರಂಭವಾದ ಎಲ್ಲ ಶಾಲೆಗಳ ಶಿಕ್ಷಕರಿಗೆ ವೇತನಾನುದಾನ ನೀಡಬೇಕು. ಅನುದಾನಿತ ಶಾಲೆಗಳ ಮಕ್ಕಳಿಗೆ ಒದಗಿಸಲಾಗುವ ಉಚಿತ ಪಠ್ಯಪುಸ್ತಕ, ನೋಟ್‌ಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ಸೈಕಲ್ ಮೊದಲಾದ ಸೌಲಭ್ಯಗಳನ್ನು ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳಿಗೂ ಕೊಡಬೇಕು.

ಆರ್‌ಟಿಇ ಶುಲ್ಕ ಮರು ಪಾವತಿ ಯೋಜನೆಯನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು. ಸರ್ಕಾರದ ಅನುಮತಿ ಪಡೆದು 1 ರಿಂದ 5ನೇ ತರಗತಿವರೆಗೆ ಶಾಲೆ ನಡೆಸುತ್ತಿರುವ ಆಡಳಿತ ಮಂಡಳಿಗೆ 6 ರಿಂದ 8ನೇ ತರಗತಿವರೆಗೆ ಅನುಮತಿ ನೀಡಬೇಕು. ಅನುದಾನ ರಹಿತ ಶಾಲೆ ಆಡಳಿತ ಮಂಡಳಿಯ ಅಧೀನದಲ್ಲಿರುವ ಕೃಷಿ ಭೂಮಿಯನ್ನು ಶುಲ್ಕ ರಹಿತವಾಗಿ ಕಂದಾಯ ನಿಯಮ 109 ಅಡಿಯಲ್ಲಿ ಶಾಲೆ ಹೆಸರಿಗೆ ವರ್ಗಾಯಿಸಲು ಪರವಾನಗಿ ಕೊಡಬೇಕು. ವೇತನಾನುದಾನ ನೀಡುವವರೆಗೆ ತಾತ್ಕಾಲಿಕವಾಗಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ನೀಡುತ್ತಿರುವಷ್ಟೇ ಗೌರವ ಧನ ಪಾವತಿಸಬೇಕು.

ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆ ಅನ್ವಯ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸಲು ನೀತಿ ರೂಪಿಸಬೇಕು. ಮೂಲಸೌಕರ್ಯ ಒದಗಿಸಬೇಕು. ಶಾಸಕ, ವಿಧಾನ ಪರಿಷತ್ ಸದಸ್ಯ, ಸಂಸದರ ನಿಧಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಬಳಸಲು ಅವಕಾಶ ನೀಡಬೇಕು. ಖಾಸಗಿ ಶಾಲೆಗಳಿಗೆ ವಿದ್ಯುತ್ ಎಲ್.ಟಿ 2 ಅಡಿ ರಿಯಾಯಿತಿ ದರದಲ್ಲಿ ಕಲ್ಪಿಸಬೇಕು. ಸ್ವಚ್ಛ ಭಾರತ ಹಾಗೂ ನಿರ್ಮಲ ಕರ್ನಾಟಕ ಯೋಜನೆಯಡಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೌಚಾಲಯ ಕಟ್ಟಿಸಬೇಕು. 10 ವರ್ಷದಿಂದ ನಿರಂತರ ನಡೆಯುತ್ತಿರುವ ಶಾಲೆಗಳ ನವೀಕರಣ ಶಾಶ್ವತವಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ತಡೋಳಾದ ರಾಜೇಶ್ವರ ಶಿವಾಚಾರ್ಯ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಮಹಾಲಿಂಗ ದೇವರು, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಅಧ್ಯಕ್ಷ ಬಸವರಾಜ ಭರಶೆಟ್ಟಿ, ಉಪಾಧ್ಯಕ್ಷ ಸಂದೀಪ ಶೆಟಕಾರ್, ಕಾರ್ಯದರ್ಶಿ ಗುರುನಾಥ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಸಲೀಂ ಪಾಶಾ, ಖಜಾಂಚಿ ರಾಜೇಂದ್ರ ಮಣಗಿರೆ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸುರೇಶ ಪಾಟೀಲ, ಬಸವರಾಜ ಶೆಟಕಾರ, ಲಕ್ಷ್ಮಿಕಾಂತ, ಅನೂಪ್ ಪಾಠಕ್, ಅನಿಲ, ಶಿವಕುಮಾರ ಪರಶೆಣೆ ಹಾಗೂ ಸೋಮನಾಥ ತಮಾಸಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT