ಬುಧವಾರ, ಮೇ 25, 2022
31 °C
ಸಂಶೋಧನಾ ನಿರ್ದೇಶಕ ಡಾ.ಬಿ.ವಿ. ಶಿವಪ್ರಕಾಶ ಸಲಹೆ

ಆದಾಯ ಹೆಚ್ಚಿಸಿಕೊಳ್ಳಲು ಕುರಿ, ಮೇಕೆ ಸಾಕಿ: ಡಾ.ಬಿ.ವಿ.ಶಿವಪ್ರಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ರೈತರು ಕೃಷಿಯ ಜತೆ ಆಡು, ಕುರಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ ಹೇಳಿದರು.

ತಾಲ್ಲೂಕಿನ ನಂದಿನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ಆಡು ಮತ್ತು ಕುರಿ ವೈಜ್ಞಾನಿಕ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಡು ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಇರುವ ಕಾರಣ ರೈತರು ಕೃಷಿಯೊಂದಿಗೆ ಆಡು ಸಾಕಾಣಿಕೆ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಕೆಲವರು ಆಡಿನ ಹಾಲಿಗಾಗಿ ಸಾಕಿದರೆ, ಇನ್ನೂ ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ. ಸಾಕಾಣಿಕೆಯ ಮೊದಲು ಆಡಿನ ಹಾಲಿಗಾಗಿ ಸಾಕಾಣಿಕೆ ಮಾಡುತ್ತಿದ್ದರೆ ಯಾವ ಆಡಿನ ತಳಿ ಉತ್ತಮ. ಮಾಸಂಕ್ಕಾಗಿ ಆಡು ಸಾಕುತ್ತಿದ್ದರೆ ಅದಕ್ಕೆ ಯಾವ ತಳಿ ಬೇಕು ಎನ್ನುವುದರ ಬಗ್ಗೆ ತಜ್ಞರಿಂದ ಚೆನ್ನಾಗಿ ತಿಳಿದುಕೊಳ್ಳಬೇಕು’ ಎಂದರು.

‘ಆಡಿನ ಹಾಲು, ಗೊಬ್ಬರಕ್ಕೂ ಬೇಡಿಕೆ ಇದೆ. ಆಡಿನ ಹಾಲು ತಾಯಿಯ ಹಾಲಿನಷ್ಟೇ ಪೌಷ್ಟಿಕವಾಗಿದೆ. ಒಂದು ಸಮತೋಲನ ಆಹಾರದ ಮೂಲವಾಗಿದೆ’ ಎಂದು ತಿಳಿಸಿದರು.

ತರಬೇತಿ ಸಂಯೋಜಕ ಡಾ. ಪ್ರಕಾಶಕುಮಾರ ರಾಠೋಡ್‌ ಮಾತನಾಡಿ, ‘ಕಟ್ಟಿತೂಗಾಂವ ಸಮೀಪದ ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಲ್ಲಿರುವ ವಿವಿಧ ಮೇವಿನ ಬೆಳೆಗಳ ವೀಕ್ಷಣೆ ಹಾಗೂ ಆಡಿನ ಫಾರ್ಮ್‌ಗಳಿಗೆ ಕ್ಷೇತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಆಡು ಮತ್ತು ಕುರಿಗಳ ಆಯ್ಕೆ, ಕಡಿಮೆ ಖರ್ಚಿನಲ್ಲಿ ಹಸಿ ಮೇವು, ಪಶು ಆಹಾರ ತಯಾರಿಸುವುದು, ಆಡು, ಕುರಿಗಳ ಆರೋಗ್ಯ ರಕ್ಷಣೆ, ಪ್ರಸೂತಿ ಹಾಗೂ ಸಂತಾನೋತ್ಪತ್ತಿಯ ಸಮಸ್ಯೆಗಳು, ಕೊಟ್ಟಿಗೆ ನಿರ್ವಹಣೆ ಹಾಗೂ ಮಾರುಕಟ್ಟೆಯ ಮಾಹಿತಿ ನೀಡಲಾಯಿತು.

ತರಬೇತಿ ಕಾರ್ಯಕ್ರಮದಲ್ಲಿ 55 ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದಾರೆ. ಮಹಾವಿದ್ಯಾಲಯದ ವಿಷಯ ತಜ್ಞರು ರೈತರಿಗೆ ಆಡು ಮತ್ತು ಕುರಿ ಸಾಕಾಣಿಕೆಯ ವೈಜ್ಞಾನಿಕ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು