ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿರೋಂಜಿ’ಗೆ ಭೌಗೋಳಿಕ ಮಾನ್ಯತೆಗೆ ಚಿಂತನೆ: ಅನಂತ ಹೆಗಡೆ ಅಶೀಸರ್

ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ಹೇಳಿಕೆ
Last Updated 8 ಮಾರ್ಚ್ 2021, 15:38 IST
ಅಕ್ಷರ ಗಾತ್ರ

ಬೀದರ್: ಬೀದರ್‌ ಜಿಲ್ಲೆಯಲ್ಲಿ ಮಾತ್ರ ಬೆಳೆಯುವ ‘ಚಿರೋಂಜಿ’ ಕಾಡು ಬೀಜವನ್ನು ಜೀವ ವೈವಿಧ್ಯದ ಅಡಿಯಲ್ಲಿ ತರಲು
ಜೀವ ವೈವಿಧ್ಯ ಮಂಡಳಿ ಸಭೆಯಲ್ಲಿ ಸಮಾಲೋಚನೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗುವುದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ತಿಳಿಸಿದರು.

‘ಚಿರೋಂಜಿ’ ಅರಣ್ಯ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತದೆ. ಅಡುಗೆಗೆ ಬಳಸಲಾಗುವ ಇದರ ಪ್ರತಿ ಕೆ.ಜಿಗೆ ₹850 ಇದೆ. ‌ಇದು ಎಲ್ಲ ಕಡೆಗೂ ಸಿಗುವುದಿಲ್ಲ. ಇದಕ್ಕೆ ಭೌಗೋಳಿಕ ಮಾನ್ಯತೆ ಕೊಡಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು ತಜ್ಞರಿಂದ ಇನ್ನಷ್ಟು ಮಾಹಿತಿ ಪಡೆಯಲಾಗುವುದು’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಗರ, ಪಟ್ಟಣಗಳಲ್ಲಿರುವ ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ ಹಾಗೂ ಬಯೋಗ್ಯಾಸ್‌ ತಯಾರಿಸುವ ಕುರಿತು ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ 16 ಸಾವಿರ ಹೆಕ್ಟೇರ್‌ ರಕ್ಷಿತ ಅರಣ್ಯ ಪ್ರದೇಶ ಇದೆ. ಇದರ ರಕ್ಷಣೆಯಾಗಬೇಕು. ಅತಿಕ್ರಮಣ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ತಡೆಯಬೇಕು. ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಸಹ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮೇ 22ರಿಂದ 15 ದಿನಗಳ ವರೆಗೆ ಜೀವ ವೈವಿಧ್ಯ ದಿನ ಆಚರಿಸಲಾಗುವುದು. ಜೀವ ವೈವಿಧ್ಯ ಸಮಿತಿಗಳನ್ನು ಪಂಚಾಯಿತಿ ಮಟ್ಟದಲ್ಲಿ ರಚಿಸಿ ಕೆರೆ, ಹಳ್ಳಗಳ ರಕ್ಷಣೆಗೆ ಒತ್ತು ಕೊಡಲಾಗುವುದು’ ಎಂದು ತಿಳಿಸಿದರು.

‘ಜೀವ ವೈವಿಧ್ಯದ ಅಡಿಯಲ್ಲಿ ಎಂಟು ತಾಣಗಳನ್ನು ಗುರುತಿಸಿದ್ದೇವೆ. ಬೀದರ್‌ನ ಪಾಪನಾಶ ಕೆರೆ ರಕ್ಷಣೆಗೆ ಒತ್ತು ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಬೀದರ್‌ ತಾಲ್ಲೂಕಿನ ಬೆಳ್ಳೂರು ಸಮೀಪದ ಹುಲ್ಲುಗಾವಲು ಪ್ರದೇಶವನ್ನು ಕೈಗಾರಿಕೆಯ ಅಭಿವೃದ್ಧಿಗೆ ನೀಡಲಾಗಿದೆ. ಕಂಗನಕೋಟ ಗ್ರಾಮದ ಬಳಿ 400 ಎಕರೆ ಪ್ರದೇಶದಲ್ಲಿ ಕೃಷ್ಣಮೃಗಗಳ ಸಂರಕ್ಷಣೆಗೆ ಮೀಸಲಿಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಾಸೀಮ್, ಡಿಎಫ್‌ಒ ಶಿವಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT