ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್ ಭಾಗ್ಯ ಕಲ್ಪಿಸಿದ ಶಿಕ್ಷಕ, ಪಾಲಕರ ಮೆಚ್ಚುಗೆ

Last Updated 5 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಔರಾದ್: ಮೂಲ ಸೌಕರ್ಯ ಕೊರತೆ ನಡುವೆಯೂ ತಾಲ್ಲೂಕಿನ ಗಡಿ ಭಾಗದ ಸರ್ಕಾರಿ ಶಾಲೆಯೊಂದರ ಮಕ್ಕಳು ಸ್ಮಾರ್ಟ್ ಕ್ಲಾಸ್ ಸೌಲಭ್ಯ ಪಡೆಯುತ್ತಿದ್ದಾರೆ.

ವಿವಿಧ ಮೂಲ ಸೌಕರ್ಯ ಹಾಗೂ ಸ್ಮಾರ್ಟ್‌ಫೋನ್‌ ಕಾಣದ ಬೋರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಈಗ ದೊಡ್ಡ ಪರದೆ ಮೇಲೆ ಪಾಠ ಕೇಳುವ ಸೌಭಾಗ್ಯ ದೊರೆತು ಇಡೀ ಊರು ಸಂಭ್ರಮಿಸುತ್ತಿದೆ.

ಈ ಸಂಭ್ರಮಕ್ಕೆ ಬೇರೆ ಯಾರೂ ಕಾರಣರಲ್ಲ. ಒಬ್ಬ ಸಾಮಾನ್ಯ ಶಿಕ್ಷಕ ಎಂಬುದು ವಿಶೇಷ. ಈ ಶಾಲೆ ಶಿಕ್ಷಕ ಮುತ್ತಣ್ಣ ರಂಡಾಳೆ ಅವರು ತಮ್ಮ ಸ್ವಂತ ಖರ್ಚಿನಿಂದ ಸ್ಮಾರ್ಟ್‌ಕ್ಲಾಸ್‌ ತಯಾರಿಸಿದ್ದಾರೆ. ₹60 ಸಾವಿರ ಮೌಲ್ಯದ ಪ್ರೊಜೆಕ್ಟರ್ ಹಾಗೂ ಸ್ಕ್ರೀನ್ (ಪರದೆ) ತಂದು ಶಾಲಾ ಕೊಠಡಿಯಲ್ಲಿ ಅಳವಡಿಸಿದ್ದಾರೆ.

ಕಳೆದ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿ ದಿನದಂದು ಶಾಲಾ ಮಕ್ಕಳಿಂದಲೇ ಈ ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ ಮಾಡಿಸಲಾಗಿದೆ. ಶಾಲೆಯಲ್ಲಿ ಅಳವಡಿಸಿದ ಈ ನೂತನ ವ್ಯವಸ್ಥೆಯಿಂದ ಮಕ್ಕಳಲ್ಲಿ ಉತ್ಸಾಹ ಜಾಸ್ತಿಯಾಗಿದೆ.

ಪರದೆ ಮೇಲೆ ಪಾಠ ಕೇಳುವ ಹೊಸ ಅನುಭವ ಹೆಚ್ಚು ಕಲಿಕೆಗೆ ಪ್ರೇರಣೆಯಾಗುತ್ತಿದೆ. ತಮ್ಮ ಮಕ್ಕಳ ಮೊಗದಲ್ಲಿ ಕಂಡು ಬಂದ ಉತ್ಸಾಹದಿಂದ ಪಾಲಕರು ಶಿಕ್ಷಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಲಾಕ್‍ಡೌನ್‍ನಿಂದ ನಮ್ಮ ಶಾಲೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿರುವುದು ಸ್ವಲ್ಪ ನೋವು ತಂದಿದೆ. ಆನ್‍ಲೈನ್ ಪಾಠ ಮಾಡಲು ಶಿಕ್ಷಕರು ಪ್ಲಾನ್ ಮಾಡಿದ್ದೆವು. ಆದರೆ ಪಾಲಕರ ಬಳಿ ಸ್ಮಾರ್ಟ್‌ಫೊನ್‌ ಇರಲಿಲ್ಲ. ಈ ಕಾರಣ ಕಲಿಕೆಯಲ್ಲಿ ಆಗಿರುವ ಹಿನ್ನಡೆ ತಪ್ಪಿಸಲು ಈಗ ಸ್ಮಾರ್ಟ್‌ಕ್ಲಾಸ್ ಮೊರೆ ಹೋಗಿದ್ದೇವೆ. ನಮ್ಮ ಸ್ವಂತ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟೋ ಹಣ ಸುರಿಯುತ್ತೇವೆ. ನಮಗೆ ಅನ್ನ ಕೊಡುವ ಶಾಲೆ ಮಕ್ಕಳ ಕಲಿಕೆಗಾಗಿ ಒಂದಿಷ್ಟು ಖರ್ಚು ಮಾಡಲು ನನಗೆ ಸಂತೋಷ ಎನಿಸುತ್ತಿದೆ’ ಎಂದು ಶಿಕ್ಷಕ ಮುತ್ತಣ್ಣ ರಂಡಾಳೆ ತಿಳಿಸಿದ್ದಾರೆ.

‘ನಮ್ಮದು 1ರಿಂದ 8ನೇ ತರಗತಿ ವರೆಗಿನ ಹಿರಿಯ ಪ್ರಾಥಮಿಕ ಶಾಲೆ. ಮಕ್ಕಳ ಸಂಖ್ಯೆ 120 ಇದೆ. ಆದರೆ ಮುಖ್ಯ ಶಿಕ್ಷಕ ಸೇರಿ ನಾಲ್ವರು ಶಿಕ್ಷರಿದ್ದಾರೆ. ಇನ್ನು ಇಬ್ಬರು ಶಿಕ್ಷಕ ಕೊರತೆ ಇದೆ. ಈ ಕೊರತೆ ನೀಗಿಸಲು ಸ್ಮಾರ್ಟ್‌ಕ್ಲಾಸ್ ಬಳಸಿಕೊಳ್ಳುತ್ತಿದ್ದೇವೆ. ಶಿಕ್ಷಕ ಮುತ್ತಣ್ಣ ಅವರು ಮಕ್ಕಳಿಗೆ ನೂತನ ಕಲಿಕೆ ಸೌಲಭ್ಯ ಕಲ್ಪಿಸಿರುವುದು ನಮಗೂ ಹೆಮ್ಮೆ ಎನಿಸುತ್ತಿದೆ’ ಎಂದು ಮುಖ್ಯ ಶಿಕ್ಷಕ ಪ್ರಕಾಶ ರಾಜೋಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT