ಶನಿವಾರ, ಆಗಸ್ಟ್ 13, 2022
23 °C
ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಲು ಒತ್ತಾಯ

ಬೀದರ್: ಸಿಪಿಐನಿಂದ ಪ್ರತಿಭಟನಾ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಮೆರಿಕ, ಇಸ್ರೆಲ್ ದೇಶಗಳ ಚಕ್ರವ್ಯೂಹದಿಂದ ಹೊರ ಬಂದು ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷವು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಧಾನಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಯುದ್ಧ ಬೇಡ, ಶಾಂತಿ, ಬೇಕು. ಸಾಮ್ರಾಜ್ಯ ಶಾಹಿ ವಿರೋಧಿ ನೀತಿ ಅನುಸರಿಸಬೇಕು. ಅಲಿಪ್ತ ಚಳವಳಿಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಿದ್ದಾರೆ. ಎಲ್‍ಐಸಿ, ಬಿಎಸ್‍ಎನ್‍ಎಲ್ ಖಾಸಗೀಕರಣಗೊಳಿಸಿದ್ದಾರೆ. ಎಪಿಎಂಸಿಗೆ ಎದುರಾಗಿ ಖಾಸಗಿ ಮಾರುಕಟ್ಟೆಗೆ ಅವಕಾಶ ಕೊಟ್ಟಿದ್ದಾರೆ. ಕೃಷಿಯನ್ನು ಕಾರ್ಪೋರೇಟ್ ಮಾಲೀಕರಿಗೆ ವಹಿಸಿದ್ದಾರೆ. ಎಚ್‍ಎಎಲ್ ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆಪಾದಿಸಿದರು.

ರಕ್ಷಣಾ ವಲಯದ ಕಾರ್ಖಾನೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದರಿಂದ ಮತ್ತು ಭಾರತೀಯ ಬಂಡವಾಳದಾರರಿಗೆ ರಕ್ಷಣಾ ವಲಯ ಒಪ್ಪಿಸಿರುವುರಿಂದ ತಾಂತ್ರಿಕ ಮಾಹಿತಿ, ಅಂಕಿ ಅಂಶಗಳು ಸೋರಿಕೆಯಾಗುತ್ತಿವೆ ಎಂದು ಆಪಾದಿಸಿದರು.

ದೇಶದ ಆಂತರಿಕ ನೀತಿಯು ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುತ್ತದೆ. ಕಾರಣ, ಸಾಮ್ರಾಜ್ಯಶಾಹಿ ಹಿಂಬಾಲಕರಾಗುವುದು ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಸದಸ್ಯರಾದ ಅಲಿ ಅಹಮ್ಮದ್ ಖಾನ್, ಪ್ರಭು ಹೂಚಕನಳ್ಳಿ, ತಾಲ್ಲೂಕು ಕಾರ್ಯದರ್ಶಿ ನಜೀರ್ ಅಹಮ್ಮದ್, ಮಾಣಿಕ ಖಾನಾಪುರಕರ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.