ಸೋಮವಾರ, ಜೂನ್ 14, 2021
26 °C
ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ ಪೊಲೀಸರು

ಇಂದಿನಿಂದ ಕಟ್ಟುನಿಟ್ಟಿನ ಲಾಕ್‍ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೊರೊನಾ ಸೋಂಕು ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ಮೇ 10ರಿಂದ 24ರ ವರೆಗೆ ಘೋಷಿಸಿರುವ ಲಾಕ್‍ಡೌನ್ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾ ದಂಡಾಧಿಕಾರಿ ರಾಮಚಂದ್ರನ್ ಆರ್ ಅವರು ಈಗಾಗಲೇ ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ನಿಯಮ ಉಲ್ಲಂಘಿಸಿ ರಸ್ತೆಗಿಳಿಸಿದರೆ ವಾಹನಗಳನ್ನೂ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.

ಅನಗತ್ಯ ಸಂಚರಿಸುವಂತಿಲ್ಲ: ‘ಲಾಕ್‍ಡೌನ್ ಅವಧಿಯಲ್ಲಿ ವಿಶೇಷ ರಿಯಾಯಿತಿ ನೀಡಲಾದ ಕರ್ತವ್ಯಗಳನ್ನು ಹೊರತುಪಡಿಸಿ ಬೇರಾವ ಕಾರಣಕ್ಕೂ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸುವುದು, ಮನೆಯಿಂದ ಹೊರಗೆ ಬರುವುದು ಮಾಡುವಂತಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ತಿಳಿಸಿದ್ದಾರೆ.

‘ಅಂತರರಾಜ್ಯ, ಅಂತರ ಜಿಲ್ಲಾ ಗಡಿ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅಂತರರಾಜ್ಯ ಅಥವಾ ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶ ಇಲ್ಲ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ’ ಎಂದು ಹೇಳಿದ್ದಾರೆ.

‘ಪ್ರತಿದಿನ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ಅಂಗಡಿಗಳು ತೆರೆದಿರಲಿವೆ. ಅಗತ್ಯ ವಸ್ತುಗಳ ಖರೀದಿಗೆ ಹೋಗುವವರು ಕಾಲ್ನಡಿಗೆಯಲ್ಲೇ ಹೋಗಬೇಕು. ವಾಹನದಲ್ಲಿ ತೆರಳಿದರೆ ವಾಹನ ವಶಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಅಗತ್ಯ ಸೇವೆ ಒದಗಿಸುವ ಅಧಿಕಾರಿ, ಸಿಬ್ಬಂದಿ(ಕಂದಾಯ ಇಲಾಖೆ, ದೂರ ಸಂಪರ್ಕ ನೌಕರರು,
ಕೇಬಲ್ ಆಪರೇಟರ್, ಮೆಡಿಕಲ್, ಕೋರಿಯರ್, ಹೊಟೇಲ್ ಮಾಲೀಕರು, ಸಿಬ್ಬಂದಿ)ಗೆ ಯಾವುದೇ ವಿಶೇಷ ಗುರುತಿನ ಚೀಟಿ ನೀಡಲಾಗಿಲ್ಲ.
ಆದರೆ, ಅವರು ಮೇಲಧಿಕಾರಿಗಳು ಹಾಗೂ ಮಾಲೀಕರು ನೀಡುವ ಗುರುತಿನ ಚೀಟಿ ಬಳಸಬಹುದು’ ಎಂದು ಹೇಳಿದ್ದಾರೆ.

‘ಖಾಸಗಿ ಔಷಧ ಕಾರ್ಖಾನೆಗಳನ್ನು ನಡೆಸಲು ಅನುಮತಿ ಇದ್ದು, ಕಾರ್ಖಾನೆಯವರು ತಮ್ಮ ಕಾರ್ಮಿಕರಿಗೆ ವಿಶೇಷ ಬಸ್ ಅಥವಾ ವಾಹನಗಳ ವ್ಯವಸ್ಥೆ ಮಾಡಿ, ಅದರಲ್ಲೇ ಸಂಚರಿಸಬೇಕು. ಆಟೊ, ಟ್ಯಾಕ್ಸಿಗಳಿಗೆ ಆಸ್ಪತ್ರೆಗೆ ರೋಗಿಗಳು ಹಾಗೂ ಜನರಿಗೆ ಒಯ್ಯಲು ಮಾತ್ರ ಅನುಮತಿ ಕೊಡಲಾಗುವುದು’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.