ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವವಿದ್ದ ಟ್ಯಾಂಕ್ ನೀರು ಸೇವನೆ: ಗ್ರಾಮಸ್ಥರಲ್ಲಿ ಆತಂಕ

Published 29 ಮಾರ್ಚ್ 2024, 12:51 IST
Last Updated 29 ಮಾರ್ಚ್ 2024, 12:51 IST
ಅಕ್ಷರ ಗಾತ್ರ

ಬೀದರ್: ತವರಿಗೆ ಹೋದ ಹೆಂಡತಿ ಮರಳಿ ಬಾರದ್ದರಿಂದ ಮನ ನೊಂದ ಯುವಕನೊಬ್ಬ ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜು ಶೈಲೇಶ್ (27) ಮೃತ ಯುವಕ. ನಲ್ಲಿಯಲ್ಲಿ ಕಲುಷಿತ ನೀರು ಬರುತ್ತಿದ್ದರಿಂದ ಅನುಮಾನಗೊಂಡ ಗ್ರಾಮದ ಜನ ಪಂಚಾಯಿತಿಗೆ ಸುದ್ದಿ ಮುಟ್ಟಿಸಿದ್ದಾರೆ. ಪಂಚಾಯಿತಿಯವರು ವಾಟರ್ ಮೆನ್‍ಗೆ ಕಳುಹಿಸಿ ತಪಾಸಣೆ ನಡೆಸಿದಾಗ ನೀರಿನ ಟ್ಯಾಂಕ್‍ನಲ್ಲಿ ಯುವಕನ ಶವ ಪತ್ತೆಯಾಗಿದೆ. ಮೆಟ್ಟಿಲುಗಳ ಮೂಲಕ ಟ್ಯಾಂಕ್ ಮೇಲೆ ಏರಿದ ಯುವಕ ಚಪ್ಪಲಿ ಹಾಗೂ ಬ್ಯಾಗ್ ಬಿಟ್ಟು ಟ್ಯಾಂಕ್‍ನೊಳಗಿನ ನೀರಿಗೆ ಜಿಗಿದಿದ್ದಾನೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಶುಕ್ರವಾರ ಟ್ಯಾಂಕ್‍ನಿಂದ ಯುವಕನ ಶವ ಹೊರ ತೆಗೆಯಲಾಯಿತು.

ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟ ರಾಜು ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ತಾಯಿ ನರಸಮ್ಮ ಈ ಕುರಿತು ದೂರು ನೀಡಿದ್ದಾರೆ ಎಂದು ಜನವಾಡ ಠಾಣೆ ಪಿಎಸ್‍ಐ ಹುಲೆಪ್ಪ ಗೌಡಗೊಂಡ ತಿಳಿಸಿದ್ದಾರೆ.

ರಾಜುಗೆ ಮದುವೆ ಆಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಆರು ತಿಂಗಳ ಹಿಂದೆ ತವರಿಗೆ ಹೋಗಿದ್ದ ಪತ್ನಿ ವಾಪಸ್ ಬಂದಿರಲಿಲ್ಲ. ಇದರಿಂದ ಮನ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಮೂರು ದಿನ ಶವವಿದ್ದ ಟ್ಯಾಂಕ್‍ನ ನೀರು ಕುಡಿದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

***

ಟ್ಯಾಂಕ್ ಬಳಿ ಜಮಾಯಿಸಿದ ಜನ

ಶವ ಪತ್ತೆಯಾದ ಗ್ರಾಮಕ್ಕೆ ನೀರು ಪೂರೈಸುವ ಟ್ಯಾಂಕ್ ಬಳಿ ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಅನೇಕರು ಟ್ಯಾಂಕ್‍ನಿಂದ ಶವ ಕೆಳಗಿಳಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ನೆರವಾದರು.

***

ಕಲುಷಿತ ನೀರಿನಿಂದ ಪ್ರಕರಣ ಬೆಳಕಿಗೆ

ಕಲುಷಿತಗೊಂಡ ನೀರಿನಿಂದ ಯುವಕ ಟ್ಯಾಂಕ್‍ನೊಳಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ನಲ್ಲಿಯಲ್ಲಿ ಕಲುಷಿತ ನೀರು ಬರುತ್ತಿತ್ತು. ಅದು ವಾಸನೆಯಿಂದ ಸಹ ಕೂಡಿತ್ತು. ಗ್ರಾಮಸ್ಥರು ವಿಷಯ ಪಂಚಾಯಿತಿಯವರ ಗಮನಕ್ಕೆ ತಂದಾಗ ಟ್ಯಾಂಕ್‍ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನೀರು ಕುಡಿದವರಿಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಕಾಡುತ್ತಿದೆ ಎಂದು ಗ್ರಾಮದ ಚೇತನ್ ಸೋರಳ್ಳಿ ತಿಳಿಸಿದರು.

***

ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ

ಸಾರ್ವಜನಿಕರು ಯುವಕ ಆತ್ಮಹತ್ಯೆ ಮಾಡಿಕೊಂಡ ನೀರಿನ ಟ್ಯಾಂಕ್‍ನ ನೀರು ಸೇವಿಸಿರುವುದರಿಂದ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಶಿಬಿರ ಆರಂಭಿಸಿದೆ.

ವೈದ್ಯರು ಸೇರಿದಂತೆ ಕೇಂದ್ರಕ್ಕೆ 12 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾರಿಗಾದರೂ ಅನಾರೋಗ್ಯ ಕಂಡು ಬಂದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ತಿಳಿಸಿದ್ದಾರೆ.

ಟ್ಯಾಂಕ್‍ನಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಸಂಗ್ರಹಿಸಿದ ಟ್ಯಾಂಕ್ ನೀರು ಬಳಸದಂತೆ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಪಂಚಾಯಿತಿಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

***

ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ

ಜನರಿಗೆ ಶುದ್ಧ ಕುಡಿಯುವ ನೀರು ಕೊಡುವುದು ಸರ್ಕಾರದ ಆದ್ಯತೆ. ನೀರು ಪೂರೈಕೆ ವಿಚಾರದಲ್ಲಿ ಲೋಪ ಆಗಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಘಟನೆ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸುವೆ. ಕುಡಿಯುವ ನೀರು ಪೂರೈಕೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT