ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಶ್ರೀಗಂಧದ ಮರ ಕಳವು, ರೈತರಲ್ಲಿ ಆತಂಕ

ಯನಗುಂದಾ, ಶಿವಾರದಲ್ಲಿ ಕಳ್ಳರ ಬೇಟೆಗೆ ಬಲೆ ಬೀಸಿದ ಅರಣ್ಯ ಇಲಾಖೆ ಅಧಿಕಾರಿಗಳು
Last Updated 12 ಸೆಪ್ಟೆಂಬರ್ 2020, 11:11 IST
ಅಕ್ಷರ ಗಾತ್ರ

ಔರಾದ್: ಶ್ರೀಗಂಧದ ಮರಗಳಿಗೆ ಕಳ್ಳರ ಕಾಟ ಶುರುವಾಗಿದೆ. ರೈತರಲ್ಲಿ ಆತಂಕ ಮನೆ ಮಾಡಿದೆ.

‘ತಾಲ್ಲೂಕಿನ ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳ 100ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಕಳ್ಳರು ಯಂತ್ರದ ಸಹಾಯದಿಂದ ಕಡಿದು ಬೇರೆಡೆ ಸಾಗಿಸುತ್ತಿದ್ದಾರೆ’ ಎಂದು ರೈತ ಬಸಗೊಂಡ ಅವರು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಶ್ರೀಗಂಧ ನಾಟಿ ಮಾಡಿದ್ದೇವೆ. ಹಲವು ವರ್ಷಗಳಿಂದ ಅವುಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತಿದ್ದೇವೆ. ಕಟಾವಿಗೆ ಬಂದಿವೆ. ಕಳ್ಳರ ಪಾಲಾಗುತ್ತಿವೆ. ನಾವು ಹತ್ತಾರು ವರ್ಷಗಳಿಂದ ಬೆವರು ಸುರಿಸಿದ್ದು ವ್ಯರ್ಥವಾಗಿದೆ’ ಎಂದು ರೈತ ಧನರಾಜ ಪಾಟೀಲ ದೂರಿದ್ದಾರೆ.

‘ಶ್ರೀಗಂಧದ ಮರಗಳು ಕಳವಾದ ಕುರಿತು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ. ಪ್ರಯೋಜನವಾಗಿಲ್ಲ. ಆರೋಪಿಗಳನ್ನು ಹಿಡಿದು ನಮ್ಮ ಶ್ರೀಗಂಧ ನಮಗೆ ವಾಪಸ್ ಕೊಡಿಸಬೇಕು’ ಎಂದು ಯನಗುಂದಾ ರೈತರು ಆಗ್ರಹಿಸಿದ್ದಾರೆ.

‘ಯನಗುಂದಾ ಗ್ರಾಮದಲ್ಲಿ ಶ್ರೀಗಂಧದ ಮರಗಳು ಕಳವು ಆಗಿರುವುದು ನಿಜ. ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ. ಯನಗುಂದಾ ಶಿವಾರದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ತಿಳಿಸಿದ್ದಾರೆ.

‘ಔರಾದ್ ಪಟ್ಟಣದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಎರಡು ಕ್ವಿಂಟಲ್ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ತಾಲ್ಲೂಕಿನ ವಿವಿಧೆಡೆ ನಡೆದ ಶ್ರೀಗಂಧ ಕಳವು ಪ್ರಕರಣಗಳನ್ನು ಪತ್ತೆ ಮಾಡಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT