ಮಂಗಳವಾರ, ಮೇ 18, 2021
22 °C
ಬೀದರ್‌ ಕೋಟೆಯಲ್ಲಿ ಕ್ಯಾಂಟೀನ್, ಶುದ್ಧ ಕುಡಿಯುವ ನೀರಿನ ಘಟಕ; ಬಿದರಿ ಕಲಾಕೃತಿಗಳ ಮಾರಾಟಕ್ಕೆ ವ್ಯವಸ್ಥೆ

ಬೀದರ್‌: ಪ್ರವಾಸಿಗರಿಗೆ ಹೊಸ ವರ್ಷದಲ್ಲಿ ಹಲವು ಸೌಲಭ್ಯ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಹೊಸ ವರ್ಷದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಬಹಮನಿ ಸುಲ್ತಾನರ ಕಾಲದ ಕೋಟೆಯಲ್ಲಿನ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ನಿರಂತರವಾಗಿ ಸಾಗಿದ್ದು, ಮಾರ್ಚ್‌ ವೇಳೆಗೆ ಪ್ರವಾಸಿಗರು ಕುಟುಂಬ ಸಹಿತ ಭೇಟಿ ನೀಡುವಂತಹ ವಾತಾವರಣ ಸೃಷ್ಟಿಸುತ್ತಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯ ನೆರವಿನೊಂದಿಗೆ ವಸ್ತು ಸಂಗ್ರಹಾಲಯದ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಉತ್ಖನನ ಸಂದರ್ಭದಲ್ಲಿ ದೊರೆತ ಮೂರ್ತಿಗಳು, ಶಾಸನಗಳು ಹಾಗೂ ಕಲಾಕೃತಿಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡುತ್ತಿದೆ.

ವಸ್ತು ಸಂಗ್ರಹಾಲಯದಲ್ಲಿ ಕಿಯೊಸ್ಕ್‌ ಮಾದರಿಯಲ್ಲಿ ಬೀದರ್‌ನಲ್ಲಿರುವ ಪ್ರಮುಖ ಸ್ಮಾರಕಗಳ ಮಾಹಿತಿ ಒದಗಿಸುವ ಆಡಿಯೊ ವಿಶ್ಯುವಲ್‌ ಅಳವಡಿಸಲು ನಿರ್ಧರಿಸಲಾಗಿದೆ. ಬೀದರ್‌ನಲ್ಲಿರುವ ಪ್ರಮುಖ ಸ್ಮಾರಕಗಳ ಚಿತ್ರ ಅಳವಡಿಸಿ, ಅವುಗಳ ಸ್ಪಷ್ಟ ಮಾಹಿತಿ ದೊರೆಯುವಂತೆ ಮಾಡಲಾಗುತ್ತಿದೆ.

ಬೀದರ್‌ನಲ್ಲಿ ಬಿದರಿ ಕಲಾಕೃತಿಗಳ ಒಂದೆರಡು ಅಂಗಡಿಗಳು ಮಾತ್ರ ಇವೆ. ಪ್ರವಾಸಿಗರಿಗೆ ಸ್ಥಳದಲ್ಲೇ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ವಿಶಿಷ್ಟ ಬಿದರಿ ಕಲಾಕೃತಿಗಳ ಮಾರಾಟಕ್ಕೂ ಒಂದು ಮಳಿಗೆಯನ್ನು ತೆರೆಯಲು ಎಎಸ್‌ಐ ಮುಂದಾಗಿದೆ. ಇದರಿಂದಾಗಿ ಬಿದರಿ ಕುಶಲಕರ್ಮಿಗಳಿಗೂ ಉತ್ತೇಜನ ದೊರೆಯಲಿದೆ.

250 ಎಕರೆ ವ್ಯಾಪ್ತಿಯ ಕೋಟೆಯೊಳಗೆ ದಿನವಿಡೀ ಸುತ್ತಾಡಿದರೂ ಉಪಾಹಾರ ಇರಲಿ, ಕುಡಿಯುವ ನೀರು ಸಹ ದೊರೆಯುತ್ತಿರಲಿಲ್ಲ. ಹೀಗಾಗಿ ಎಎಸ್‌ಐ ಕಚೇರಿ ಪಕ್ಕದಲ್ಲಿಯೇ ಶುದ್ಧ ನೀರಿನ ಘಟಕ ನಿರ್ಮಿಸುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮೊದಲಿದ್ದ ಕ್ಯಾಂಟೀನ್‌ ಕಟ್ಟಡವನ್ನು ತೆರವುಗೊಳಿಸಿ ಹೊಸ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ಈ ಕ್ಯಾಂಟೀನ್‌ ಕಾರ್ಯಾರಂಭ ಮಾಡಿದರೆ ಕೋಟೆ ಆವರಣದೊಳಗೆ ಪ್ರವಾಸಿಗರಿಗೆ ಊಟ, ಉಪಾಹಾರ ದೊರೆಯಲಿದೆ. ಕ್ಯಾಂಟೀನ್‌ ಸಮೀಪದಲ್ಲಿ ಎರಡು ಶೌಚಾಲಯಗಳನ್ನೂ ನಿರ್ಮಿಸಲಾಗುತ್ತಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ.

ಕೋಟೆಯ ಶಹಾಗಂಜ್‌ ದರ್ವಾಜಾದ ಲೋಹದ ಬಾಗಿಲನ್ನು ದುರಸ್ತಿ ಮಾಡಲಾಗಿದೆ. ಬಾಗಿಲು ಮುಚ್ಚುವ ಹಾಗೂ ತೆರೆಯುವ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದಲ್ಲಿ ಶಸ್ತ್ರಧಾರಿ ಕಾವಲುಗಾರರನ್ನು ನಿಯೋಜಿಸಲಾಗಿದೆ.

ಕೋಟೆಯ ಮುಂಭಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ಈಗಾಗಲೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಹೈಮಾಸ್ಟ್‌ದೀಪ ಅಳವಡಿಸಲಾಗಿದೆ. ಹಜಾರ್‌ ಕೊಠಡಿ ಮುಂಭಾಗದಲ್ಲಿ ಉದ್ಯಾನ ನಿರ್ಮಿಸಿದ ನಂತರ ಫೋಕಸ್‌ ಲೈಟ್‌ಗಳನ್ನೂ ಅಳವಡಿಸಲಾಗಿದೆ.

‘ರಾಜ್ಯ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಮೊದಲಿದ್ದ ಕ್ಯಾಂಟೀನ್‌ ಕಟ್ಟಡವನ್ನು ತೆರವುಗೊಳಿಸಿ ಪುರಾತನ ಕಟ್ಟಡದ ಮಾದರಿಯಲ್ಲಿ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ಬೀದರ್‌ ಕೋಟೆಯೊಳಗೆ ಪ್ರವೇಶಿಸುವ ಪ್ರವಾಸಿಗರು ಇನ್ನು ದಿನವಿಡೀ ಸಂತಸದಿಂದ ಕಳೆಯಬಹುದಾಗಿದೆ’ ಎಂದು ಎಎಸ್‍ಐ ಬೀದರ್ ಉಪ ವಲಯದ ಸಹಾಯಕ ಸಂರಕ್ಷಣಾಧಿಕಾರಿ ಕಿರಣ್ ಬಾಬು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.