ಸೋಮವಾರ, ಮಾರ್ಚ್ 8, 2021
24 °C
ವಾಹನ ತುಕ್ಕು ಹಿಡಿದರೂ ಕೇಳುವವರಿಲ್ಲ

ಬೀದರ್: ದೂಳು ತಿನ್ನುತ್ತಿರುವ ಸ್ವಯಂ ಚಾಲಿತ ಕಸ ಗುಡಿಸುವ ಯಂತ್ರ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಕಸ ವಿಲೇವಾರಿಯ ಸಮಸ್ಯೆ ಮುಂದುವರಿದಿದೆ. ಕೆಲವು ಕಡೆ ಘನತ್ಯಾಜ್ಯ ಸಾಗಿಸಲು ವಾಹನಗಳ ಸಮಸ್ಯೆ ಇದೆ. ಕೆಲವು ಕಡೆ ಪೌರ ಕಾರ್ಮಿಕರ ಕೊರತೆ ಇದೆ. ಸ್ವಯಂ ಚಾಲಿತ ಕಸ ಗುಡಿಸುವ ಯಂತ್ರ ಖರೀದಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ ಎಂದು ಯೋಚಿಸಿ ವಾಹನ ಖರೀದಿಸಿದರೆ ಅದರ ನಿರ್ವಹಣಾ ವೆಚ್ಚವೇ ಅಧಿಕವಾಗಿ ಅಧಿಕಾರಿಗಳ ಲೆಕ್ಕಾಚಾರ ಬುಡಮೇಲಾಗಿದೆ.

ಬೀದರ್‌ ನಗರಸಭೆ 10 ವರ್ಷಗಳ ಹಿಂದೆಯೇ ₹ 80 ಲಕ್ಷ ವೆಚ್ಚದಲ್ಲಿ ಸ್ವಯಂ ಚಾಲಿತ ರಸ್ತೆ ಕಸ ಗುಡಿಸುವ ಯಂತ್ರ ಖರೀದಿಸಿದೆ. ಅದರ ನಿರ್ವಹಣೆ ಹಾಗೂ ಚಾಲಕನ ವೇತನವೇ ನಗರಸಭೆಗೆ ತಲೆನೋವಾಗಿದೆ. ಯಂತ್ರದಲ್ಲಿ ಒಮ್ಮೆ ತಾಂತ್ರಿಕ ದೋಷ ಕಾಣಿಸಿಕೊಂಡರೆ ₹ 4 ಲಕ್ಷದಿಂದ ₹ 8 ಲಕ್ಷ ವರೆಗೆ ಖರ್ಚಾಗುತ್ತಿದೆ. ಹೀಗಾಗಿ ನಗರಸಭೆಯ ಅಧಿಕಾರಿಗಳು ಅದರ ಉಸಾಬರಿಯೇ ಬೇಡವೆಂದು ನಗರಸಭೆ ಆವರಣದ ಒಂದು ಮೂಲೆಯಲ್ಲಿ ವಾಹನ ನಿಲ್ಲಿಸಿದ್ದಾರೆ.

ಹರ್ಷ ಗುಪ್ತ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕಸ ಗುಡಿಸುವ ಯಂತ್ರ ಖರೀದಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಯಂತ್ರ ಕೆಟ್ಟು ನಿಂತಾಗ ಅಂದಿನ ಜಿಲ್ಲಾಧಿಕಾರಿ ಅನುರಾಗ ತಿವಾರಿ ಅವರು ದುರಸ್ತಿಗೆ ಜಿಲ್ಲಾಡಳಿತದಿಂದ ಅನುದಾನ ಒದಗಿಸಿದ್ದರು. ಪ್ರಸ್ತುತ ಡೀಸೆಲ್‌ ಬೆಲೆ ₹ 100 ಸಮೀಪಿಸಿದೆ. ಕಸ ಗುಡಿಸುವ ಯಂತ್ರಕ್ಕೆ ಪ್ರತಿ ಗಂಟೆಗೆ 100 ಲೀಟರ್‌ ಡೀಸೆಲ್‌ ಬೇಕಾಗುತ್ತಿದೆ. ವಾಹನ ಚಾಲಕನ ವೇತನವೇ ₹ 1 ಲಕ್ಷ ಇದೆ. ಆರ್ಥಿಕ ಭಾರ ನಿಭಾಯಿಸಲಾಗದ ಕಾರಣ ಅದನ್ನು ಬಳಸುತ್ತಿಲ್ಲ.

ರಸ್ತೆ ಮೇಲಿನ ಕಸ ತೆರವುಗೊಳಿಸಲು ಹಾಗೂ ದೂಳಿನ ಸಮಸ್ಯೆ ನೀಗಿಸಲು ಯಂತ್ರ ಉಪಯುಕ್ತವಾಗಿದೆ. ಆದರೆ, ನಿರ್ವಹಣಾ ವೆಚ್ಚವೇ ಹೆಚ್ಚಾಗಿರುವ ಕಾರಣ ಅದನ್ನು ಬಳಸುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ನಗರಸಭೆಯ ಆವರಣದಲ್ಲಿಯೇ ನಾಲ್ಕೈದು ವಾಹನಗಳು ಕೆಟ್ಟು ನಿಂತಿವೆ. ಕಂಟೇನರ್‌ಗಳನ್ನು ಸಾಗಿಸುವ ವಾಹನಗಳು ದೂಳು ತಿನ್ನುತ್ತಿವೆ. ಓಲ್ಡ್‌ಸಿಟಿಯ ಉದ್ಯಾನದಲ್ಲಿ ಹಾಳಾದ ಕಂಟೇನರ್‌ಗಳನ್ನು ಒಂದು ಕಡೆ ಜಮಾ ಹಾಕಲಾಗಿದೆ.

ಚಿಟಗುಪ್ಪ ಪುರಸಭೆಯಲ್ಲಿ ಒಂದು ಟ್ರ್ಯಾಕ್ಟರ್, ನಾಲ್ಕು ಆಟೊ ಟಿಪ್ಪರ್ ಹಾಳಾಗಿವೆ. ಸರ್ಕಾರದ ನಿಯಮದಂತೆ 7 ವರ್ಷ ಹಳೆಯದಾದ ವಾಹನಗಳ ಬಳಕೆ ಮಾಡುತ್ತಿಲ್ಲ. ಪ್ರಸ್ತುತ ನಾಲ್ಕು ಡೀಸೆಲ್ ಆಟೊ ಟಿಪ್ಪರ್, ಎರಡು ಬ್ಯಾಟರಿ ಚಾಲಿತ ಟಿಪ್ಪರ್‌ಗಳನ್ನು ಬಳಸಲಾಗುತ್ತಿದೆ,.
ಹಳೆಯದಾದ ವಾಹನಗಳನ್ನು ಪುರಸಭೆ ಆವರಣದಲ್ಲಿ ನಿಲ್ಲಿಸಲಾಗಿದ್ದು, ಎಲ್ಲವೂ ತುಕ್ಕು ಹಿಡಿದಿವೆ. ಅವುಗಳನ್ನು ಬಹಿರಂಗ ಹರಾಜು ಹಾಕಿ ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿಲ್ಲ. ಇದಕ್ಕೆ ಸರ್ಕಾರದ ಆದೇಶ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.

ಹಾಳಾದ ಗೂಡ್ಸ್‌ ಆಟೊಗಳು

ಔರಾದ್ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿಗೆ ಖರೀದಿಸಿದ ಗೂಡ್ಸ್ ಆಟೊಗಳು ಬಳಕೆಯಾಗದೆ ಹಾಳಾಗಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಖರೀದಿಸಿರುವ ನಾಲ್ಕು ಆಟೊಗಳ ಪೈಕಿ ಎರಡು ಗುಜರಿಗೆ ಸೇರಿವೆ. ಇರುವ ನಾಲ್ಕು ಟ್ರ್ಯಾಕ್ಟರ್ ಗಳಲ್ಲಿ ಎರಡು ಪೂರ್ತಿ ಕೆಟ್ಟು ನಿಂತಿವೆ. ಸಕ್ಕಿಂಗ್ ಮಸಿನ್ ಹಾಗೂ ಜೆಸಿಬಿ ಇದ್ದರೂ ಚಾಲನೆ ಮಾಡುವವರಿಲ್ಲದೆ ಹಾಳು ಬಿದ್ದಿವೆ.
‘ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಹೊಸದಾಗಿ ನಾಲ್ಕು ಆಟೊ ಟಿಪ್ಪರ್ ಖರೀದಿಗೆ ಟೆಂಡರ್ ಕರೆಯಲಾಗಿದೆ.
ಹೊಸ ವಾಹನಗಳು ಬಂದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿದೆ’ ಎಂದು ಪಟ್ಟಣ‌ ಪಂಚಾಯಿತಿ ನೈರ್ಮಲ್ಯ ನಿರೀಕ್ಷಕ ಮಹಮ್ಮದ್ ಸಮಿ ತಿಳಿಸಿದ್ದಾರೆ.

ಬಸವಕಲ್ಯಾಣ: ಹಳೆಯ ವಾಹನಗಳು ಹಾಳು

ಬಸವಕಲ್ಯಾಣ ನಗರಸಭೆಯ ಹಳೆಯ ವಾಹನಗಳು ಬಾಲ್ಕುಂದಾ ರಸ್ತೆಯ ಪಿಲ್ಟರ್ ಬೆಡ್ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ಎರಡು ಟ್ರ್ಯಾಕ್ಟರ್, ಕೈಗಾಡಿಗಳು ಫಿಲ್ಟರ್ ಬೆಡ್ ಆವರಣ ಹಾಗೂ ನಾರಾಯಣಪುರ ರಸ್ತೆಯ ನಗರಸಭೆಯ ಹೊಸ ಕಟ್ಟಡದ ಆವರಣದಲ್ಲಿ ಇವೆ. ಇವ್ಯಾವವೂ ಕೆಲಸಕ್ಕೆ ಬರುತ್ತಿಲ್ಲ. ಆದ್ದರಿಂದ ಹಾಗೆಯೇ ಇಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಈಚೆಗೆ ಕಸ ಸಂಗ್ರಹಣೆಗೆ ಆಧುನಿಕ ತಂತ್ರಜ್ಞಾನದ ₹ 35 ಲಕ್ಷದ ಹೊಸ ವಾಹನ ಖರೀದಿಸಲಾಗಿದೆ. ಇದನ್ನೊಳಗೊಂಡು 20 ವಾಹನಗಳು ಇವೆ. ಉಪಯೋಗಕ್ಕೆ ಬರುವ ವಾಹನಗಳನ್ನು ನಗರಸಭೆ ಹೊಸ ಕಟ್ಟಡದ ಆವರಣದಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದೆ.

ಭಾಲ್ಕಿ: ಪುರಸಭೆಯಲ್ಲಿ ಚಾಲ್ತಿಯಲ್ಲಿರುವ 17 ವಾಹನಗಳು

ಭಾಲ್ಕಿ ಪುರಸಭೆಯಲ್ಲಿ ಕಸ ಸಂಗ್ರಹಿಸಲು, ವಿದ್ಯುತ್‌, ನೀರು ಸರಬರಾಜು ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಸಲು ಟಾಟಾ ಏಸ್‌, ಟ್ರ್ಯಾಕ್ಟರ್‌, ಟಿಪ್ಪರ್‌, ಜೆಸಿಬಿ ಒಳಗೊಂಡು ಒಟ್ಟು 20 ವಾಹನಗಳಿವೆ. ಅವುಗಳಲ್ಲಿ ರಿಪೇರಿ ಸೇರಿದಂತೆ ಅನ್ಯ ಕಾರಣದಿಂದ 3 ವಾಹನಗಳು ಬಳಕೆಯಲ್ಲಿಲ್ಲ.

ಹುಮನಾಬಾದ್ ಪುರಸಭೆಯಲ್ಲಿ ಒಟ್ಟು 13 ವಾಹನಗಳು ಇವೆ. ಅದರಲ್ಲಿ ನಾಲ್ಕು ಹೂಸ ಟಾಟಾ ಏಸ್ ಹಾಗೂ ಮೂರು ಬ್ಯಾಟರಿ ಚಾಲಿತ ವಾಹನಗಳು ಈಚೆಗೆ ಪುರಸಭೆಗೆ ಬಂದಿವೆ. ಹೊಸ ವಾಹನಗಳ ನೋಂದಣಿಯಾಗಬೇಕಿದೆ. ಬ್ಯಾಟರಿ ಚಾಲಿತ ವಾಹನಗಳಿಗೆ ತ್ರಿಫೇಸ್ ವಿದ್ಯುತ್ ಬೇಕಾಗುತ್ತದೆ ಮತ್ತು ಘನತ್ಯಾಜ್ಯ ವಿಲೇವಾರಿ ಮಾಡುವುದಕ್ಕೂ ತ್ರಿಫೇಸ್ ವಿದ್ಯುತ್ ಅವಶ್ಯಕತೆ ಇರುವುದರಿಂದಾಗಿ ಕಾರ್ಯ ವಿಳಂಬವಾಗುತ್ತದೆ.

ಬೀದರ್‌ ನಗರಸಭೆಗೆ 24 ವಾಹನಗಳು

ಬೀದರ್‌: ರಾಜ್ಯ ಹಣಕಾಸು ನಿಧಿ (ಎಸ್‌ಎಫ್‌ಸಿ) ಹಾಗೂ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಬೀದರ್‌ ನಗರಸಭೆಗೆ ಒಟ್ಟು 24 ಘನ ತ್ಯಾಜ್ಯ ಸಾಗಿಸುವ ವಾಹನಗಳು ಬಂದಿವೆ.

ನಗರಸಭೆಯ ಪ್ರತಿ ವಾರ್ಡ್‌ಗೆ ಒಂದರಂತೆ 35 ವಾರ್ಡ್‌ಗಳಿಗೆ 35 ವಾಹನಗಳನ್ನು ನಿಯೋಜಿಸಲಾಗಿದೆ. ಹೊಸ ವಾಹನಗಳಿಗೆ ಚಾಲಕರನ್ನು ನಿಯೋಜಿಸುವ ಕಾರ್ಯ ಪ್ರಗತಿಯಲ್ಲಿದೆ. 24 ಹೊಸ ವಾಹನ ಹಾಗೂ 8 ಹಳೆಯ ವಾಹನಗಳನ್ನು ಘನತ್ಯಾಜ್ಯ ವಿಲೇವಾರಿಗೆ ಬಳಸಲಾಗುತ್ತಿದೆ. ಇನ್ನೂ ಕೆಲ ವಾಹನಗಳು ಬರಲಿದ್ದು, ಅವುಗಳನ್ನು ತುರ್ತು ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಮಠ ಹೇಳುತ್ತಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ಮನ್ಮಥಪ್ಪ ಸ್ವಾಮಿ, ಮನೋಜಕುಮಾರ ಹಿರೇಮಠ, ವೀರೇಶ ಮಠಪತಿ, ಬಸವರಾಜ ಪ್ರಭಾ, ಗುಂಡು ಅತಿವಾಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು