ಸೋಮವಾರ, ಜನವರಿ 25, 2021
25 °C
ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೂಮಿ ಪೂಜೆ ಇಂದು

ಬೀದರ್: ಶರಣರ ‘ಕಲ್ಯಾಣ’ಕ್ಕೆ ಗತವೈಭವ ದೊರಕಿಸುವ ಯತ್ನ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ನಾಡಿನ ಬಸವಭಕ್ತರು ಎದುರು ನೋಡುತ್ತಿದ್ದ ಐತಿಹಾಸಿಕ ಕ್ಷಣ ಬಂದೊದಗಿದ್ದು, ಇಲ್ಲಿ ಜನವರಿ 6ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನೂತನ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.

ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಕಲ ಶರಣರನ್ನು ಒಗ್ಗೂಡಿಸಿ ನಾಡಿನ ಆಗುಹೋಗುಗಳ ಬಗ್ಗೆ ಅಲ್ಲಿ ಚರ್ಚಿಸುತ್ತಿದ್ದರು. ಆದ್ದರಿಂದ ಅದನ್ನು ಜಗತ್ತಿನ ಪ್ರಥಮ ಸಂಸತ್ತು ಎಂದು ಕರೆಯಲಾಗುತ್ತದೆ. ಆದರೆ, ಅದರ ಕುರುಹುಗಳು ಉಳಿದಿಲ್ಲ. ಆದ್ದರಿಂದ ಸರ್ಕಾರ ಅದೇ ಮಾದರಿಯಲ್ಲಿ ಹೊಸ ಮಂಟಪ ನಿರ್ಮಿಸುತ್ತಿದೆ. ಇಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೆ 15 ವರ್ಷಗಳ ಹಿಂದೆ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮೂಲಕ ಅನುಭವ ಮಂಟಪದ ನಿರ್ಮಾಣ ಮಾಡಲಾಗುತ್ತಿದ್ದು ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರು ಅದರ ಅಡಿಗಲ್ಲು ಇಡುತ್ತಿದ್ದಾರೆ.

ಮಂಡಳಿಯ ವಿಶೇಷಾಧಿಕಾರಿ ಆಗಿದ್ದ ಡಾ.ಎಸ್.ಎಂ.ಜಾಮದಾರ ಅವರು ಪ್ರಥಮ ಹಂತದಲ್ಲಿ 19 ಸ್ಮಾರಕಗಳ ವಿಕಾಸ ಕಾರ್ಯ ಕೈಗೆತ್ತಿಕೊಂಡಿದ್ದರು. ಅಂಬಿಗರ ಚೌಡಯ್ಯನವರ ಗುಹೆ, ನುಲಿ ಚಂದಯ್ಯನವರ ಗುಹೆ, ಅಕ್ಕನಾಗಮ್ಮನ ಗುಹೆ, ಹರಳಯ್ಯನವರ ಗುಹೆ, ಅಲ್ಲಮಪ್ರಭುದೇವರ ಗದ್ದುಗೆ ಮಠ, ಮಡಿವಾಳ ಮಾಚಿದೇವರ ಹೊಂಡ, ಉರಿಲಿಂಗ ಪೆದ್ದಿ ಮಠ, ದೇವರ ದಾಸಿಮಯ್ಯನವರ ಮಠ ಒಳಗೊಂಡು ಎಲ್ಲ ಸ್ಮಾರಕಗಳ ಜೀರ್ಣೋದ್ಧಾರ ನಡೆದಿದ್ದು ಅತ್ಯಂತ ಮಹತ್ವದ್ದಾಗಿರುವ ಅನುಭವ ಮಂಟಪದ ಕಾಮಗಾರಿಗೆ ಈಗ ಶುಕ್ರದೆಸೆ ಬಂದಿದೆ.

ತ್ರಿಪುರಾಂತ ಕೆರೆ ದಂಡೆಯಲ್ಲಿ ಭಾಲ್ಕಿ ಚನ್ನಬಸವ ಪಟ್ಟದ್ದೇವರು, ಮಾಜಿ ಸಚಿವ ಭೀಮಣ್ಣ ಖಂಡ್ರೆ, ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ರಾಷ್ಟ್ರಪತಿ ಬಿ.ಡಿ.ಜತ್ತಿ, ಬಾಬಾಸಾಹೇಬ್ ವಾರದ್, ಡಾ.ಜಯದೇವಿತಾಯಿ ಲಿಗಾಡೆ ಅವರ ಪ್ರಯತ್ನದಿಂದ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಅನುಭವ ಮಂಟಪದ ಆವರಣದಲ್ಲಿಯೇ ಹೊಸ ಮಂಟಪ ಕಟ್ಟಲಾಗುತ್ತಿದೆ. ಹಳೆಯ ಮಂಟಪದ 3 ಎಕರೆ ಜಮೀನು ಹಾಗೂ 17 ಎಕರೆ ಸರ್ಕಾರಿ ಜಾಗ ಒಳಗೊಂಡು 72 ಎಕರೆಯಲ್ಲಿ ಮಂಟಪ ನಿರ್ಮಾಣಗೊಳ್ಳಲಿದೆ. ಇದುವರೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ವಾದರೂ ಸಂಬಂಧಿತರು ಜಾಗ ನೀಡುವ ಬಗ್ಗೆ ಕರಾರು ಪತ್ರ ಒದಗಿಸಿದ್ದಾರೆ.

ಸಚಿವ ಪ್ರಭು ಚವಾಣ್ ಪರಿಶೀಲನೆ

ಬಸವಕಲ್ಯಾಣ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನಡೆಸಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು ಇದಕ್ಕಾಗಿ ಸಿದ್ಧಪಡಿಸಿರುವ ಬೃಹತ್ ಮಂಟಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಂಗಳವಾರ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಡಾ.ರಾಮಚಂದ್ರನ್ ಆರ್. ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಗುರುಬಸವ ಪಟ್ಟದ್ದೇವರು, ಬಸವರಾಜ ಪಾಟೀಲ ಸೇಡಂ, ಗೊ.ರು.ಚನ್ನಬಸಪ್ಪ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಕೃಷ್ಣಾ ಗೋಣೆ, ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ ಇದ್ದರು.

‘ಮಠಾಧೀಶರಿಗೆ ಆಹ್ವಾನವಿಲ್ಲ’

‘ನೂತನ ಅನುಭವ ಮಂಟಪದ ಶಂಕುಸ್ಥಾಪನಾ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಜಿಲ್ಲೆಯ ಪ್ರಮುಬಸವಕಲ್ಯಾಣ: ಖ ಮಠಾಧೀಶರನ್ನು ಆಹ್ವಾನಿಸದಿರುವುದು ಸರಿಯಲ್ಲ’ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ಹೇಳಿದ್ದಾರೆ.

ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ‘ಬಸವಣ್ಣನವರು ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡಿದ್ದರು. ಆದ್ದರಿಂದ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಲಿಂಗಾಯತ ಮಠಾಧೀಶರನ್ನು ಒಳಗೊಂಡು ಇತರರ ಹೆಸರನ್ನೂ ಹಾಕಿ ಅವರನ್ನು ಗೌರವಿಸಬೇಕಾಗಿತ್ತು. ಇದಲ್ಲದೆ ಈಗಿರುವ ಅನುಭವ ಮಂಟಪದ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿರುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರನ್ನೂ ಆಹ್ವಾನಿಸದಿರುವುದು ದೊಡ್ಡ ಲೋಪ. ಸ್ಥಳೀಯ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಅವರ ಹೆಸರೂ ಆಮಂತ್ರಣ ಪತ್ರದಲ್ಲಿ ಇಲ್ಲ' ಎಂದಿದ್ದಾರೆ.

‘ಯಡಿಯೂರಪ್ಪನವರು ಬರೀ ಉಪ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅನುಭವ ಮಂಟಪದ ಭೂಮಿಪೂಜೆ ನೆರವೇರಿಸುತ್ತಿದ್ದು, ಅವರಿಗೆ ಬಸವಣ್ಣನವರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಅವರು ಅಧಿಕಾರದಲ್ಲಿರುವಾಗಲೇ ಮಂಟಪದ ಕಟ್ಟಡ ಕಾರ್ಯ ಪೂರ್ಣಗೊಳಿಸಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು