ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಹೆಚ್ಚಿದ ಬಿಸಿಲಿನ ತಾಪ: ಬಸವಳಿದ‌ ಜನ

ವೀರೇಶ್‌ ಎನ್.ಮಠಪತಿ
Published 8 ಏಪ್ರಿಲ್ 2024, 5:57 IST
Last Updated 8 ಏಪ್ರಿಲ್ 2024, 5:57 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣ, ತಾಲ್ಲೂಕಿನೆಲ್ಲೆಡೆ ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಗಾಳಿಯ ತಂಪು ಮಾಯವಾಗುತ್ತಿದೆ.
ಮುಂಜಾನೆ 9 ಗಂಟೆ ಹೊತ್ತಿಗೆ ಬೆಂಕಿಯಂತೆ ಬಿಸಿಲು ಹೆಚ್ಚಾಗುತ್ತಿದೆ. ಒಂದು ವಾರದಿಂದ ನಡು ಮಧ್ಯಾಹ್ನ ಅಕ್ಷರಶಃ ನಾಗರಿಕರು ಮನೆಯಿಂದ ಹೊರಗೆ ಬರಲಾಗದಂತಾಗಿದೆ.

ಈಗಾಗಲೇ ತಾಲ್ಲೂಕಿನಾದ್ಯಂತ ಉಷ್ಣಾಂಶ ಗರಿಷ್ಠ 38 ಹಾಗೂ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ, ಮಧ್ಯಾಹ್ನ 1 ಗಂಟೆ ಆಗುವಷ್ಟರಲ್ಲಿ ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕರು ಮಳಿಗೆ ಮುಚ್ಚಿಕೊಂಡು ಮನೆಗೆ ಹೋಗುತ್ತಿದ್ದಾರೆ. ಸಂಜೆ 6 ಗಂಟೆ ನಂತರವೇ ಮತ್ತೆ ವ್ಯವಹಾರ ಆರಂಭವಾಗುತ್ತಿದೆ. ಹೀಗಾಗಿ ಮಾರುಕಟ್ಟೆ ರಸ್ತೆ ಜನಜಂಗುಳಿ ಕಾಣದೆ ಭಣಗುಡುತ್ತಿದೆ.

‘ರಾತ್ರಿ ಕಳೆಯುವುದಂತೂ ಕಷ್ಟವಾಗುತ್ತಿದೆ. ಅತಿಯಾದ ಉಷ್ಣ ಬಾಧೆ ಜನರನ್ನು ಹೈರಾಣಾಗಿಸಿದೆ. ಗಾಳಿ ಬರಲಿ ಎಂದು ಕಿಟಕಿ ತೆರೆದರೆ ಸೊಳ್ಳೆ ಕಾಟ. ಕಿಟಕಿ ಹಾಕಿದರೆ ಅತಿಯಾದ ತಾಪ. ನಿದ್ರೆ ಬಾರದೇ ಜಾಗರಣೆ ಮಾಡುವಂತಾಗಿದೆ. ಫ್ಯಾನ್ ಕೂಡ ಬಿಸಿಗಾಳಿ ಬೀಸುತ್ತದೆ. ಕಿತ್ತು ಬರುವ ಬೆವರು ರಾತ್ರಿ ಬೇಡವಾಗಿಸಿದೆ, ಮಕ್ಕಳು, ಹಿರಿಯರಿಗೆ ಬಿಸಿಲ ತಾಪದಿಂದ ತೀವ್ರ ತೊಂದರೆಯಾಗಿದೆ’ ಎಂದು ಪಟ್ಟಣದ ನಿವಾಸಿ ವಿಜಯಕುಮಾರ್ ಹೇಳುತ್ತಾರೆ.

ಬಿಸಿಲಿನಿಂದ ದೇಹ ಬಳಲುವುದಲ್ಲದೇ ಬಾಯಾರಿಕೆಯಿಂದ ಜನರು ಕಂಗೆಟ್ಟಿದ್ದು, ದಾಹ ನೀಗಿಸಿಕೊಳ್ಳಲು ತಂಪುಪಾನೀಯ, ಎಳನೀರು, ಜ್ಯೂಸ್, ಕಲ್ಲಂಗಡಿ ಸೇರಿದಂತೆ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಮಜ್ಜಿಗೆ, ಲಸ್ಸಿ ಮಾರಾಟವೂ ಜೋರಾಗಿದೆ.

ಬಿಸಿಲ ತಾಪದಿಂದ ರಕ್ಷಿಸಿಕೊಳ್ಳುವ ಉಪಾಯಗಳು: ಸಾಧ್ಯವಾದಷ್ಟು ಮನೆ ಒಳಾಂಗಣದಲ್ಲೇ ಇರಬೇಕು, ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅವಶ್ಯಕ, ದೇಹಕ್ಕೆ ಆಯಾಸವಾಗದಂತೆ ದ್ರವರೂಪದ ಪಾನೀಯ, ಎಳನೀರು, ಗಂಜಿ ಸೇವನೆ ಉತ್ತಮವಾಗಿದೆ.
ಕಾರ್ಬೋನೇಟೆಡ್‌ ಪಾನೀಯದಿಂದ ದೂರ ಇರುವುದು ಒಳ್ಳೆಯದು, ಹೊರಗಡೆ ಹೋಗುವುದು ಅನಿವಾರ್ಯವಾದರೆ ಛತ್ರಿ, ತಂಪು ಕನ್ನಡಕ, ಟೋಪಿ ಧರಿಸಿ, ಮೈಗೆ ತೆಳುವಾದ ಹತ್ತಿ ಬಟ್ಟೆ ಧರಿಸಬೇಕು, ಮಧ್ಯಾಹ್ನ 12ರ ಬಳಿಕ ಬಿಸಿಲಿನಲ್ಲಿ ಅಡ್ಡಾಡಬಾರದು, ಮುಖ್ಯವಾಗಿ ಚರ್ಮದ ಆರೋಗ್ಯದ ಕಡೆ ಹೆಚ್ಚಿನ ಗಮನವಿರಬೇಕು ಹಾಗೂ ಬಿಸಿಲ ತಾಪಕ್ಕೆ ಜಾಸ್ತಿ ಬೆವರು ದೆಹದಿಂದ ಹೊರಗೆ ಹೋಗುವುದರಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುವ ಅಪಾಯ ಇರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಬೇಕು. ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ದಿನದಲ್ಲಿ ಕನಿಷ್ಠ 2.5 ಲೀಟರ್‌ಗಳಷ್ಟು ಹೆಚ್ಚು ನೀರಿನ ಅಗತ್ಯ ಇರುತ್ತದೆ. ಕುದಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕುದಿಸಿ ಆರಿಸಿದ ನೀರಿನಿಂದ ತಯಾರಿಸಿದ ಪಾನೀಯಗಳು, ಮಜ್ಜಿಗೆ, ಗಂಜಿಯನ್ನೂ ಹೆಚ್ಚು ಸೇವಿಸಬೇಕು’ ಎಂದು ನಿವೃತ್ತ ವೈದ್ಯ ಡಾ.ಬಾಬುರಾವ್‌ ಮರ್ಕಲ್‌ ತಿಳಿಸಿದ್ದಾರೆ.

‘ಸ್ಥಳೀಯ ಪುರಸಭೆಯಿಂದ ಮುಖ್ಯ ಮಾರುಕಟ್ಟೆ ಜನನಿಬಿಡ ಪ್ರದೇಶಗಳಲ್ಲಿ ನಾಗರಿಕರಿಗೆ ಕುಡಿಯಲು ಮಡಿಕೆಗಳಲ್ಲಿ ನೀರು ಪೂರೈಸುವ ಕೆಲಸ ಆರಂಭಿಸಿದಲ್ಲಿ ಅನುಕೂಲವಾಗುತ್ತದೆ’ ಎಂದು ಪಟ್ಟಣದ ಚಂದ್ರಕಾಂತ್, ಪ್ರಭು, ಶಿವಕುಮಾರ್‌ ಇತರರು ಆಗ್ರಹಿಸಿದ್ದಾರೆ.

ಬಿಸಿಲಿನಿಂದ ಚರ್ಮ ಕಪ್ಪಾಗುವುದು ತುರಿಕೆ ಬರುವುದು ಆಯಾಸ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಮುಂಜಾಗ್ರತೆಗೆ ವೈದ್ಯರ ಸಲಹೆ ಪಡೆಯಬೇಕುʼ
ಡಾ.ವಿಜಯಕುಮಾರ್‌ ಹಿರಾಸ್ಕರ್ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT